ಮುಂಬೈ: ಜಾಗತಿಕ ಆರ್ಥಿಕ ಹಿಂಜರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬ ಭೀತಿಯ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆ ಮೇಲೂ ಬೀರಿದ್ದು, ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರ (ಸೆ.16) 1,093 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಒಂದೇ ವಾರದಲ್ಲಿ 300 ಕೋಟಿ ಬಾಚಿದ ಬ್ರಹ್ಮಾಸ್ತ್ರ; ಬಾಯ್ಕಾಟ್ ನಡುವೆ ಚಿತ್ರ ಗೆದ್ದಿದ್ಹೇಗೆ?
ಕಳೆದ 3 ತಿಂಗಳ ನಂತರ ಸೆನ್ಸೆಕ್ಸ್ ಭಾರೀ ಕುಸಿತ ಕಂಡಂತಾಗಿದೆ. ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,093.22 ಅಂಕಗಳಷ್ಟು ಕುಸಿತದೊಂದಿಗೆ 58,840.79 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ. ಷೇರುಪೇಟೆಯ ಮಧ್ಯಂತರ ವಹಿವಾಟಿನ ವೇಳೆ ಸೆನ್ಸೆಕ್ಸ್ 1,264.84 ಅಂಕಗಳಷ್ಟು ಇಳಿಕೆಯಾಗಿತ್ತು.
ಎನ್ ಎಸ್ ಇ ನಿಫ್ಟಿ 346.55 ಅಂಕಗಳಷ್ಟು ಕುಸಿತ ಕಂಡಿದ್ದು, 17,530.85 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಟೆಕ್ ಮಹೀಂದ್ರ, ಆಲ್ಟ್ರಾ ಟೆಕ್ ಸಿಮೆಂಟ್, ಇನ್ಫೋಸಿಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ವಿಪ್ರೋ, ಟಿಸಿಎಸ್, ನೆಸ್ಲೆ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಭಾರೀ ನಷ್ಟ ಕಂಡಿವೆ. ಕೇವಲ ಇಂಡಸ್ ಇಂಡ್ ಬ್ಯಾಂಕ್ ಷೇರು ಮಾತ್ರ ಲಾಭಗಳಿಸಿದೆ.
ಜಾಗತಿಕವಾಗಿ ಏಷ್ಯಾ, ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಷೇರು ಮಾರುಕಟ್ಟೆ ವಹಿವಾಟು ಇಳಿಕೆಯೊಂದಿಗೆ ಮುಕ್ತಾಯಗೊಂಡಿದೆ. ಯುರೋಪಿಯನ್ ದೇಶಗಳಲ್ಲಿಯೂ ಷೇರುಪೇಟೆ ಸೆನ್ಸೆಕ್ಸ್ ಕುಸಿತ ಕಂಡಿರುವುದಾಗಿ ವರದಿ ತಿಳಿಸಿದೆ.