ನವದೆಹಲಿ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಗುರುವಾರ (ಆಗಸ್ಟ್ 12) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ದಾಖಲೆ ಮಟ್ಟದಲ್ಲಿ ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಆಗುಂಬೆ ಬಳಿ ಅಕ್ರಮ ಗೋಮಾಂಸ ಸಾಗಾಟ, ಇಬ್ಬರು ಬಂಧನ
ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 318 ಅಂಕಗಳ ಏರಿಕೆಯೊಂದಿಗೆ 54,844 ಅಂಕಗಳ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 82 ಅಂಕಗಳ ಏರಿಕೆಯೊಂದಿಗೆ ದಾಖಲೆಯ 16,354 ಅಂಕಗಳ ಮಟ್ಟ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಪವರ್ ಗ್ರಿಡ್, ಟೆಕ್ ಮಹೀಂದ್ರಾ, ಎಚ್ ಸಿಎಲ್ ಟೆಕ್, ಎಲ್ ಆ್ಯಂಡ್ ಟಿ, ಟೈಟಾನ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಶೇ.6.05ರಷ್ಟು ಲಾಭಗಳಿಸಿದೆ. ಮತ್ತೊಂದೆಡೆ ಡಾ.ರೆಡ್ಡಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಇಂಡಸ್ ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಮಾರುತಿ ಷೇರುಗಳು ನಷ್ಟ ಕಂಡಿದೆ.
ಗುರುವಾರ ಬೆಳಗ್ಗೆ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 155.90 ಅಂಕ ಏರಿಕೆಯಾಗಿದ್ದು, 54,682.83 ಅಂಕಗಳಲ್ಲಿ ವಹಿವಾಟು ನಡೆಸಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 42.90 ಅಂಕ ಏರಿಕೆಯೊಂದಿಗೆ 16,325.15 ಅಂಕಗಳಲ್ಲಿ ವಹಿವಾಟು ಆರಂಭಿಸಿತ್ತು.