ಮುಂಬಯಿ : ದಾಖಲೆಗಳನ್ನು ಸೃಷ್ಟಿಸುವ ನಿರಂತರ ಮೂರನೇ ದಿನದ ಅಭಿಯಾನದಲ್ಲಿ ಇಂದು ಸೋಮವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಹೊಸ ಸಾರ್ವಕಾಲಿಕ ಎತ್ತರದ ದಾಖಲೆಯನ್ನು ತಲುಪಿವೆ.
ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 251.12 ಅಂಕಗಳ ಏರಿಕೆಯೊಂದಿಗೆ ಹೊಸ ದಾಖಲೆಯ ಎತ್ತರವಾಗಿ 34,834.51 ಅಂಕಗಳ ಮಟ್ಟವನ್ನು ತಲುಪಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 63.30 ಅಂಕಗಳ ಏರಿಕೆಯನ್ನು ಪಡೆದುಕೊಂಡು 10,741.55 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಹೊಸ ದಾಖಲೆಯ ಎತ್ತರದಲ್ಲಿ ಕೊನೆಗೊಳಿಸಿತು.
ಕಳೆದ ನವೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಕಳೆದ 17 ತಿಂಗಳ ಗರಿಷ್ಠವಾಗಿ ಶೇ.8.4ರ ಸಾಧನೆಯನ್ನು ದಾಖಲಿಸಿತು. ಡಿಸೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇ.5.21ಕ್ಕೆ ಏರಿರುವ ಹೊರತಾಗಿಯೂ ಸೆನ್ಸೆಕ್ಸ್, ನಿಫ್ಟಿ ಹೊಸ ಎತ್ತರ ಕಂಡಿರುವುದು ವಿಶೇಷವಾಗಿದೆ.
ಇಂದು 3,117 ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,534 ಶೇರುಗಳು ಮುನ್ನಡೆ ಕಂಡವು; 1,386 ಶೇರುಗಳು ಹಿನ್ನಡೆಗೆ ಗುರಿಯಾದವು; 197 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.