ಕಾಪು: ಮೂಡುಬೆಳ್ಳೆ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಪಡುಬೆಳ್ಳೆ ಹೊಸಊರು (ಹೊಸ ಒಕ್ಕಲು) ಎಂಬ ಪ್ರದೇಶದಲ್ಲಿ ಬೃಹತ್ ಶಿಲಾಯುಗ ಕಾಲಕ್ಕೆ ಸಂಬಂಧಪಟ್ಟ 4 ಕಂಡಿಕೋಣೆ ಸಮಾಧಿಯ ಭಗ್ನ ಅವಶೇಷಗಳನ್ನು ಉಡುಪಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಮುಖ್ಯ ಸಂಶೋಧಕ ಸುಭಾಸ್ ನಾಯಕ್ ಬಂಟಕಲ್ಲು ಹಾಗೂ ಕ್ರಾಸ್ ಲ್ಯಾಂಡ್ ಕಾಲೇಜಿನ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ಉಪನ್ಯಾಸಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಪತ್ತೆ ಮಾಡಿರುತ್ತಾರೆ.
ಸ್ಥಳೀಯ ಇತಿಹಾಸ ಆಸಕ್ತರಾದ ರಿಚರ್ಡ್ ದಾಂತಿ ಅವರು ಹಿಂದೆ ಇಲ್ಲಿ ಕ್ಷೇತ್ರ ಕಾರ್ಯ ಕೈಗೊಂಡಿದ್ದು, ಇವರು ಈ ಅವಶೇಷಗಳನ್ನು ಜೈನ ಬಸದಿಯ ಅವಶೇಷಗಳೆಂದು ಪರಿಗಣಿಸಿದ್ದರು. ಆದರೆ ಇತ್ತೀಚೆಗೆ ಸುಭಾಸ್ ನಾಯಕ್ ಬಂಟಕಲ್ಲು, ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಈ ಪ್ರದೇಶದಲ್ಲಿ ಕ್ಷೇತ್ರ ಕಾರ್ಯ ಶೋಧನೆ ಕೈಗೊಂಡಾಗ ಈ ಅವಶೇಷಗಳನ್ನು ಬೃಹತ್ ಶಿಲಾಯುಗದ ಸಮಾಧಿ ನೆಲೆಯೆಂದು ಗುರುತಿಸಿದ್ದಾರೆ.
ಬೃಹತ್ ಶಿಲಾಯುಗ ಕಾಲದಲ್ಲಿ ವಿವಿಧ ಮಾದರಿಯ ಸಮಾಧಿಗಳನ್ನು ಗುರುತಿಸಬಹುದಾಗಿದ್ದು, ಈ ನೆಲೆಯಲ್ಲಿ ಸುಮಾರು 4 ಕಂಡಿಕೋಣೆ ಸಮಾಧಿಯ ಭಗ್ನ ಅವಶೇಷಗಳು ಕಂಡು ಬಂದಿವೆ. ಈ ಕಲ್ಲು ಚಪ್ಪಡಿಗಳನ್ನು ಪೂರ್ವ – ಪಶ್ಚಿಮ ಹಾಗೂ ಉತ್ತರ ದಕ್ಷಿಣಕ್ಕೆ ಚೌಕಾಕಾರವಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಹೆಚ್ಚಿನ ಕ್ಷೇತ್ರ ಕಾರ್ಯವನ್ನು ಕೈಗೊಂಡಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಬಹುದಾಗಿದೆ. ಸ್ಥಳೀಯ ಇತಿಹಾಸ ಆಸಕ್ತರಾದ ರಿಚರ್ಡ್ ದಾಂತಿ ಹಾಗೂ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಇತಿಹಾಸ ಮತ್ತು ಜಾನಪದ ವಿದ್ವಾಂಸ ಎಸ್.ಎ. ಕೃಷ್ಣಯ್ಯ ಅವರು ಇಲ್ಲಿನ ಕ್ಷೇತ್ರ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ.
ವಿವಿಧೆಡೆ ಪತ್ತೆ
ಇದೇ ಮಾದರಿಯ ಸಮಾಧಿಗಳನ್ನು ಪಳ್ಳಿ, ಬೊರ್ಕಟ್ಟೆ, ಮೂಡುಕೊಣಾಜೆ, ಕರ್ಕುಂಜೆ ಸ್ಥಳಗಳಲ್ಲಿ ನೋಡಬಹುದಾಗಿದ್ದು ಇದರ ಕಾಲಮಾನವನ್ನು ಕ್ರಿ. ಪೂ. 1100ರಿಂದ ಕ್ರಿ. ಶ. 200ರವರೆಗಿನದ್ದು ಎಂದು ಗುರುತಿಸಬಹುದಾಗಿದೆ.