Advertisement

ಕಲ್ಲು ತೂರುವವರೂ ಉಗ್ರರೇ

06:00 AM Oct 28, 2018 | |

ನವದೆಹಲಿ: ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರು ಪಾಕಿಸ್ತಾನದ ಉಗ್ರವಾದಿ ಗುಂಪುಗಳೊಂದಿಗೆ ಗಾಢವಾದ ನಂಟು ಹೊಂದಿದವರಾಗಿದ್ದು, ಅಂಥವರನ್ನು ನಾಗರಿಕ ಭಯೋತ್ಪಾದಕರೆಂದು ಪರಿಗಣಿಸಲಾಗುತ್ತದೆ ಹಾಗೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಎಚ್ಚರಿಸಿದ್ದಾರೆ. ಸೇನಾ ಕವಾಯತು ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭಕ್ಕಾಗಿ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. 

Advertisement

ಕಲ್ಲು ತೂರಾಟ ನಡೆಸುತ್ತಿದ್ದ ಗುಂಪೊಂದು ಗುರುವಾರ ರಾಜೇಂದ್ರ ಸಿಂಗ್‌ (22) ಎಂಬ ಯೋಧನನ್ನು ಕೆಳಕ್ಕೆ ಕೆಡವಿಕೊಂಡು ಕಲ್ಲುಗಳಲ್ಲಿ ತಲೆಗೆ ಜಜ್ಜಿ ಗಂಭೀರವಾಗಿ ಗಾಯಗೊಳಿಸಿತ್ತು. ಶ್ರೀನಗರದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಸಿಂಗ್‌, ಶುಕ್ರವಾರ ಹುತಾತ್ಮರಾದರು. ಈ ಹಿನ್ನೆಲೆಯಲ್ಲಿ ರಾವತ್‌ ಈ ಎಚ್ಚರಿಕೆ ರವಾನಿಸಿದ್ದಾರೆ. 

ತಿರುಗೇಟು ನೀಡುತ್ತೇವೆ: ಪಾಕಿಸ್ತಾನಕ್ಕೂ ಖಡಕ್‌ ಎಚ್ಚರಿಕೆ ಕೊಟ್ಟ ಅವರು, “”ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಯನ್ನು° ಪಾಕಿಸ್ತಾನ ಇನ್ನಾದರೂ ನಿಲ್ಲಿಸದಿದ್ದರೆ ಭಾರತವು ತಕ್ಕ ಶಾಸ್ತಿ ಮಾಡಲೇಬೇಕಾಗುತ್ತದೆ. ಪಾಕಿಸ್ತಾನದ ಗಡಿಯೊಳಗೆ 2016ರಲ್ಲಿ ಸರ್ಜಿಕಲ್‌ ಸ್ಟ್ರೈಕ್‌ಗಳನ್ನು ನಡೆಸಿ ಅಲ್ಲಿ ಅವಿತಿದ್ದ ಉಗ್ರರ ಕ್ಯಾಂಪ್‌ಗ್ಳನ್ನು ಹೊಸಕಿ ಹಾಕಿರುವ ಭಾರತ, ಪಾಕಿಸ್ತಾನಕ್ಕೆ ನಾನಾ ಮಾರ್ಗಗಳಲ್ಲಿ ತಕ್ಕ ಪಾಠ ಕಲಿಸುವ ಶಕ್ತಿಯನ್ನೂ ಹೊಂದಿದೆ” ಎಂದಿದ್ದಾರೆ. 

ಪಾಕಿಸ್ತಾನದ ಹಪಾಹಪಿತನ: “”ಬಾಂಗ್ಲಾದೇಶ ಸ್ವತಂತ್ರವಾದ ಬೆನ್ನಲ್ಲೇ 1971ರಲ್ಲಿ ಭಾರತದ ವಿರುದ್ಧ ಸಮರ ಸಾರಿ ಸೋಲು ಕಂಡಿದ್ದ ಪಾಕಿಸ್ತಾನ, ಅಂದಿನಿಂದ ನೇರವಾಗಿ ಯುದ್ಧ ಮಾಡುವುದನ್ನು ನಿಲ್ಲಿಸಿದೆ. ಜಮ್ಮು ಕಾಶ್ಮೀರವನ್ನು ಕಿತ್ತುಕೊಳ್ಳುವುದು ಪಾಕ್‌ನಿಂದ ಅಸಾಧ್ಯ. ಆ ರಾಜ್ಯ ಸಾರ್ವಭೌಮತ್ವದ ಸಂಕೇತವಾಗಿ ಎಂದೆಂದಿಗೂ ಭಾರತದಲ್ಲೇ ಉಳಿದಿರುತ್ತದೆ” ಎಂದು ರಾವತ್‌ ತಿಳಿಸಿದ್ದಾರೆ. 

ಸಿರಿಯಾಗಿಂತ ಪಾಕ್‌ ಅಪಾಯಕಾರಿ: ವರದಿ
ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ತಾಣವಾಗಿರುವ ಸಿರಿಯಾಗಿಂತ ಪಾಕಿಸ್ತಾನವೇ ವಿಶ್ವಕ್ಕೆ ಅಪಾಯಕಾರಿ. ಪಾಕಿಸ್ತಾನದಲ್ಲೇ ಭೀಕರ ಉಗ್ರ ಸಂಘಟನೆಗಳು ನೆಲೆಸಿವೆ ಎಂಬುದು ಈಗ ಜಗಜ್ಜಾಹೀರಾಗಿದೆ. ಆಕ್ಸ್‌ಫ‌ರ್ಡ್‌ ಯೂನಿವರ್ಸಿಟಿ ಹಾಗೂ ಸ್ಟ್ರಾಟಜಿಕ್‌ ಫೋರ್‌ಸೈಟ್‌ ಗ್ರೂಪ್‌ ನಡೆಸಿದ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. “ಮಾನವೀಯತೆಗೆ ಅಪಾಯ – ಜಾಗತಿಕ ಭಯೋತ್ಪಾದನೆ ಭೀತಿ ಸೂಚ್ಯಂಕ’ ಎಂಬ ವರದಿಯನ್ನು ಈ ಅಧ್ಯಯನದಿಂದ ಪ್ರಕಟಿಸಲಾಗಿದ್ದು, ಇದರಲ್ಲಿ ವಾಸ್ತವಾಂಶ ಮತ್ತು ಅಂಕಿ ಅಂಶಗಳನ್ನು ಪರಿಗಣಿಸಿದರೆ ಪಾಕಿಸ್ತಾನವೇ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆಗಳನ್ನು ಹೊಂದಿದೆ ಎಂಬುದು ತಿಳಿದು ಬರುತ್ತದೆ. ಅಷ್ಟೇ ಅಲ್ಲ, ಹಲವು ಸಂಘಟನೆಗಳು ಅಫ್ಘಾನಿಸ್ತಾನದಲ್ಲಿದ್ದು, ಇವುಗಳೂ ಪಾಕಿಸ್ತಾನದಿಂದಲೇ ಕಾರ್ಯಾಚರಣೆ ನಡೆಸುತ್ತಿವೆ ಎಂದು ವಿವರಿಸಲಾಗಿದೆ. 80 ಪುಟಗಳ ಈ ವರದಿಯಲ್ಲಿ ಹೇಳಿರುವಂತೆ 2030 ರ ವೇಳೆಗೆ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ. 21ನೇ ಶತಮಾನದ ಮೊದಲಾರ್ಧದಲ್ಲಿ ಸಕ್ರಿಯವಾಗಿದ್ದ ಸುಮಾರು 200 ಗ್ರೂಪ್‌ಗ್ಳನ್ನು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಈ ಸಂಘಟನೆಗಳು ಜಿಹಾದ್‌ ಬಗ್ಗೆ ತಮ್ಮದೇ ವ್ಯಾಖ್ಯಾನ ಮಾಡಿಕೊಂಡಿವೆ. ಈ ಪೈಕಿ ಕಳೆದ 5 ವರ್ಷಗಳಲ್ಲಿ ಐಸಿಸ್‌ ಹೆಚ್ಚು ಗಮನ ಸೆಳೆದಿದೆ. ಆದರೆ ಅಲ್‌ಖೈದಾ ಮೊದಲಿನಿಂದಲೂ ತನ್ನ ಉಗ್ರ ಚಟುವಟಿಕೆಗಳನ್ನು ನಡೆಸುತ್ತಲೇ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Advertisement

ಪ್ರತ್ಯೇಕತಾವಾದಿಗಳ ಸಂಗ ಬೇಡ: ಜೇಟ್ಲಿ ಕರೆ 
ಭಯೋತ್ಪಾದನೆಯ ವಿರುದ್ಧ ಸಾರಲಾಗಿರುವ ಸಮರದಲ್ಲಿ ಜಮ್ಮು ಕಾಶ್ಮೀರದ ಜನತೆ ಪ್ರತ್ಯೇಕವಾದಿಗಳ ಜತೆಯಲ್ಲಿ ನಿಲ್ಲದೆ, ಭಾರತದ ಜತೆಗೆ ನಿಲ್ಲಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಕರೆ ನೀಡಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಸ್ಮಾರಕ ಉಪನ್ಯಾಸದ ವೇಳೆ ಮಾತನಾಡಿದ ಅವರು, ಭಯೋತ್ಪಾದಕರ ವಿರುದ್ಧದ ಸಮರವು ಐಕ್ಯತೆಗಾಗಿ ಸಾರಿರುವ ಯುದ್ಧವಾಗಿದ್ದು ಇದಕ್ಕೆ ಕಾಶ್ಮೀರದ ಜನತೆಯ ಸಹಕಾರ ಅತ್ಯಮೂಲ್ಯ ಎಂದರು. 

ಕಲ್ಲು ತೂರಾಟಗಾರರಿಂದ ಕಾಶ್ಮೀರದಲ್ಲಿ ಯೋಧನ ಹತ್ಯೆಯಾಗಿರುವ ಬಗ್ಗೆ ವಿಪಕ್ಷಗಳು ಒಂದೇ ಒಂದು ಪದದ ವಿರೋಧವನ್ನಾದರೂ ವ್ಯಕ್ತಪಡಿಸ ದಿರುವುದು ದುರದೃಷ್ಟಕರ. 
ಅವಿನಾಶ್‌ ರಾಯ್‌ ಖನ್ನಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next