Advertisement

ರಸ್ತೆ ತಡೆದು ರಿಮ್ಸ್‌ ಸಿಬ್ಬಂದಿ ಪ್ರತಿಭಟನೆ

04:04 PM Sep 02, 2017 | Team Udayavani |

ರಾಯಚೂರು: ನಗರದ ರಿಮ್ಸ್‌ನಲ್ಲಿ ಆಡಳಿತ ಮಂಡಳಿ ನಿಯಮ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಟಿಯುಸಿಐ ನೇತೃತ್ವದಲ್ಲಿ ಸಿಬ್ಬಂದಿ ಶುಕ್ರವಾರ ಸಂಚಾರ ತಡೆದು ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

Advertisement

ನಗರದ ಬಸವೇಶ್ವರ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟನೆ ಶುರು ಮಾಡಿದ ಕಾರ್ಯಕರ್ತರು ರಿಮ್ಸ್‌ ನಿರ್ದೇಶಕಿ ಡಾ| ಕವಿತಾ ಪಾಟೀಲ , ವೈದ್ಯಕೀಯ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಸ್ಥೆ ನಿರ್ದೇಶಕಿ ನಿಯಮಬಾಹಿರವಾಗಿ ಆಡಳಿತ ನಡೆಸುತ್ತಿದ್ದಾರೆ. ವೇತನ ಹೆಚ್ಚಿಸುವಂತೆ ಕೇಳಿದ್ದಕ್ಕೆ 36 ನರ್ಸಿಂಗ್‌
ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೇ, ನಿರ್ದೇಶಕ ಹುದ್ದೆಯಲ್ಲಿ ಮುಂದುವರಿಯಲು ಡಾ| ಕವಿತಾ
ಪಾಟೀಲ ಅವರು ಅನರ್ಹರಾಗಿದ್ದು, ಕೂಡಲೇ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.

ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಐದು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಯಾರೊಬ್ಬರು ಸ್ಪಂದಿಸಿಲ್ಲ. ಹೀಗಾಗಿ ಟಿಯುಸಿಐ ರಾಜ್ಯಾಧ್ಯಕ್ಷ ಆರ್‌. ಮಾನಸಯ್ಯ ಅವರ ನೇತೃತ್ವದಲ್ಲಿ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆದರು. ವಜಾಗೊಳಿಸಿರುವ 36 ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಬೇಕು. ಬೇಡಿಕೆಯನ್ವಯ ವೇತನ ಹೆಚ್ಚಿಸಬೇಕು. ಸಿ ಮತ್ತು ಡಿ ಗ್ರೂಪ್‌ ಕಾರ್ಮಿಕರಿಗೆ ನಿಗದಿತ ವೇತನ ಪಾವತಿಸಬೇಕು.ಭ್ರಷ್ಟ ಹಾಗೂ ಕಾರ್ಮಿಕ ವಿರೋಧಿ ರಿಮ್ಸ್‌ ಪ್ರಭಾರ ಡೀನ್‌
ಡಾ| ಕವಿತಾ ಪಾಟೀಲ ಅವರನ್ನು ಅಮಾನತುಗೊಳಿಸಬೇಕು.ಸೋಲಾರ್‌ ದೀಪಗಳ ಅಳವಡಿಕೆಯಲ್ಲಿ 1.27 ಕೋಟಿ
ರೂ. ದುರ್ಬಳಕೆಯಾಗಿದ್ದು, ಈ ಕೂಡಲೇ ಅದನ್ನು ತನಿಖೆಗೊಳಪಡಿಸಬೇಕು. ರಿಮ್ಸ್‌ನ ಎಸ್‌ಸಿ ಅನುದಾನದಡಿ
ಎಂಟು ಕೋಟಿ ರೂ. ದುರ್ಬಳಕೆ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಟಿಯುಸಿಐ ರಾಜ್ಯಾಧ್ಯಕ್ಷ ಆರ್‌.ಮಾನಸಯ್ಯ, ಉಪಾಧ್ಯಕ್ಷ ಚಿನ್ನಪ್ಪ ಕೊಟ್ರಿಕಿ, ಜಿಲ್ಲಾಧ್ಯಕ್ಷ ಜಿ. ಅಮರೇಶ, ಮುಖಂಡರಾದ ಅಡವಿರಾವ, ಆರ್‌. ಹುಚ್ಚರೆಡ್ಡಿ, ವಿಜಯಕುಮಾರ, ಶ್ರವಣಕುಮಾರ, ಶಿವಶರಣಪ್ಪ, ಸುನಂದಾ ಕುಮಾರ, ಸುಹಾಸಿನಿ, ಪ್ರತಿಭಾ ಸೇರಿ ಸಂಘಟನೆ ಸದಸ್ಯರು, ಕಾರ್ಮಿಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next