ಮುಂಬೈ: ಲೋಕಸಭೆ ಚುನಾವಣ ಫಲಿತಾಂಶದ ದಿನ ದಾಖಲೆ ಪ್ರಮಾಣದ ಇಳಿಕೆ ಕಂಡಿದ್ದ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ (ಜೂನ್ 06) ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 700ಕ್ಕೂ ಅಧಿಕ ಅಂಕಗಳ ಜಿಗಿತ ಕಂಡಿದೆ.
ಇದನ್ನೂ ಓದಿ:Chandrababu Naidu: ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಮುಂದೂಡಿಕೆ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 730.41 ಅಂಕಗಳಷ್ಟು ಏರಿಕೆಯೊಂದಿಗೆ 75,108.63 ಅಂಕಗಳ ಗಡಿ ದಾಟಿ ವಹಿವಾಟು ಮುಂದುವರಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 78.40 ಅಂಕಗಳ ಜಿಗಿತದೊಂದಿಗೆ 22,698.75 ಅಂಕಗಳ ಮಟ್ಟ ತಲುಪಿದೆ.
ಪಿಎಸ್ ಯು(ಪಬ್ಲಿಕ್ ಸೆಕ್ಟರ್ ಯೂನಿಟ್) ಷೇರುಗಳಾದ ಬ್ಯಾಂಕ್, ರಿಯಲ್ಟಿ, ಐಟಿ, ಕೋಲ್ ಇಂಡಿಯಾ, ಎನ್ ಟಿಪಿಸಿ, ಒಎನ್ ಜಿಸಿ ದಲಾಲ್ ಸ್ಟೀಟ್ ನಲ್ಲಿ ಭಾರೀ ಲಾಭಗಳಿಸಿವೆ. ಮತ್ತೊಂದೆಡೆ ಹೀರೋ ಮೋಟೊ ಕಾರ್ಪ್, ಎಚ್ ಯುಎಲ್, ಹಿಂಡಲ್ಕೋ, ನೆಸ್ಲೆ ಇಂಡಿಯಾ ಷೇರುಗಳು ನಷ್ಟ ಕಂಡಿದೆ.
ಬುಧವಾರದ ಬೆಳವಣಿಗೆಯಲ್ಲಿ ಎನ್ ಡಿಎ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬ ಸುದ್ದಿ ಪ್ರಸಾರವಾದ ನಂತರ ಷೇರುಪೇಟೆಯ ವಹಿವಾಟು ಭರ್ಜರಿ ಏರಿಕೆ ಕಂಡಿದ್ದು, ಜಾಗತಿಕ ಮಟ್ಟದಲ್ಲೂ ಷೇರು ವಹಿವಾಟು ಧನಾತ್ಮಕವಾಗಿತ್ತು ಎಂದು ರಿಸರ್ಚ್ ಅನಾಲಿಸ್ಟ್ ದೇವೆನ್ ಮೆಹ್ತಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.