ಎಚ್.ಡಿ.ಕೋಟೆ: ರಾಜ್ಯ ಸರ್ಕಾರ ಕಳೆದ 2ವರ್ಷಗಳ ಹಿಂದಿನಿಂದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸದೆ ಪ್ರಸಕ್ತ ಸಾಲಿನಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್‌ಟಾಪ್ ವಿತರಿಸಿರುವ ಕ್ರಮವನ್ನು ವಿರೋಧಿಸಿ ಹಾಗೂ ರಾಜ್ಯದ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಕೂಡಲೇ ಲ್ಯಾಪ್‌ಟಾಪ್ ವಿತರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ತಾಲೂಕು ಕೇಂದ್ರ ಸ್ಥಾನದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಕಾಲೇಜಿನಿಂದ ಮೆರವಣಿಗೆ ಹೊರಟು ಎಚ್.ಬಿ.ರಸ್ತೆ ಮಾರ್ಗವಾಗಿ ಪಟ್ಟಣದ ಮಿನಿವಿಧಾನಸೌಧ ಸಮಾವೇಶಗೊಂಡರು. ನಂತರ, ವಿದ್ಯಾರ್ಥಿಗಳು ಸರ್ಕಾರ ಈ ಹಿಂದೆ ಸರ್ಕಾರಿ ಕಾಲೇಜಿನ ಎಲ್ಲಾ ಪದವಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಚಿತ ಲ್ಯಾಪ್‌ಟಾಪ್ ವಿತರಿಸುವ ಪ್ರಣಾಳಿಕೆ ಹೊರಡಿಸಿತ್ತು.
ಕಳೆದ 2ವರ್ಷಗಳ ಹಿಂದಿನಿಂದ ಯಾವ ವಿದ್ಯಾರ್ಥಿಗೂ ಲ್ಯಾಪ್‌ಟಾಪ್ ವಿತರಿಸದ ಸರ್ಕಾರ ಪ್ರಸಕ್ತ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್‌ಟಾಪ್ ವಿತರಿಸಿ ಇನ್ನುಳಿದ ದ್ವಿತೀಯ ಮತ್ತು ತƒತೀಯ ಪದವಿ ವಿದ್ಯಾರ್ಥಿಗಳಿಗೆ ದ್ರೋಹವೆಸಗಿದೆ. ಅಷ್ಟೇ ಅಲ್ಲದೆ ಸರ್ಕಾರ ಈ ಕ್ರಮದಿಂದ ವಿದ್ಯಾರ್ಥಿಗಳಲ್ಲಿ ವೈಷಮ್ಯ ಭುಗಿಲೆದ್ದು ಪರಸ್ಪರ ಹೊಂದಾಣಿಕೆ ಇಲ್ಲದೆ ತಾರತಮ್ಯತೆಗೆ ಪರೋಕ್ಷವಾಗಿ ಕಾರಣವಾಗಿದೆ ಎಂದು ದೂರಿದರು.
ಕೂಡಲೇ ವಿತರಿಸಿ: ಉಳ್ಳವರು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆದುಕೊಂಡರೆ ಬಹು ಸಂಖ್ಯೆಯಲ್ಲಿವ ಕಡು ಬಡವರು, ದಲಿತರು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಬಡತನದ ಜೀವನ ನಿರ್ವಹಣೆ ಮಾಡುವ ನಾವು ಸ್ವಂತ ಹಣ ಹೂಡಿಕೆ ಮಾಡಿ ಲ್ಯಾಪ್‌ಟಾಪ್ ಖರೀದಿಸುವಷ್ಟು ಹಣ ನಮ್ಮಲ್ಲಿಲ್ಲ. ಹೀಗಾಗಿ ಕೂಡಲೇ ಸರ್ಕಾರ ರಾಜ್ಯದ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲ್ಯಾಪ್‌ಟಾಪ್ ವಿತರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಮನವಿ: ಈಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿರುವ ನಾವು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಂಡು ಹೋರಾಟ ನಡೆಸಬೇಕಾಗುತ್ತದೆ. ಇದಕ್ಕೆ ಆಳುವ ಸರ್ಕಾರವೇ ಕಾರಣವಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಗೆ ಸಹಕಾರ: ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಮಾತನಾಡಿ, ಸರ್ಕಾರ ನೀಡಿದ ಭರವಸೆಯಂತೆ ಎಲ್ಲಾ ಪದವಿ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್ ವಿತರಿಸುವ ಕ್ರಮ ಕೈಗೊಳ್ಳಬೇಕೆಂದು ಶಾಸಕ ಅನಿಲ್ ಚಿಕ್ಕಮಾದು ಚರ್ಚಿಸುವ ಭರವಸೆ ನೀಡಿದರು. ವಿದ್ಯಾರ್ಥಿಗಳ ಮನವಿಗೆ ಸರ್ಕಾರ ಸಹಕಾರ ನೀಡದೇ ಇದ್ದರೆ ಮುಂದೆ ವಿದ್ಯಾರ್ಥಿಗಳೊಟ್ಟಿಗೆ ರಸ್ತೆತಡೆಯಂತಹ ಚಳವಳಿ ಹಮ್ಮಿಕೊಂಡು ರಾಜ್ಯದ ವಿದ್ಯಾರ್ಥಿಗಳೊಡಗೂಡಿ ಪ್ರತಿಭಟನೆ ನಡೆಸಲು ಸಹಕಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಚಂದ್ರಶೇಖರ್, ಎಚ್.ಆರ್.ರವೀಂದ್ರ, ಶಿವ, ಶಿವಪ್ಪ, ಸಂತೋಷ್‌ಕುಮಾರ್, ಯಶವಂತ್, ವಿಜಯ್, ಸಿ.ಪ್ರವೀಣ, ಎ.ರಮೇಶ, ಸುಪ್ರಿಯ, ಅಂಜನ, ರಾಣಿ, ಸುಜಾತ ಎಚ್.ಸಿ, ಮೇಘನಾ, ಅಂಜು, ಅಂಬಿಕಾ ಮತ್ತಿತರರು ಉಪಸ್ಥಿತರಿದ್ದರು.