Advertisement
ಕಾಂಗ್ರೆಸ್ ಅವಧಿಯಲ್ಲಿನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಒಂದು. ಬಡವರು, ಕೂಲಿ ಕಾರ್ಮಿಕರು ಕಡಿಮೆ ಖರ್ಚಿನಲ್ಲಿ ಮೂರು ಹೊತ್ತು ಹೊಟ್ಟೆ ತುಂಬಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜಾರಿಗೆ ತಂದರು.
Related Articles
Advertisement
ಮೂರು ಕ್ಯಾಂಟೀನ್‌ಗೆ ತಿಲಾಂಜಲಿ!
ಮಹಾನಗರ ವ್ಯಾಪ್ತಿಯಲ್ಲಿ ಸರಕಾರದಿಂದ 12 ಕ್ಯಾಂಟೀನ್‌ಗಳು ಮಂಜೂರಾಗಿದ್ದವು. ಅವುಗಳಲ್ಲಿ 9 ಕ್ಯಾಂಟೀನ್‌ಗಳನ್ನು ಹರಸಾಹಸ ಪಟ್ಟು ಆರಂಭಿಸಲಾಗಿತ್ತು. ಉಳಿದ ಮೂರು ಕ್ಯಾಂಟೀನ್‌ಗಳಿಗೆ ಜಾಗ ಗುರುತಿಸುವುದರಲ್ಲೇ ನಾಲ್ಕು ವರ್ಷ ತಳ್ಳಿದ್ದು, ಮೂರು ಕ್ಯಾಂಟೀನ್‌ಗಳಿಗೆ ಬಹುತೇಕ ಎಳ್ಳು ನೀರು ಬಿಟ್ಟಂತಾಗಿದೆ. ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಆ ಭಾಗದ ಬಡವರು, ಕೂಲಿ ಕಾರ್ಮಿಕರಿಗೆ ಈ ಸೇವೆ ದೊರೆಯದಂತಾಗಿದೆ. ಆರಂಭದಲ್ಲಿ 12 ಕ್ಯಾಂಟೀನ್ ನೀಡುವುದಾಗಿ ಗುತ್ತಿಗೆದಾರರಿಗೆ ಸರಕಾರ ಭರವಸೆ ನೀಡಿತ್ತು. ಹೀಗಾಗಿ 12 ಕ್ಯಾಂಟೀನ್‌ಗೂ ಬ್ಯಾಂಕ್ ಗ್ಯಾರಂಟಿ ಪಡೆಯಲಾಗಿದೆ. ಆದರೆ ನಾಲ್ಕು ವರ್ಷ ಕಳೆದರೂ ಉಳಿದ ಮೂರು ಕ್ಯಾಂಟೀನ್ ಆರಂಭಿಸುವ ಬಗ್ಗೆ ಮಹಾನಗರ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಇನ್ನೆಷ್ಟು ದಿನ ಗುತ್ತಿಗೆದಾರರ ಹೆಗಲಿಗೆ ಸಾಲದ ಹೊರೆ?
ಸೇವೆ ಹಾಗೂ ವ್ಯಾವಹಾರಿಕ ದೃಷ್ಟಿಯಿಂದ ನಿರ್ವಹಣಾ ಗುತ್ತಿಗೆ ಪಡೆದವರು ಅನುದಾನವಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿ ತಿಂಗಳು 9 ಕ್ಯಾಂಟೀನ್‌ಗೆ ಆಹಾರ, ಸಿಬ್ಬಂದಿ, ವಾಹನ ಸೇರಿದಂತೆ ಎಲ್ಲಾ ಖರ್ಚುಗಳು ಸುಮಾರು 14-16 ಲಕ್ಷ ರೂ. ತಗುಲುತ್ತಿದೆ. ಆದರೆ ಪಾಲಿಕೆ ಹಾಗೂ ಕಾರ್ಮಿಕ ಇಲಾಖೆ ಬಾಕಿ ಉಳಿಸಿಕೊಂಡಿದ್ದರಿಂದ ಬ್ಯಾಂಕ್ ಸಾಲ ಮಾಡಿ ನಿರ್ವಹಣೆ ಮಾಡುವಂತಾಗಿದೆ. ಅಗತ್ಯವಿಲ್ಲದ ಕಡೆಗಳಲ್ಲಿ ಪಾಲಿಕೆ ಕ್ಯಾಂಟೀನ್ ಸ್ಥಳ ಗುರುತಿಸಿದ ಕಾರಣ ನೀಡಿದ ಗುರಿ ತಲುಪುತ್ತಿಲ್ಲ. ಹೀಗಾಗಿ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಊಟ, ತಿಂಡಿ ಲೆಕ್ಕ ತೋರಿಸಬಾರದು ಎನ್ನುವ ಕಾರಣಕ್ಕೆ ಟೋಕನ್ ಕಡಿಮೆ ಮಾಡಿಸಿದ್ದಾರೆ. ಎಲ್ಲಾ ಕ್ಯಾಂಟೀನ್‌ಗಳಲ್ಲಿ ಸಿಸಿ ಕ್ಯಾಮರಾ ಸೇರಿದಂತೆ ಎಚ್ಚರಿಕಾ ಕಾರ್ಯ ಕೈಗೊಳ್ಳಲಾಗಿದೆ. ಸರಕಾರದ ನಿಯಮದಂತೆ ಪಾಲಿಕೆ ಹಾಗೂ ಕಾರ್ಮಿಕ ಇಲಾಖೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುವುದು ಗುತ್ತಿಗೆದಾರರ ಅಸಮಾಧಾನವಾಗಿದ್ದು, ಈ ನಿರ್ಲಕ್ಷ್ಯ ಮುಂದುವರಿದರೆ ಕ್ಯಾಂಟೀನ್‌ಗಳು ಮುಚ್ಚಿದರೂ ಅಚ್ಚರಿ ಪಡಬೇಕಾಗಿಲ್ಲ.
ಕೋವಿಡ್ ಬಾಕಿಯೂ ಇಲ್ಲ
ಕೋವಿಡ್ ಸಂದರ್ಭದಲ್ಲಿ ದುಡಿಮೆಯಿಲ್ಲದವರಿಗೆ, ನಿರ್ಗತಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಉಚಿತವಾಗಿ ಆಹಾರ ವಿತರಣೆ ಮಾಡಿತು. ಸುಮಾರು ಎರಡು ತಿಂಗಳ ಕಾಲ ತಿಂಡಿಗೆ 5 ರೂ. ಊಟಕ್ಕೆ 10 ರೂ. ಶುಲ್ಕವನ್ನು ಪಡೆಯದೆ ಉಚಿತವಾಗಿ ತಿಂಡಿ ಹಾಗೂ ಊಟ ವಿತರಿಸಲಾಯಿತು. ಸರಕಾರಿ ಆದೇಶದ ಪ್ರಕಾರ ಉಚಿತವಾಗಿ ವಿತರಿಸಿದ ಬಾಕಿ ಬರೋಬ್ಬರಿ 35 ಲಕ್ಷ ರೂ. ಆಗಿದೆ. ಮಹಾನಗರ ಪಾಲಿಕೆ ಅಥವಾ ಕಾರ್ಮಿಕ ಇಲಾಖೆ ಈ ಬಿಲ್ ತಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ವರ್ತಿಸುತ್ತಿದೆ. ಸರಕಾರದಿಂದ ಅನುದಾನ ಬಿಡುಗಡೆಯಾದರೆ ಪಾವತಿ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ ಎನ್ನುವುದು ಗುತ್ತಿಗೆದಾರರ ಅಳಲು.
ಪಾಲಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ಕೋಟ್ಯಂತರ ರೂ. ಅನುದಾನ ಬಾಕಿ ಉಳಿಸಿಕೊಂಡರೆ ನಿರ್ವಹಣೆ ಮಾಡುವುದಾರೂ ಹೇಗೆ. 12 ಕ್ಯಾಂಟೀನ್‌ಗಳಲ್ಲಿ 9 ಮಾತ್ರವೇ ನೀಡಿ ಪಾಲಿಕೆಯವರು ಅನ್ಯಾಯ ಮಾಡಿದ್ದಾರೆ. ಅನುದಾನ ನೀಡದ ಕಾರಣ ಬ್ಯಾಂಕ್‌ನಿಂದ ಸಾಲ ಮಾಡಿ ನಿರ್ವಹಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆಯ ನೂತನ ಆಯುಕ್ತರು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. -ಮೋಹನ ಮೋರೆ, ಗುತ್ತಿಗೆದಾರರು
-ಹೇಮರಡ್ಡಿ ಸೈದಾಪುರ