ಕೆ.ಆರ್.ನಗರ: ತಾಲೂಕಿನ ಮುಂಡೂರು ಗ್ರಾಮದ ವ್ಯಾಪ್ತಿಗೆ ಸೇರಿದ ಸರ್ಕಾರಿ ಜಾಗದಲ್ಲಿ ನಡೆಯುತ್ತಿರುವ ಭಾರೀ ಕಲ್ಲು ಗಣಿಗಾರಿಕೆಯಿಂದ ಈ ಭಾಗದ ಜನತೆಗೆ ಹಲವಾರು ರೀತಿ ತೊಂದರೆಯಾಗುತ್ತಿದ್ದು, ಕೂಡಲೇ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ತಾಪಂ ಸದಸ್ಯರಾದ ಎಚ್.ಟಿ.ಮಂಜುನಾಥ್, ಮುಂಡೂರು ಕುಮಾರ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗಣಿಗಾರಿಕೆಯಿಂದ ಜನತೆಗೆ ಆಗುತ್ತಿರುವ ನಷ್ಟ ಹಾಗೂ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ವಿವರಿಸಿದ ಗ್ರಾಮಸ್ಥರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಣಿಗಾರಿಕೆ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಸುತ್ತಮುತ್ತಲ ಗ್ರಾಮಸ್ಥರೊಡಗೂಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಕೆರೆಯ ಅರ್ಧಭಾಗ ಕಲ್ಲು: ತಾಪಂ ಸದಸ್ಯ ಎಚ್.ಟಿ.ಮಂಜುನಾಥ್ ಮತ್ತು ಮುಂಡೂರುಕುಮಾರ್ ಮಾತನಾಡಿ, ಗ್ರಾಮಕ್ಕೆ ಸೇರಿದಂತಿರುವ ಸರ್ಕಾರಿ ಜಾಗ ಸರ್ವೆ ನಂ.244ರಲ್ಲಿ 1986-1987ರಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದು, ಬಿಳಿಕಲ್ಲು, ಬಿಳಿಮಣ್ಣು ಹಾಗೂ ಕಾಗೆ ಬಂಗಾರ ಮತ್ತು ಬೆಲೆಬಾಳುವ ಮಣ್ಣು ತೆಗೆದು ಉಳಿದ ತ್ಯಾಜ್ಯವನ್ನು ಅಕ್ಕಪಕ್ಕ ಸುರಿಯುವುದರಿಂದ ಅದು ಮಳೆ ಬಿದ್ದಾಗ ನೇರವಾಗಿ ಕಲ್ಲು ಮಣ್ಣು ಸಮೇತ ಕೆರೆಗೆ ಬಂದು ಸೇರುವುರಿಂದ ಗ್ರಾಮದ ರೈತರ ಜೀವನಾಡಿ ಕೆರೆ ಅರ್ಧ ಕಲ್ಲು ಮಣ್ಣಿನಿಂದ ತುಂಬಿ ಹೋಗಿದೆ. ಈಗ ಮಳೆ ಬಂದರೂ ನೀರು ನಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿ ಜನಜಾನುವಾರುಗಳಿಗೆ ನೀರಿಗಾಗಿ ಪರದಾಡುವಂತಾಗಿದೆ ಎಂದು ಅವಲತ್ತುಕೊಂಡರು.
ಬೆಳೆಗೆ ಧೂಳು:ಅಲ್ಲದೇ ವರ್ಷಪೂತಿ ಗಣಿಗಾರಿಕೆ ನಡೆಸುವುದರಿಂದ ಅಲ್ಲಿನ ಧೂಳು ರೈತರ ಬೆಳೆಗಳ ಮೇಲೆ ಬಿದ್ದು ಇಡೀ ಬೆಳೆ ಹಾಳಾಗುತ್ತಿದೆ. ಗಣಿಗಾರಿಕೆಯ ಧೂಳಿನಿಂದ ಅಕ್ಕಪಕ್ಕದ ಗ್ರಾಮದವರು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಎಂದರು.
ನಿದ್ರೆಗೆ ಭಂಗ: ಗಣಿಗಾರಿಕೆಯಿಂದ ತೆಗೆಯುವ ಭಾರೀ ಬೆಲೆ ಬಾಳುವ ಕಲ್ಲು, ಮಣ್ಣು ಹಾಗೂ ಬಿಳಿಮಣ್ಣು, ಕಾಗೆ ಬಂಗಾರ ಮತ್ತಿತರ ಖನಿಜಗಳನ್ನು ಮಿತಿ ಮೀರಿ ದೊಡ್ಡ ವಾಹನಗಳಲ್ಲಿ ಅದರಲ್ಲೂ ರಾತ್ರಿ ವೇಳೆ ಮಾತ್ರ ಸಾಗಿಸುವುದರಿಂದ ಈ ಭಾಗದ ಸಾರ್ವಜನಿಕರ ನಿದ್ರೆಗೆ ಭಂಗವಾಗಿದ್ದು, ಲಾರಿಗಳು ಆಗಾಗ ರಸ್ತೆ ನಡುವೆ ಕೆಟ್ಟು ನಿಂತಾಗ ವಾಹನಗಳ ಓಡಾಟಕ್ಕೆ ದಾರಿಯಿಲ್ಲದೆ ಪರದಾಡುವಂತಾಗಿದೆ.
ಗಣಿಗಾರಿಕೆಗೆ ಭಾರೀ ಗಾತ್ರದ ಬೆಟ್ಟ ಕರಗಿತು!: ಗಣಿಗಾರಿಕೆಯಿಂದ ತೆಗೆದ ಕಲ್ಲು ಮಣ್ಣನ್ನು 16 ಚಕ್ರ, 14 ಚಕ್ರ ಸೇರಿದಂತೆ ಹೆಚ್ಚು ಭಾರದ ವಾಹನಗಳಲ್ಲಿ ಮಿತಿಮೀರಿ ಲೋಡ್ ಮಾಡಿಕೊಂಡು ರಸ್ತೆ ನಿಯಮ ಮೀರಿ ಹೆಚ್ಚು ಭಾರವನ್ನು ಹೊತ್ತು ಚಲಿಸುವುದರಿಂದ ಮುಂಡೂರು, ಕುಲುಮೆಹೊಸೂರು, ಬೆಟ್ಟಹಳ್ಳಿ ಸೇರಿದಂತೆ ಈ ಭಾಗದ ರಸ್ತೆಗಳು ಹದಗೆಟ್ಟಿವೆ.
ಭಾರೀ ಗಾತ್ರವಿದ್ದ ಬೆಟ್ಟ ಇಂದು ಅಕ್ರಮ ಗಣಿಗಾರಿಕೆಯಿಂದ ಕರಗಿ ಇಡೀ ಪರಿಸರ ಹಾಳಾಗಿದ್ದು, ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಈ ಭಾಗದ ಗ್ರಾಮಗಳ ಜನತೆ ಹಾಗೂ ರೈತಪರ ಸಂಘಟನೆಗಳೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈ ಸಂಧರ್ಭದಲ್ಲಿ ಮುಂಡೂರು ಗ್ರಾಮದ ಹಲವಾರು ರೈತರು ಹಾಜರಿದ್ದರು.