ಮುಂಬೈ: ವಾಣಿಜ್ಯ ನಗರಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಬುಧವಾರದ (ಅಕ್ಟೋಬರ್ 14, 2020) ಆರಂಭಿಕ ವಹಿವಾಟು ಮಂದಗತಿಯಲ್ಲಿ ಸಾಗಿರುವುದಾಗಿ ವರದಿ ತಿಳಿಸಿದೆ.
ಲಾಕ್ ಡೌನ್ ಅವಧಿಯಲ್ಲಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಮತ್ತೆ ನಡೆಸಲಿರುವ ನಿಟ್ಟಿನಲ್ಲಿ ಶೇರುಮಾರುಕಟ್ಟೆ ವಹಿವಾಟಿನ ಮೇಲೆ ಕರಿನೆರಳು ಬೀರಿದೆ.
ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಬೆಳಗ್ಗಿನ ವಹಿವಾಟಿನಲ್ಲಿ 200 ಅಂಕಗಳ ಕುಸಿತದೊಂದಿಗೆ 40,340 ಹಂತದಲ್ಲಿ ವಹಿವಾಟು ನಡೆಯುತ್ತಿದೆ ಎಂದು ಶೇರುಪೇಟೆ ಮೂಲಗಳು ಹೇಳಿವೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 50 ಅಂಕಗಳಷ್ಟು ಇಳಿಕೆ ಕಂಡಿದ್ದು, ದಿನದ ವಹಿವಾಟು 11,900 ಮಟ್ಟದಲ್ಲಿ ಮುಂದುವರಿದಿರುವುದಾಗಿ ವರದಿ ತಿಳಿಸಿದೆ. ಶೇರು ಮಾರುಕಟ್ಟೆ ವಹಿವಾಟು ಕುಸಿತದಿಂದ ಓಎನ್ ಜಿಸಿ, ಪವರ್ ಗ್ರಿಡ್, ಎನ್ ಟಿಪಿಸಿ ಮತ್ತು ಇಂಡಸ್ ಲ್ಯಾಂಡ್ ಬ್ಯಾಂಕ್ ನ ಶೇರು ಕುಸಿತ ಕಂಡಿದೆ.
ಟಾಟಾ ಸ್ಟೀಲ್ ಶೇರು ಶೇ.1ರಷ್ಟು ಲಾಭಾಂಶ ಕಂಡಿದೆ. ವಿಪ್ರೋ ಶೇರು ಶೇ.6ರಷ್ಟು ನಷ್ಟ ಅನುಭವಿಸಿದೆ. ಕರ್ನಾಟಕ ಬ್ಯಾಂಕ್ ಸೆಪ್ಟೆಂಬರ್ ತ್ರೈಮಾಸಿಕ ಲಾಭಾಂಶ ಘೋಷಿಸಿದ ನಂತರ ಶೇ.5ರಷ್ಟು ಏರಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.