ಕಾಸರಗೋಡು: ತಿರುವನಂತಪುರದಿಂದ ಹೊಸದಿಲ್ಲಿ ತನಕದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಜಿಲ್ಲಾ ಕೇಂದ್ರವಾದ ಕಾಸರಗೋಡಿನಲ್ಲಿ ಕೊನೆಗೂ ನಿಲುಗಡೆಗೆ ಮಂಜೂರು ಮಾಡಲಾಗಿದೆ. ಅದರಂತೆ ಫೆಬ್ರವರಿ 1ರಿಂದ ತಿರುವನಂತಪುರದಿಂದ ಹೊರಡುವ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಮರುದಿನ ಬೆಳಗ್ಗೆ 4.50ಕ್ಕೆ ಕಾಸರಗೋಡು ನಿಲ್ದಾಣದಲ್ಲಿ ಮೊದಲ ಬಾರಿಗೆ ನಿಲುಗಡೆ ನೀಡಲಾಗುವುದು.
ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಾಡಿಗೆ ಕಾಸರಗೋಡಿನಲ್ಲಿ ನಿಲುಗಡೆ ಮಂಜೂರು ಮಾಡಿದ ವಿಷಯವನ್ನು ಕೇಂದ್ರ ರೈಲ್ವೇ ಖಾತೆ ಸಚಿವ ಪೀಯೂಷ್ ಗೋಯಲ್ ಅವರು ಕಾಸರಗೋಡು ಸಂಸದ ಪಿ.ಕರುಣಾಕರನ್ ಅವರಿಗೆ ತಿಳಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕೇಂದ್ರ ರೈಲ್ವೇ ಇಲಾಖೆಯು ಇದನ್ನು ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ.
ಕಾಸರಗೋಡು ಸಬ್‌ಕೋರ್ಟ್‌ನ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಬಂದ ವೇಳೆ ಕೇರಳ ರಾಜ್ಯಪಾಲ ಪಿ.ಸದಾಶಿವಂ ಅವರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಜಿಲ್ಲಾ ಕೇಂದ್ರವಾದ ಕಾಸರಗೋಡಿನಲ್ಲಿ ನಿಲುಗಡೆಗೆ ಕೇಂದ್ರ ಸರಕಾರ ಮತ್ತು ರೈಲ್ವೇ ಇಲಾಖೆ ಮೇಲೆ ಒತ್ತಡ ಹೇರುವೆನೆಂದು ಭರವಸೆ ನೀಡಿದ್ದರು.
ರಾಜ್ಯದ ಇತರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈ ರೈಲಿಗೆ ನಿಲುಗಡೆ ನೀಡಿದರೆ ಕಾಸರಗೋಡಿನಲ್ಲಿ ನಿಲುಗಡೆ ನೀಡದಿರುವ ರೈಲ್ವೇ ಇಲಾಖೆಯ ನಿಲುವಿಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಈ ಎಲ್ಲ ಹೋರಾಟಗಳಿಗೆ ಸಂದ ಗೆಲುವು ಎಂಬಂತೆ ರಾಜಧಾನಿ ಎಕ್ಸ್ ಪ್ರಸ್‌ಗೆ ರೈಲ್ವೇ ಇಲಾಖೆ ಕೊನೆಗೂ ಕಾಸರಗೋಡಿನಲ್ಲಿ ನಿಲುಗಡೆ ನೀಡಿರುವುದು ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದೆ. ಪ್ರತಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಈ ಮೂರು ದಿನಗಳಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಾಡಿ ತಿರುವನಂತಪುರದಿಂದ ಹೊಸದಿಲ್ಲಿಗೆ ಸಂಚಾರ ನಡೆಸಲಿದೆ. ಈ ದಿನಗಳಲ್ಲಿ ರಾತ್ರಿ 7.15ಕ್ಕೆ ತಿರುವನಂತಪುರ ಸೆಂಟ್ರಲ್ ರೈಲು ನಿಲ್ದಾಣದಿಂದ ಸಂಚಾರ ಆರಂಭಿಸಿ ಮರುದಿನ ಬೆಳಗ್ಗೆ 4.50ಕ್ಕೆ ಕಾಸರಗೋಡಿಗೆ ತಲುಪಿ ಅಲ್ಲಿಂದ 5.30ಕ್ಕೆ ಮಂಗಳೂರು ಜಂಕ್ಷನ್ ತಲುಪಿ ಹೊಸದಿಲ್ಲಿಯತ್ತ ಸಂಚಾರ ಪುನರಾರಂಭಿಸಲಿದೆ.
ಹೊಸದಿಲ್ಲಿ ನಿಝಾಮುದ್ದೀನ್ ರೈಲು ನಿಲ್ದಾಣದಿಂದ ಮಂಗಳವಾರ, ಬುಧವಾರ ಮತ್ತು ರವಿವಾರ ಬೆಳಗ್ಗೆ 10.55ಕ್ಕೆ ತಿರುವನಂತಪುರದತ್ತ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್ ಮರುದಿನ ಸಂಜೆ 5.50ಕ್ಕೆ ಮಂಗಳೂರು, ರಾತ್ರಿ 7ಕ್ಕೆ ಕಾಸರಗೋಡಿಗೆ ತಲುಪಿ ಬಳಿಕ ತಿರುವನಂತಪುರದತ್ತ ಸಂಚಾರ ಮುಂದುವರಿಸಲಿದೆ.
ಸಚಿವರಿಗೆ ಬಿಜೆಪಿ ಅಭಿನಂದನೆ
ರೈಲಿಗೆ ಕಾಸರಗೋಡಿನಲ್ಲಿ ನಿಲುಗಡೆ ಮಂಜೂರು ಮಾಡಿದ ಕೇಂದ್ರ ಸರಕಾರ ಹಾಗೂ ರೈಲ್ವೇ ಸಚಿವ ಪೀಯೂಷ್ ಗೋಯಲ್ ಅವರಿಗೆ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ, ನ್ಯಾಯವಾದಿ ಕೆ. ಶ್ರೀಕಾಂತ್ ಅಭಿನಂದನೆ ಸಲ್ಲಿಸಿದ್ದಾರೆ.
ಕಾಸರಗೋಡು ರೈಲು ನಿಲ್ದಾಣದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡಬೇಕೆಂದು ಆಗ್ರಹಿಸಿ ಸಂಸದ ಪಿ. ಕರುಣಾಕರನ್ ಅವರು ಇತ್ತೀಚೆಗೆ ನಿರಾಹಾರ ಸತ್ಯಾಗ್ರಹವನ್ನು ನಡೆಸಿದ್ದರು. ಇದೇ ಬೇಡಿಕೆ ಮುಂದಿರಿಸಿ ಬಿಜೆಪಿ, ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್ ಪಕ್ಷಗಳು ಕೂಡ ಹಲವು ಬಾರಿ ಹೋರಾಟ ನಡೆಸಿದ್ದವು. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವರು ಮತ್ತು ರೈಲ್ವೇ ಇಲಾಖೆಯ ಉನ್ನತಾಧಿಕಾರಿಗಳಿಗೂ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸುತ್ತಾ ಬರಲಾಗಿತ್ತು. ಜತೆಗೆ ರೈಲು ತಡೆ ಚಳವಳಿಯನ್ನೂ ನಡೆಸಲಾಗಿತ್ತು.