ಜಾಗತಿಕ ಷೇರು ಮಾರುಕಟ್ಟೆ ಇಳಿಮುಖದ ಹಂತದಲ್ಲಿರುವಾಗಲೇ ಬಾಂಬೆ ಷೇರು ಪೇಟೆ ಮತ್ತು ನಿಫ್ಟಿ ಸೂಚ್ಯಂಕಗಳಲ್ಲಿ ಕಳೆದ ಒಂದು ವಾರದಲ್ಲಿ ಚೇತರಿಕೆ ಕಂಡುಬಂದಿದೆ.
ವಾರಾಂತ್ಯವಾಗಿರುವ ಶುಕ್ರವಾರ ಕೂಡ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನುವುದು ಗಮನಾರ್ಹವಾಗಿರುವ ಅಂಶ. ಗುರುವಾರಕ್ಕೆ ಮುಕ್ತಾಯವಾಗಿರುವ ಮಾಹಿತಿಯಂತೆ ಸೂಚ್ಯಂಕ ಶೇ.1ರಷ್ಟು ಏರಿಕೆಯಾಗಿತ್ತು. ಒಟ್ಟಾರೆಯಾಗಿ ಹೇಳುವುದಿದ್ದರೆ ಶುಕ್ರವಾರದವರೆಗಿನ ನಾಲ್ಕು ವಹಿವಾಟು ಸೆಷನ್‌ಗಳನ್ನು ತೆಗೆದುಕೊಂಡಾಗ 1,140 ಪಾಯಿಂಟ್ಸ್ ಏರಿಕೆಯಾಗಿದೆ. ನಿಫ್ಟಿ ಲೆಕ್ಕಾಚಾರಕ್ಕೆ ಬಂದಾಗ ಒಟ್ಟಾರೆಯಾಗಿ 352 ಪಾಯಿಂಟ್ಸ್ ಹೆಚ್ಚಿದೆ.
ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದಂತೆ ಹೇಳುವುದಿದ್ದರೆ ಭಾರತದ ಅರ್ಥವ್ಯವಸ್ಥೆಯೇ ಸದೃಢವಾದದ್ದು ಎಂದರೆ ತಪ್ಪಾಗಲಾರದು. ಪಾಕಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾದ ಅರ್ಥವ್ಯವಸ್ಥೆಗಳು ನಮ್ಮ ದೇಶಕ್ಕೆ ಹೋಲಿಕೆ ಮಾಡಿದರೆ ಸದೃಢವಾಗಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿರುವ ಅಂಶ. ಅದಕ್ಕೆ ಪೂರಕವಾಗಿ ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತು ಆ ದೇಶದಲ್ಲಿ ಮತ್ತೊಮ್ಮೆ ಜಾರಿಯಾಗಿರುವ ಕಠಿಣ ಪ್ರತಿಬಂಧಕ ಕ್ರಮಗಳಿಂದಾಗಿ ಅಲ್ಲಿನ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಖಚಿತ. ಹೀಗಾಗಿ, ಹೂಡಿಕೆದಾರರು ನಮ್ಮ ದೇಶದತ್ತ ಒಂದು ಆಶಾಭಾವನೆಯಿಂದ ನೋಡುತ್ತಿದ್ದಾರೆ.
ಅದಕ್ಕೆ ಪೂರಕವಾಗಿಯೇ ಬಿಎಸ್‌ಇ, ನಿಫ್ಟಿ ಸೂಚ್ಯಂಕಗಳಲ್ಲಿ ಏರಿಕೆ ಉಂಟಾಗಿದೆ. ಗುರುವಾರಕ್ಕೆ ಮುಕ್ತಾಯವಾದಂತೆ 762.10 ಪಾಯಿಂಟ್ಸ್ ಏರಿಕೆಯಾಗಿತ್ತು. ಅಮೆರಿಕ ಪೆಡರಲ್ ಸರ್ವಿಸ್ ನಡೆಸಿದ ಸಭೆಯ ಪ್ರಕಾರ ಮುಂದಿನ ದಿನಗಳಲ್ಲಿ ಬಡ್ಡಿ ದರ ಏರಿಕೆಯನ್ನು ಕಡಿಮೆ ಪ್ರಮಾಣಕ್ಕೆ ಇಳಿಸುವ ನಿರ್ಧಾರ ಕೈಗೊಂಡಿರುವುದು ಕೂಡ ವಾರಾಂತ್ಯದ ದಿನ ತೃಪ್ತಿದಾಯಕ ಎನ್ನುವಂಥ ವಹಿವಾಟು ನಡೆದಿದೆ ಎಂದು ಉದ್ದಿಮೆ ಕ್ಷೇತ್ರದ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಇದರ ಜತೆಗೆ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಸದ್ಯಕ್ಕೆ ಕುಸಿತದ ಹಂತದಿಂದ ಬಲವೃದ್ಧಿಯತ್ತ ಹೊರಳಿಕೊಂಡಿರುವುದು ಸಂತೋಷ ತಂದಿದೆ ಎಂದರೆ ತಪ್ಪಾಗಲಾರದು. ವಿದೇಶಗಳಿಂದ ಹೂಡಿಕೆ ಕ್ಷೇತ್ರದಲ್ಲಿ ಹರಿವು ಸರಾಗವಾಗಿ ಇದೆ. ಇದು ಕೂಡ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಏರುವಿಕೆಯ ಹಂತಕ್ಕೆ ಕಾರಣವಾಗಿದೆ. ನ.24 ಮತ್ತು ನ.25ರ ಮಾರುಕಟ್ಟೆಯ ದಾಖಲೆಗಳನ್ನೇ ಗಮನಿಸಿದಾಗ ಈ ಅಂಶ ವೇದ್ಯವಾಗುತ್ತದೆ. ನ.24ರಂದು 23 ಪೈಸೆ, ನ.25ರಂದು 8 ಪೈಸೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತರ ಕರೆನ್ಸಿಗಳ ಎದುರು ಹೋಲಿಕೆ ಮಾಡಿದರೆ, ಮೌಲ್ಯ ಕುಗ್ಗಿತ್ತು. ಹೀಗಾಗಿ, ನಮ್ಮ ದೇಶದ ಕರೆನ್ಸಿಗೆ ಅನುಕೂಲವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.
ಹಣಕಾಸು ಮತ್ತು ಉದ್ದಿಮೆ ಕ್ಷೇತ್ರದ ಪಂಡಿತರು ಮುಂದಿರಿಸುವ ವಾದದ ಪ್ರಕಾರ ಮೇಲ್ನೋಟಕ್ಕೆ ಅಮೆರಿಕದ ಡಾಲರ್ ಎದುರು ರೂಪಾಯಿ ಕುಸಿತಗೊಂಡರೂ ಅದರ ಲಾಭ ನಿಧಾನವಾಗಿಯೇ ನಮ್ಮ ದೇಶದ ಅರ್ಥ ವ್ಯವಸ್ಥೆಗೆ ಆಗುತ್ತದೆ. ಈಗಾಗಲೇ ಜಗತ್ತಿನ ಪ್ರಮುಖ ಶಸ್ತ್ರಾಸ್ತ್ರ, ಮೊಬೈಲ್ ಉತ್ಪಾದನೆ ಮಾಡುವ, ವಾಹನ ತಯಾರಿಕಾ ಕಂಪನಿಗಳು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೂಡಿಕೆ ಮಾಡಿವೆ. ಈ ಪೈಕಿ ಕೆಲವೊಂದು ಆರಂಭಿಕ ಹಂತದಲ್ಲಿ ಇದ್ದರೆ, ಮತ್ತೆ ಕೆಲವು ಅನುಷ್ಠಾನದ ವಿವಿಧ ಹಂತಗಳಲ್ಲಿ ಇವೆ. ಒಟ್ಟಿನಲ್ಲಿ ಹೇಳುವುದಿದ್ದರೆ, ಪ್ರಸಕ್ತ ವಾರದ ಷೇರು ಪೇಟೆಯಲ್ಲಿ ಉಂಟಾಗಿರುವ ಧನಾತ್ಮಕ ಬೆಳವಣಿಗೆಯು ಮುಂದಿನ ದಿನಗಳಿಗೆ ಸಂಬಂಧಿಸಿದಂತೆ ಉತ್ತಮ ಅವಕಾಶಗಳು ದೇಶದತ್ತ ಹರಿದು ಬರಲಿದೆ ಎನ್ನುವುದಂತೂ ಸತ್ಯ.