Advertisement

ಕೇರಳದ ಕೋಳಿ ತ್ಯಾಜ್ಯ ಕೋಟೆಗೆ ಬಾರದಂತೆ ತಡೆಯಿರಿ

09:38 PM Mar 15, 2020 | Lakshmi GovindaRaj |

ಎಚ್‌.ಡಿ.ಕೋಟೆ: ತಾಲೂಕು ಗಡಿಭಾಗವಾದ ಕೇರಳ ರಾಜ್ಯದಿಂದ ತಾಲೂಕಿನ ಶುಂಠಿ ಬೇಸಾಯಕ್ಕಾಗಿ ಕೋಳಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಬಳಸಲಾಗುತ್ತಿದೆ. ಈಗಾಗಲೇ ಕೇರಳದಲ್ಲಿ 7 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಹಕ್ಕಿಜ್ವರ ಕೂಡ ಕಾಣಿಸಿಕೊಂಡಿದೆ. ಹೀಗಾಗಿ ಕೇರಳ ಗಡಿಭಾಗದ ಬಾವಲಿಯಲ್ಲಿ ಸೂಕ್ತ ಸಿಬ್ಬಂದಿ ಗಳನ್ನು ನಿಯೋಜಿಸಿ ಕೇರಳದಿಂದ ಕೋಳಿ ತ್ಯಾಜ್ಯ ತಾಲೂಕಿಗೆ ಬಾರದಂತೆ ಎಚ್ಚರಿಕೆವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಅನಿಲ್‌ ಚಿಕ್ಕಮಾದು ಸೂಚಿಸಿದರು.

Advertisement

ಪಟ್ಟಣದ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ನಡೆದ ಕೊರೊನಾ ಸೋಂಕು ನಿಯಂತ್ರಣ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಕೇಂದ್ರ ಸ್ಥಾನದ ಮಂಗಳವಾರದ ಸಂತೆ ಸೇರಿದಂತೆ ತಾಲೂಕಿನ ವಾರದ ಸಂತೆಗಳನ್ನು ರದ್ದುಗೊಳಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಜಾತ್ರೆಗಳು, ಉತ್ಸವ ಹಬ್ಬಗಳನ್ನು ಆಚರಿಸದಿದ್ದರೆ ಒಳಿತು. ರೋಗ ಬಂದಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಬದಲು ರೋಗವೇ ಬಾರದಂತೆ ಎಚ್ಚರವಹಿಸಬೇಕು ಎಂದರು.

ಸೊಂಕು ಹರಡದಂತೆ ನಾಗರಿಕರು ಎಚ್ಚರವಹಿಸಬೇಕು. 100ಕ್ಕಿಂತ ಹೆಚ್ಚಿನ ಜನ ಒಂದೆಡೆ ಸೇರಬಾರದು. ಸಂಪ್ರದಾಯದ ಹೆಸರಿನಲ್ಲಿ ಜಾತ್ರೆ ಹಬ್ಬಹರಿದಿನಗಳ ಆಚರಣೆ ವೇಳೆ ಹೆಚ್ಚಿನ ಜನ ಜಮಾಯಿಸುವುದು ತರವಲ್ಲ. ವಾಹನಗಳ ಚಾಲಕರು ಸುರಕ್ಷತಾ ದೃಷ್ಟಿಯಿಂದ ಮಾಸ್ಕ್ಗಳನ್ನು ಬಳಸಬೇಕು. ಹಸ್ತಲಾಘವ ಮಾಡುವುದನ್ನು ಬಿಡಬೇಕು, ಕೆಮ್ಮುವಾಗ ಸೀನುವಾಗ ಕರವಸ್ತ್ರಗಳನ್ನು ಬಳಸಬೇಕು, ಶುದ್ಧª ಕುಡಿಯುವ ನೀರು ಸೇವಿಸಬೇಕು. ಬಿಸಿ ಆಹಾರ ಸೇವಿಸಬೇಕು. ಆಗಾಗ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು. ಸೋಂಕು ತಗುಲಿದ ವ್ಯಕ್ತಿಯಿಂದ ಅಂತರ ಕಾಯ್ದುಕೊಂಡು ಕೆಮ್ಮವಾಗ ಸೀನುವಾಗ ಕರವಸ್ತ್ರ ಬಳಸ‌ಬೇಕು ಎಂದು ಸಲಹೆ ನೀಡಿದರು.

ರೆಸಾರ್ಟ್‌ ಮುಚ್ಚಿಸುವ ಚಿಂತನೆ: ತಾಲೂಕಿನಲ್ಲಿ ಹಲವು ರೆಸಾರ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ವಿದೇಶದಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಹೊರಗಿನಿಂದ ಆಗಮಿಸುವ ಪ್ರವಾಸಿಗರ ಪ್ರವೇಶ ನಿಷೇಧಿಸಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬರುವ ತನಕ ತಾಲೂಕಿನ ರೆಸಾರ್ಟ್‌ಗಳನ್ನು ಬಂದ್‌ ಮಾಡಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಲಾಗುವುದು. ಇದಕ್ಕೆ ರೆಸಾರ್ಟ್‌ಗಳ ಮಾಲೀಕರು ಸಹಕರಿಸಬೇಕು ಎಂ ಕೋರಿದರು.

ಅರಿವು ಮೂಡಿಸಿ: ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಪಿಡಿಒಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಸ್ಥಳೀಯ ಸಂಸ್ಥೆಗಳು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್‌ ಮಾತನಾಡಿ, ಕೊರೊನಾ ಸೊಂಕು ತಗುಲಿದ ವ್ಯಕ್ತಿ ಸಾವು ಖಚಿತ ಅಂದುಕೊಳ್ಳುವುದು ಬೇಡ. ಮುಂಜಾಗ್ರತಾ ಕ್ರಮಗಳು ಅನುಸರಿಸಬೇಕು ಎಂದು ತಿಳಿಸಿದರು.

Advertisement

ಸಭೆಯಲ್ಲಿ ತಹಶೀಲ್ದಾರ್‌ ಆರ್‌.ಮಂಜುನಾಥ್‌, ಪುರಸಭಾ ಸದಸ್ಯ ರಾಜು, ಇಒ ರಾಮಲಿಂಗಯ್ಯ, ಬಿಇಒ ಎಸ್‌.ರೇವಣ್ಣ, ಸಮಾಜ ಕಲ್ಯಾಣಾಧಿಕಾರಿ ಗೋಪಾಲಕೃಷ್ಣಮೂರ್ತಿ, ಗಿರಿಜನ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ, ಸರ್ಕಲ್‌ ಇನ್ಸ್‌ಪೆಕ್ಟರ್‌ ಪುಟ್ಟಸ್ವಾಮಿ, ಸಿಡಿಪಿಒ ಆಶಾ, ಪರಶಿವಮೂರ್ತಿ ಸೇರಿದಂತೆ ರೆಸಾರ್ಟ್‌ಗಳ ಮಾಲೀಕರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next