Advertisement

ಕಸದಿಂದ ವಿದ್ಯುತ್‌ ಉತ್ಪಾದನೆ ಘಟಕ ನಿರ್ಮಿಸಲು ಮುಂದಾದ ಪಾಲಿಕೆ

11:46 AM Aug 03, 2017 | Team Udayavani |

ಬೆಂಗಳೂರು: ಬಿಬಿಎಂಪಿಯ ತ್ಯಾಜ್ಯ ಸಂಸ್ಕರಣಾ ಘಟಕಗಳ ಸಮಪರ್ಕ ನಿರ್ವಹಣೆಗೆ ಅಡ್ಡಿಯಾಗಿರುವ ರೆಫ್ಯೂಸ್‌ ಡಿರೈವ್‌ ಫ‌ುಯಲ್‌ (ಆರ್‌ಡಿಎಫ್) ನಿಂದ ವಿದ್ಯುತ್‌ ಉತ್ಪಾದಿಸಲು ಬಿಬಿಎಂಪಿ ಮುಂದಾಗಿದ್ದು, ಇದಕ್ಕಾಗಿ ಹೊಸ ಘಟಕ ಸ್ಥಾಪನೆಗೆ ಪಾಲಿಕೆ ಯೋಜನೆ ರೂಪಿಸಿದೆ. 

Advertisement

ಪಾಲಿಕೆ ತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ಉತ್ಪತ್ತಿಯಾಗುವ ನೂರಾರು ಟನ್‌ ಆರ್‌ಡಿಎಫ್ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ತ್ಯಾಜ್ಯ ಘಟಕಗಳಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದರೊಂದಿಗೆ ಮಳೆಗಾಲದಲ್ಲಿ ಘಟಕಗಳ ಹೊರಭಾಗದಲ್ಲಿ ಶೇಖರಣೆ ಮಾಡಿರುವ ಆರ್‌ಡಿಎಫ್ನಿಂದ ಲಿಚೆಟ್‌ ನೀರು ಸೃಷ್ಟಿಯಾಗಿ ಸಮಸ್ಯೆಗಳು ಉದ್ಭವಿಸುತ್ತಿರುವುದರಿಂದ ಸ್ಥಳೀಯರು ಘಟಕ ಮುಚ್ಚುವಂತೆ ಹೋರಾಟ ನಡೆಸುತ್ತಿದ್ದಾರೆ. 

ಈಗಾಗಲೇ ಘಟಕಗಳಲ್ಲಿನ ಆರ್‌ಡಿಎಫ್ ವಿಲೇವಾರಿಗೆ ಪಾಲಿಕೆಯಿಂದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ನೆದರ್ಲೆಂಡ್‌ ಮೂಲದ ಸಂಸ್ಥೆಯೊಂದು ಆರ್‌ಡಿಎಫ್ ಮೂಲಕ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪಿಸುವ ಪ್ರಸ್ತಾವನ್ನು ಪಾಲಿಕೆಯ ಮುಂದಿಟ್ಟಿದ್ದು, ಯೋಜನೆ ಜಾರಿಗೊಳಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. 

ಆರ್‌ಡಿಎಫ್ನಿಂದ ವಿದ್ಯುತ್‌ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ ಅಂದಾಜು 200 ಕೋಟಿ ರೂ. ವೆಚ್ಚವಾಗಲಿದ್ದು, ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಸಂಸ್ಥೆ ತಿಳಿಸಿದೆ. ಆದರೆ, ಘಟಕ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ನೀಡುವಂತೆ ಸಂಸ್ಥೆ ಪಾಲಿಕೆಯನ್ನು ಕೋರಿದ್ದು, ಆ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಭಾಗದಲ್ಲಿ ಜಾಗ ನೀಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. 

ಘಟಕ ಸ್ಥಾಪನೆ ಏಕೆ?
ಪಾಲಿಕೆಯ ತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಗೊಬ್ಬರ ತಯಾರಿ ಪ್ರಕ್ರಿಯೆಯಲ್ಲಿ ಗೊಬ್ಬರವಾಗದೆ ಉಳಿಯುವ ಅನುಪಯುಕ್ತ ವಸ್ತುವನ್ನು ಆರ್‌ಡಿಎಫ್ ಎನ್ನುತ್ತಾರೆ. ಇದನ್ನು ಪ್ರಮುಖವಾಗಿ ಸಿಮೆಂಟ್‌ ತಯಾರಿಕೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತಿದ್ದು, ನಗರದ ಸಮೀಪ ಸಿಮೆಂಟ್‌ ಕಾರ್ಖಾನೆಗಳಿಲ್ಲದ ಕಾರಣ, ಆಂಧ್ರ ಪ್ರದೇಶದ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತಿದೆ. 

Advertisement

ಇತ್ತೀಚೆಗೆ ಕಾರ್ಖಾನೆಗಳು ಆರ್‌ಡಿಎಫ್ ಸಾಗಾಣಿಕೆ ವೆಚ್ಚವನ್ನು ಭರಿಸುವಂತೆ ಪಾಲಿಕೆಯನ್ನು ಕೋರಿದ್ದು, ಪಾಲಿಕೆಯ ಅಧಿಕಾರಿಗಳು ಅದಕ್ಕೆ ನಿರಾಕರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಆರ್‌ಡಿಎಫ್ ತೆಗೆದುಕೊಂಡು ಹೋಗುವುದನ್ನು ಕಾರ್ಖಾನೆಗಳು ನಿಲ್ಲಿಸಿವೆ. ಇದರಿಂದ ನೂರಾರು ಟನ್‌ ಆರ್‌ಡಿಎಫ್ ಉಳಿದು ಸಂಸ್ಕರಣೆಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್‌ ಘಟಕ ಸ್ಥಾಪನೆಗೆ ಪಾಲಿಕೆ ಮುಂದಾಗಿದೆ. 

500 ಟನ್‌ ಸಾಮರ್ಥಯದ ಘಟಕ
ನೆದರ್‌ಲ್ಯಾಂಡ್‌ ಸಂಸ್ಥೆ ನಿರ್ಮಿಸಲು ಉದ್ದೇಶಿಸಿರುವ ವಿದ್ಯುತ್‌ ಉತ್ಪಾದನೆ ಘಟಕವು ನಿತ್ಯ 500 ಟನ್‌ ಆರ್‌ಡಿಎಫ್ನ್ನು ವಿದ್ಯುತ್‌ ಆಗಿ ಪರಿವರ್ತಿಸಲಿದೆ. ಬಿಬಿಎಂಪಿ ತ್ಯಾಜ್ಯ ವಿಂಗಡಣೆ ಘಟಕಗಳಿಂದ ನಿತ್ಯ ಒಂದು ಟನ್‌ನಷ್ಟು ಆರ್‌ಡಿಎಫ್ ತ್ಯಾಜ್ಯ ದೊರೆಯುತ್ತಿದ್ದು, ಪಾಲಿಕೆಯ ತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ನೂರಾರು ಟನ್‌ಗಳು ಸೃಷ್ಟಿಯಾಗುತ್ತಿದೆ. 

ವಿದ್ಯುತ್‌ ಖರೀದಿ ಒಪ್ಪಂದ
ಘಟಕ ನಿರ್ಮಾಣ ವೆಚ್ಚವನ್ನು ನೆದರ್‌ಲ್ಯಾಂಡ್‌ ಸಂಸ್ಥೆಯೇ ಸಂಪೂರ್ಣವಾಗಿ ಭರಿಸಲಿದ್ದು, ಘಟಕದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಖರೀದಿಸುವ ಒಪ್ಪಂದವನ್ನು ಪಾಲಿಕೆ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಿದೆ. ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ನಿಗದಿಪಡಿಸಿದಂತೆ ಸಂಸ್ಥೆಗೆ ಬಿಬಿಎಂಪಿ ಪ್ರತಿ ಯುನಿಟ್‌ಗೆ 7.09 ರೂ. ನೀಡಿ ವಿದ್ಯುತ್‌ ಖರೀದಿಸಲಿದೆ.

ಪಾಲಿಕೆಯ ಘಟಕಗಳಲ್ಲಿರುವ ಆರ್‌ಡಿಎಫ್ ಸಾಗಾಣೆ ವೆಚ್ಚವನ್ನು ಪಾಲಿಕೆಯಿಂದ ಭರಿಸುವಂತೆ ಸಿಮೆಂಟ್‌ ಕಾರ್ಖಾನೆಗಳು ತಿಳಿಸಿವೆ. ಆದರೆ, ಇದು ಪಾಲಿಕೆಗೆ ಹೊರೆಯಾಗುವುದರಿಂದ ಸದ್ಯ ಘಟಕಗಳಲ್ಲಿರುವ ಆರ್‌ಡಿಎಫ್ನ್ನು ಗುಂಡಿ ತೋಡಿ ಸಂರಕ್ಷಣೆ ಮಾಡಲಾಗುತ್ತಿದೆ. ನೆದರ್ಲೆಂಡ್‌ ಸಂಸ್ಥೆಯೊಂದು ಆರ್‌ಡಿಎಫ್ನಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪಿಸುವ ಪ್ರಸಾವವನ್ನು ಸಲ್ಲಿಸಿದ್ದು, ಇದಕ್ಕಾಗಿ ಯಲಹಂಕ ಭಾಗದಲ್ಲಿ ಜಾಗ ಗುರುತಿಸಲಾಗುವುದು. 
-ಸಫ್ರಾಜ್‌ ಖಾನ್‌, ಘನತ್ಯಾಜ್ಯ ನಿರ್ವಹಣೆ ಮತ್ತು ಆರೋಗ್ಯ ವಿಭಾಗದ ಜಂಟಿ ಆಯುಕ್ತ

* „ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next