Advertisement

ಪರಿಸರದ ಮೇಲಾಗುತ್ತಿರುವ ದಾಳಿ ನಿಲ್ಲಲಿ

03:10 PM Jun 06, 2018 | Team Udayavani |

ಚಿತ್ರದುರ್ಗ: ಪ್ರಕೃತಿಯಲ್ಲಿ ಮನುಷ್ಯನಿಗೆ ಬದುಕುವ ಹಕ್ಕು ಇರುವಂತೆ ಇತರೆ ಎಲ್ಲಾ ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದೆ. ಆ ಹಕ್ಕು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಹೇಳಿದರು.

Advertisement

ಇಲ್ಲಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಚಿತ್ರದುರ್ಗ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರದ ಮೇಲೆ ನಿರಂತರ ದಾಳಿ ಮಾಡುತ್ತಿರುವ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ, ಪ್ರಾಣಿ, ಪಕ್ಷಿ, ಭೂಮಿ ಸೇರಿದಂತೆ ಇತರೆ ಪ್ರಕೃತಿ ನಾಶ ಮಾಡಿ ತಾನು ಬದುಕಿ ಪ್ರಾಣಿ ಸಾಯಿಸಿ ಬದುಕುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಕೃತಿಯಲ್ಲಿನ 83 ಸಾವಿರ ಜನ್ಮ ರಾಶಿಗಳಲ್ಲಿ ಮನುಷ್ಯ ಜಾತಿ ಒಂದಾಗಿದೆ. ಆದರೆ ಎಲ್ಲಾ ಜೀವಿಗಳಿಗಿಂತಲೂ ಮನುಷ್ಯರ ಸಂಖ್ಯೆ ಹೆಚ್ಚಾಗಿದೆ. ಪ್ರಕೃತಿಯ ದುರ್ಬಳಕೆಯಿಂದ ಮನುಷ್ಯರ ಕುಲ ಬೆಳೆಯುತ್ತಿದೆ. ಆದರೆ ಪ್ರಾಣಿ, ಪಕ್ಷಿಗಳ ಸಂಕುಲ ನಾಶವಾಗುತ್ತಿರುವುದು ತೀವ್ರ ಕಳವಳಕಾರಿ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಕೃತಿಯಲ್ಲಿ ಎಲ್ಲಾ ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದ್ದು ಇದನ್ನು ನಾಶ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗಿದೆ. ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ಉಪಯೋಗ ಮಾಡಿ ಬಿಸಾಡುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಪ್ರಾಣಿ, ಪಕ್ಷಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಹಾಗೂ ಪ್ಲಾಸ್ಟಿಕ್‌ ಬಳಕೆ ಕೈಬಿಡಬೇಕು
ಎಂದರು.

Advertisement

ಅಭಿವೃದ್ಧಿಯ ನೆಪದಲ್ಲಿ ಈ ಹಿಂದೆ ಕುದುರೆಮುಖದಲ್ಲಿ ಅದಿರು ಗಣಿಗಾರಿಕೆ ನಡೆಸಲಾಗುತ್ತಿತ್ತು. ಪರಿಸರದಲ್ಲಿನ ಪ್ರಾಣಿ,
ಪಕ್ಷಿಗಳ ನಾಶದ ಕಾರಣದಿಂದ ಇದನ್ನು 2005ರಲ್ಲಿ ನಿಲ್ಲಿಸಲಾಯಿತು. ಗಣಿಗಾರಿಕೆ ಸೇರಿದಂತೆ ಇತರೆ ಪ್ರಕೃತಿಯ ನಾಶದಿಂದ ಬರುವ ಲಾಭ ಮುಖ್ಯವಾಗುವುದಿಲ್ಲ. ಆದರೆ ಪರಿಸರದ ಸಂರಕ್ಷಣೆಯಾಗಿ ಪ್ರಕೃತಿಯ ಸಂಪತ್ತು
ಉಳಿಯುವಂತಾಗಬೇಕು. ಆದ್ದರಿಂದಲೇ ಶೇ 10 ರಷ್ಟು ಅರಣ್ಯ ಭೂಮಿ ಕಡ್ಡಾಯವಾಗಿ ಇರಬೇಕೆಂದು ಕಾನೂನು ಇದೆ. ಅರಣ್ಯ ಭೂಮಿಯನ್ನು ಯಾರಿಗೂ ಹಂಚಿಕೆ ಮಾಡಲು ಅವಕಾಶ ಇರುವುದಿಲ್ಲ ಎಂದರು.

ಅರಣ್ಯವನ್ನು ಬೆಳೆಸುವುದರಿಂದ ಉಸಿರಾಟಕ್ಕೆ ಎಲ್ಲರಿಗೂ ಅನುಕೂಲವಾಗುತ್ತದೆ. ನಾವು ಉಸಿರಾಡುವ ಇಂಗಾಲಡೈ ಆಕ್ಸೆಡ್‌ ತೆಗೆದುಕೊಂಡು ಆಮ್ಲಜನಕ ನೀಡುತ್ತದೆ. ಅದರಲ್ಲಿಯೂ ತುಳಸಿ ಗಿಡವು ದಿನದ 24 ಗಂಟೆ ಆಮ್ಲಜನಕ ನೀಡುತ್ತದೆ. ಆದ್ದರಿಂದಲೇ ಮನೆಯ ಮುಂಭಾಗದಲ್ಲಿ ತುಳಿಸಿ ಗಿಡ ಬೆಳೆಸಲಾಗುತ್ತದೆ ಎಂದು ತಿಳಿಸಿದರು.

1972ರಲ್ಲಿ ನಡೆದ ವಿಶ್ವಸಂಸ್ಥೆಯ ನಿರ್ಣಯದನ್ವಯ ಪ್ರತಿ ವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಇದನ್ನು 1973ರಿಂದ ಜೂನ್‌ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ವರ್ಷ ಪ್ಲಾಸ್ಟಿಕ್‌ ಮಾಲಿನ್ಯ ತೊಲಗಿಸೋಣ ಎಂಬ ಘೋಷಣೆಯಡಿ ಆಚರಣೆ ಮಾಡಲಾಗುತ್ತಿದೆ.
ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್‌ ನಿಂದಾಗುವ ದುಷ್ಪರಿಣಾಮಗಳ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ಸಮಾರಂಭ ಏರ್ಪಡಿಸಿ ಬಹುಮಾನ ನೀಡಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌.ರವೀಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಸವರಾಜ ಎಸ್‌.ಚಿಗರೆಡ್ಡಿ, ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಟಿ. ವೀರಣ್ಣ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶರಾದ ಎಸ್‌.ಆರ್‌. ದಿಂಡಲಕೊಪ್ಪ, ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್‌ ಎಂ. ಜೋಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಬಿ. ವಿಶ್ವನಾಥ್‌, ಕಾರ್ಯದರ್ಶಿ ಶಿವುಯಾದವ್‌ ಹಾಗೂ ಇನ್ನಿತರೆ ಅಧಿಕಾರಿಗಳು ಇದ್ದರು. ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕೆ.ಬಿ. ಮಂಜುನಾಥ್‌ ಸ್ವಾಗತಿಸಿದರು. ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಮಳವಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next