ನವದೆಹಲಿ: ಕಳೆದ ಕೆಲ ದಿನಗಳಿಂದ ದೆಹಲಿಯ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಿದ್ದು ಪರಿಣಾಮ ಇಂದು (ಶುಕ್ರವಾರ) ದೆಹಲಿ-ಲಖನೌ ಹೆದ್ದಾರಿಯಲ್ಲಿ ರಸ್ತೆ ಸರಿಯಾಗಿ ಗೋಚರಿಸದ ಪರಿಣಾಮ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ ಹಲವಾರು ಮಂದಿ ಸಣ್ಣಪುಟ್ಟ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಉತ್ತರ ಪ್ರದೇಶದ ಹಾಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಿದ್ದು ರಸ್ತೆ ಕಾಣದೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದೆಹಲಿಯಲ್ಲಿ ಬೆಳಿಗ್ಗೆ ಕನಿಷ್ಠ ತಾಪಮಾನ ಅಂದರೆ 7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು ಶೂನ್ಯ ಗೋಚರತೆ ಉಂಟಾಗಿದೆ, ದಟ್ಟ ಮಂಜಿನ ಪರಿಣಾಮ ರೈಲು, 150ಕ್ಕೂ ಹೆಚ್ಚು ವಿಮಾನಗಳ ಹಾರಾಟದ ಮೇಲೂ ಪರಿಣಾಮ ಬೀರಿದ್ದು ಜೊತೆಗೆ 26 ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೆ ಸಂದರ್ಭದಲ್ಲಿ ಗಾಳಿಯ ಗುಣಮಟ್ಟವೂ ಕುಸಿದಿರುವುದಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.