Advertisement

ಜನಶತಾಬ್ಧಿ ರೈಲಿಗೆ ತರೀಕೆರೆಯಲ್ಲಿ ನಿಲುಗಡೆ ಕೊಡಿ

10:26 AM Feb 04, 2019 | Team Udayavani |

ತರೀಕೆರೆ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ಓಡಾಡುವ ಜನ ಶತಾಬ್ಧಿ ರೈಲನ್ನು ನಿಲುಗಡೆ ಮಾಡದಿರುವುದನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ವಿವಿಧ ಜನಪರ ಸಂಘಟನೆಗಳು ಮಾಜಿ ಶಾಸಕರ ನೇತೃತ್ವದಲ್ಲಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಸ್‌.ಎಂ.ನಾಗರಾಜ್‌, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತರೀಕೆರೆ ತಾಲೂಕಿನ ಬಗ್ಗೆ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ. ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ಅಮೃತಾಪುರ, ಕಸಬಾ ಹೋಬಳಿ ಮತ್ತು ಪಟ್ಟಣದ ಜನತೆಗೆ ರೈಲಿನ ಅಗತ್ಯವಿದೆ. ಸರಕಾರ ಹೊಸದಾಗಿ ಜನಶತಾಬ್ಧಿ ರೈಲನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಾರಂಭಿಸಿದೆ. ಆದರೆ ರೈಲ್ವೆ ಇಲಾಖೆ ಶಿವಮೊಗ್ಗ ಮತ್ತು ಭದ್ರಾವತಿ ರೈಲು ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಮಾಡಿ ನಂತರ ಬರುವ ತರೀಕೆರೆ ರೈಲು ನಿಲ್ದಾಣದಲ್ಲಿ ನಿಲುಗಡೆ ಕೊಟ್ಟಿಲ್ಲ ಎಂದರು.

ನಾಳೆಯಿಂದ ಬೆಂಗಳೂರಿಗೆ ಸಂಚರಿಸಲಿರುವ ರೈಲನ್ನು ಮೊದಲ ಆದ್ಯತೆಯಲ್ಲಿಯೇ ಪಟ್ಟಣದ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕಿತ್ತು. ಬೀರೂರು ಮತ್ತು ಕಡೂರು ರೈಲ್ವೆ ನಿಲ್ದಾಣದಿಂದ ಸಾಕಷ್ಟು ರೈಲುಗಳ ಸಂಚಾರವಿದೆ. ರೈಲ್ವೆ ಇಲಾಖೆ ಮೊದಲಿನಿಂದಲೂ ಪಟ್ಟಣದ ರೈಲ್ವೆ ನಿಲ್ದಾಣದ ಬಗ್ಗೆ ಕಾಳಜಿವಹಿಸದೆ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಮಹಿಳೆಯರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಮಳೆಗಾಲದಲ್ಲಿ ರೈಲು ನಿಲ್ದಾಣಕ್ಕೆ ಬರುವುದೇ ದುಸ್ತರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೂಬ್ಬ ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್‌ ಮಾತನಾಡಿ, ಈ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಹೊಸದಾಗಿ ಸಂಚರಿಸುತ್ತಿರುವ ರೈಲು ನಿಲುಗಡೆಯಾಗುತ್ತಿಲ್ಲ, ಅವರು ಬೆಂಗಳೂರು ಮತ್ತು ದೆಹಲಿಯಲ್ಲಿ ರಾಜಕೀಯದಲ್ಲಿ ನಿರತರಾಗಿದ್ದು, ಕ್ಷೇತ್ರದ ಜನತೆಯನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

Advertisement

ಕೆಪಿಸಿಸಿ ಸದಸ್ಯ ಟಿ.ವಿ.ಶಿವಶಂಕರಪ್ಪ, ಹಿರಿಯ ಮುಖಂಡ ಟಿ.ಎನ್‌.ಗೋಪಿನಾಥ್‌, ವಿವಿಧ ಸಂಘಟನೆ ಮುಖಂಡರು ಮಾತನಾಡಿದರು.

ಮಹಿಳಾ ಕಾಂಗ್ರೆಸ್‌ ಅದ್ಯಕ್ಷೆ ಹೇಮಲತಾ, ಪುರಸಭಾಧ್ಯಕ್ಷೆ ಯಶೋಧಮ್ಮ, ಮಾಜಿ ಪುರಸಭಾಧ್ಯಕ್ಷ ಟಿ.ಜೆ.ಗೋಪಿಕುಮಾರ್‌, ಡಿ.ವಿ.ಪದ್ಮರಾಜ್‌, ಮುಖಂಡರಾದ ಗುಳ್ಳದಮನೆ ರಾಮಚಂದ್ರಪ್ಪ, ಟಿ.ಟಿ.ನಾಗರಾಜ, ರವಿಕಿಶೋರ ಇನ್ನಿತರರು ಇದ್ದರು.

ಶಿವಮೊಗ್ಗದಿಂದ ಬೆಂಗಳೂರು ಯಶವಂತಪುರದವರೆಗೆ ಸಂಚರಿಸಲಿರುವ ಜನಶತಾಬ್ಧಿ ರೈಲು ಇಂದು ಸಂಜೆ 6 ಗಂಟೆಗೆ ಸಾಂಕೇತಿಕವಾಗಿ ಶಿವಮೊಗ್ಗ ಮತ್ತು ಬೀರೂರಿನ ತನಕ ಸಂಚರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ರೈಲ್ವೆ ಇಲಾಖೆ ಮಾಡಿಕೊಂಡಿತ್ತು. ತರೀಕೆರೆ ಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದ ಕೂಡಲೇ ಬೀರೂರಿಗೆ ಬದಲು ಭದ್ರಾವತಿ ತನಕ ಆಗಮಿಸಿ ಪುನಃ ಶಿವಮೊಗ್ಗಕ್ಕೆ ತೆರಳಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next