ಲಕ್ನೋ: ಪ್ಲೇ ಆಫ್ ಪ್ರವೇಶದ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವ ಪಡೆದಿರುವ ಮಂಗಳವಾರದ ಐಪಿಎಲ್ ಮುಖಾಮುಖೀಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟಿಗೆ 177 ರನ್ ಗಳಿಸಿದೆ.
ಆರಂಭಿಕ ಕುಸಿತಕ್ಕೆ ಸಿಲುಕಿದ ತಂಡವನ್ನು ಆಸ್ಟ್ರೇಲಿಯನ್ ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಸಿಡಿಲಬ್ಬರದ ಆಟದ ಮೂಲಕ ಮೇಲೆತ್ತಿದರು. 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಅವರು 89 ರನ್ ಬಾರಿಸಿ ಅಜೇಯರಾಗಿ ಉಳಿದರು. 8 ಸಿಕ್ಸರ್ ಜತೆಗೆ 4 ಬೌಂಡರಿ ಬಾರಿಸಿ ಆತಿಥೇಯ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.
ಲಕ್ನೋ ಕೈಲ್ ಮೇಯರ್ ಗೈರಲ್ಲಿ ಆಡಲಿಳಿದಿತ್ತು. ಜೇಸನ್ ಬೆಹ್ರೆಂಡರ್ಫ್ ತಮ್ಮ ದ್ವಿತೀಯ ಓವರ್‌ನ ಮೊದಲೆರಡು ಎಸೆತಗಳಲ್ಲಿ ಅವಳಿ ಆಘಾತವಿಕ್ಕಿದರು. ದೀಪಕ್ ಹೂಡಾ (5) ಮತ್ತು ಪ್ರೇರಕ್ ಮಂಕಡ್ (0) ಪೆವಿಲಿಯನ್ ಸೇರಿಕೊಂಡರು. ಮತ್ತೂಮ್ಮೆ ಅಗ್ಗಕ್ಕೆ ಔಟಾದ ಹೂಡಾ ಐಪಿಎಲ್ ಋತುವಿನಲ್ಲಿ ಅತೀ ಕಡಿಮೆ 6.90ರ ಸರಾಸರಿ ದಾಖಲಿಸಿದ ಅವಮಾನಕ್ಕೆ ಸಿಲುಕಿದರು (10 ಪ್ಲಸ್ ಇನ್ನಿಂಗ್ಸ್). ಕಳೆದ ಪಂದ್ಯದಲ್ಲಿ ಮಿಂಚಿದ್ದ ಪ್ರೇರಕ್ ಮಂಕಡ್ ಅವರದು ಇಲ್ಲಿ ಗೋಲ್ಡನ್ ಡಕ್ ಸಂಕಟ. ಪವರ್ ಪ್ಲೇ ಅಂತ್ಯಕ್ಕೆ ಲಕ್ನೋ 2 ವಿಕೆಟಿಗೆ 35 ರನ್ ಗಳಿಸಿ ಕುಂಟುತ್ತಿತ್ತು.
7ನೇ ಓವರ್‌ನ ಮೊದಲ ಎಸೆತದಲ್ಲೇ ಪೀಯೂಷ್ ಚಾವ್ಲಾ ಬಲವಾದ ಆಘಾತವಿಕ್ಕಿದರು. ಕ್ವಿಂಟನ್ ಡಿ ಕಾಕ್ (16) ಅವರನ್ನು ವಾಪಸ್ ಕಳುಹಿಸಿದರು. 35ಕ್ಕೆ 3 ವಿಕೆಟ್ ಬಿತ್ತು. ಮುಂದಿನದು ನಾಯಕ ಕೃಣಾಲ್ ಪಾಂಡ್ಯ ಮತ್ತು ಮಾರ್ಕಸ್ ಸ್ಟೋಯಿನಿಸ್ ಜೋಡಿಯ ಆಟ. ಇವರು 16ನೇ ಓವರ್ ತನಕ ಜತೆಯಾಟ ನಿಭಾಯಿಸಿ ಮೊತ್ತವನ್ನು 117ಕ್ಕೆ ತಲುಪಿಸಿದರು. ಆಗ ಪಾಂಡ್ಯ ಗಾಯಾಳಾಗಿ ಕ್ರೀಸ್ ತೊರೆದರು. ಕಪ್ತಾನನ ಕಾಣಿಕೆ 42 ಎಸೆತಗಳಿಂದ 49 ರನ್. ಸಿಡಿಸಿದ್ದು ಒಂದು ಬೌಂಡರಿ, ಒಂದು ಸಿಕ್ಸರ್ ಮಾತ್ರ.
ಲಕ್ನೋ ತಂಡದ ಸ್ಕೋರ್ ಏರಿದ್ದೇ ಅಂತಿಮ 3 ಓವರ್‌ಗಳಲ್ಲಿ. ಈ ಅವಧಿಯಲ್ಲಿ 54 ರನ್ ಹರಿದು ಬಂತು. ಇದಕ್ಕೆ ಕಾರಣ, ಸ್ಟೋಯಿನಿಸ್ ಅವರ ಸಿಡಿಲಬ್ಬರದ ಬ್ಯಾಟಿಂಗ್. ಕ್ರಿಸ್ ಜೋರ್ಡನ್ ಅವರ 18ನೇ ಓವರ್‌ನಲ್ಲಿ ಸ್ಟೋಯಿನಿಸ್ 24 ರನ್ ಚಚ್ಚಿದರು. 2 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಇದು ಒಳಗೊಂಡಿತ್ತು. ಬೆಹ್ರೆಂಡರ್ಫ್ ಅವರ 19ನೇ ಓವರ್‌ನಲ್ಲಿ ಮತ್ತು ಆಕಾಶ್ ಮಧ್ವಾಲ್ ಅವರ ಅಂತಿಮ ಓವರ್‌ನಲ್ಲಿ ತಲಾ 15 ರನ್ ಹರಿದು ಬಂತು. ಆರಂಭದಲ್ಲಿ ಅಮೋಘ ಹಿಡಿತ ಸಾಧಿಸಿದ್ದ ಮುಂಬೈ ಬೌಲರ್ ಕೊನೆಯ ಹಂತದಲ್ಲಿ ಕೈಚೆಲ್ಲಿದರು.