ಮೌಂಟ್ ಮಾಂಗನಿ: ಬೆನ್ ಸ್ಟೋಕ್ಸ್ ಅವರ ಆಲ್‌ರೌಂಡ್ ಪ್ರದರ್ಶನದಿಂದ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡಿಗೆ ತಿರುಗೇಟು ನೀಡುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿದೆ. 6 ವಿಕೆಟ್ ಜಯದೊಂದಿಗೆ ಸರಣಿಯನ್ನು ಸಮಬಲಕ್ಕೆ ತಂದಿದೆ.
ಬುಧವಾರ ಇಲ್ಲಿ ನಡೆದ ಮುಖಾಮುಖೀಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ 49.4 ಓವರ್‌ಗಳಲ್ಲಿ 223 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿದರೆ, ಇಂಗ್ಲೆಂಡ್ 37.5 ಓವರ್‌ಗಳಲ್ಲಿ 4 ವಿಕೆಟಿಗೆ 225 ರನ್ ಬಾರಿಸಿ ಗೆಲುವು ಸಾಧಿಸಿತು.
ಇದರೊಂದಿಗೆ 5 ಪಂದ್ಯಗಳ ಸರಣಿ 1-1ಕ್ಕೆ ಬಂದಿದ್ದು, ಮಾ. 3ರಂದು ವೆಲ್ಲಿಂಗ್ಟನ್‌ನಲ್ಲಿ 3ನೇ ಪಂದ್ಯ ನಡೆಯಲಿದೆ. ಮೊದಲ ಪಂದ್ಯವನ್ನು ಕಿವೀಸ್ 3 ವಿಕೆಟ್‌ಗಳಿಂದ ಗೆದ್ದಿತ್ತು. ಬಿಗಿಯಾದ ಫೀಲ್ಡಿಂಗ್ ಹಾಗೂ ವೋಕ್ಸ್, ಅಲಿ ಸ್ಟೋಕ್ಸ್ ಅವರ ನಿಖರ ದಾಳಿಯಿಂದಾಗಿ ನ್ಯೂಜಿಲ್ಯಾಂಡಿನ ದೊಡ್ಡ ಮೊತ್ತದ ಯೋಜನೆ ಫಲಿಸಲಿಲ್ಲ. ಒಟ್ಟು 4 ರನೌಟ್‌ಗಳು ಕಿವೀಸ್ ಸರದಿಗೆ ಭಾರೀ ಹಾನಿ ಉಂಟುಮಾಡಿದವು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದು ಆರಂಭಕಾರ ಮಾರ್ಟಿನ್ ಗಪ್ಟಿಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಮಾತ್ರ. ಗಪ್ಟಿಲ್ 87 ಎಸೆತಗಳಿಂದ 50 ರನ್ ಹೊಡೆದರೆ (7 ಬೌಂಡರಿ), 8ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಸ್ಯಾಂಟ್ನರ್ 52 ಎಸೆತಗಳಿಂದ ಅಜೇಯ 63 ರನ್ ಬಾರಿಸಿದರು (6 ಬೌಂಡರಿ, 1 ಸಿಕ್ಸರ್), ಈ ಮಧ್ಯೆ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 38, ಟಾಮ್ ಲ್ಯಾಥಂ 22 ರನ್ನುಗಳ ಕೊಡುಗೆ ಸಲ್ಲಿಸಿದರು. ಒಂದು ಹಂತದಲ್ಲಿ ನ್ಯೂಜಿಲ್ಯಾಂಡ್ 108 ರನ್ನಿಗೆ 6 ವಿಕೆಟ್ ಕಳೆದುಕೊಂಡಿತ್ತು.
ಚೇತರಿಸಿಕೊಂಡ ಇಂಗ್ಲೆಂಡ್
ಇಂಗ್ಲೆಂಡಿನ ಆರಂಭ ಕೂಡ ಆಘಾತಕಾರಿಯಾಗಿತ್ತು. ಜಾಸನ್ ರಾಯ್ (8) ಮತ್ತು ಜೋ ರೂಟ್ (9) ಬೇಗನೇ ಪೆವಿಲಿಯನ್ ಸೇರಿದ್ದರು. ಆದರೆ ಅನಂತರ ಕ್ರೀಸ್ ಇಳಿದವರೆಲ್ಲ ಜವಾಬ್ದಾರಿಯುತ ಆಟವಾಡಿ ತಂಡವನ್ನು ದಡ ತಲುಪಿಸಿದರು.
ಆರಂಭಕಾರ ಬೇರ್‌ಸ್ಟೊ 37 ರನ್ ಮಾಡಿ 86ರ ಮೊತ್ತದಲ್ಲಿ ಔಟಾದ ಬಳಿಕ ನಾಯಕ ಎವೋನ್ ಮಾರ್ಗನ್, ಬೆನ್ ಸ್ಟೋಕ್ಸ್ ಮತ್ತು ಜಾಸ್ ಬಟ್ಲರ್ ಸೇರಿಕೊಂಡು ಕಿವೀಸ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದರು. ಕಪ್ತಾನನ ಆಟವಾಡಿದ ಮಾರ್ಗನ್ 63 ಎಸೆತಗಳಿಂದ 62 ರನ್ ಹೊಡೆದರೆ (6 ಬೌಂಡರಿ, 3 ಸಿಕ್ಸರ್), ಸ್ಟೋಕ್ಸ್ ಅವರ ಅಜೇಯ ಬ್ಯಾಟಿಂಗ್ ವೇಳೆ 63 ರನ್ ಹರಿದು ಬಂತು (74 ಎಸೆತ, 7 ಬೌಂಡರಿ, 1 ಸಿಕ್ಸರ್). ಇವರಿಬ್ಬರ 4ನೇ ವಿಕೆಟ್ ಜತೆಯಾಟದಲ್ಲಿ 88 ರನ್ ಒಟ್ಟುಗೂಡಿತು. ಬಳಿಕ ಸ್ಟೋಕ್ಸ್-ಬಟ್ಲರ್ ಸೇರಿಕೊಂಡು ಇದೇ ಲಯವನ್ನು ಮುಂದುವರಿಸಿದರು. ಬಿರುಸಿನ ಆಟವಾಡಿದ ಬಟ್ಲರ್ ಕೇವಲ 20 ಎಸೆತಗಳಿಂದ ಅಜೇಯ 36 ರನ್ ಸಿಡಿಸಿದರು (2 ಬೌಂಡರಿ, 3 ಸಿಕ್ಸರ್). 2 ವಿಕೆಟ್ ಕೂಡ ಹಾರಿಸಿದ ಸ್ಟೋಕ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-49.4 ಓವರ್‌ಗಳಲ್ಲಿನ 223 (ಸ್ಯಾಂಟ್ನರ್ ಔಟಾಗದೆ 63, ಗಪ್ಟಿಲ್ 50, ಗ್ರ್ಯಾಂಡ್‌ಹೋಮ್ 38, ಅಲಿ 33ಕ್ಕೆ 2. ವೋಕ್ಸ್ 42ಕ್ಕೆ 2, ಸ್ಟೋಕ್ಸ್ 42ಕ್ಕೆ 2). ಇಂಗ್ಲೆಂಡ್-37.5 ಓವರ್‌ಗಳಲ್ಲಿ 4 ವಿಕೆಟಿಗೆ 225 (ಸ್ಟೋಕ್ಸ್ ಔಟಾಗದೆ 63, ಮಾರ್ಗನ್ 62, ಬಟ್ಲರ್ ಔಟಾಗದೆ 36, ಬೌಲ್ಟ್ 46ಕ್ಕೆ 2).
ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್ .