Advertisement
65 ಸಾವಿರ ಅಂಕ ದಾಟಿದೆ. ನಿಫ್ಟಿಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಹಾಗಾದರೆ ಈ ಸಂಭ್ರಮಕ್ಕೆ ಏನು ಕಾರಣ? ಭಾರತದ ಷೇರು ಮಾರುಕಟ್ಟೆಯ ಸೂಚ್ಯಂಕದಲ್ಲಿ ಈ ಪರಿಯ ಏರಿಕೆ ಕಾಣುತ್ತಿರುವುದೇಕೆ? ಇಲ್ಲಿದೆ ಒಂದು ನೋಟ…
Related Articles
Advertisement
ಸೆಕ್ಯುರಿಟೀಸ್ ಮತ್ತು ಹಣಕಾಸು ಆಸ್ತಿಗಳನ್ನು ಹೊಂದಿರುವಂಥ ವಿದೇಶಿ ಬಂಡವಾಳದಾರರನ್ನು ವಿದೇಶಿ ಬಂಡವಾಳ ಹೂಡಿಕೆ(ಎಫ್ ಪಿಐ)ದಾರರು ಎಂದು ಕರೆಯಲಾಗುತ್ತದೆ. ಈ ಹೂಡಿಕೆದಾರರಿಗೆ ಕಂಪೆನಿ ಆಸ್ತಿಗಳ ಮೇಲೆ ನೇರವಾದ ಮಾಲಕತ್ವ ಸಿಗುವುದಿಲ್ಲ. ವಿದೇಶಿ ನೇರ ಬಂಡವಾಳ(ಎಫ್ಡಿಐ)ನಂತೆಯೇ ಇದೂ ವಿದೇಶಿ ಹೂಡಿಕೆದಾರರಿಗೆ ಬೇರೆ ದೇಶಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಜಗತ್ತಿನ ಬಹುತೇಕ ರಾಜ್ಯಗಳಿಗೆ ಬಂಡವಾಳದ ಪ್ರಮುಖ ಮೂಲವೇ ಎಫ್ಡಿಐ ಮತ್ತು ಎಫ್ಪಿಐ.
ಎಫ್ ಪಿ ಐನೊಳಗೆ ಬರುವುದು ಏನು?
ಷೇರುಗಳು
ಅಮೆರಿಕನ್ ಡಿಪಾಸಿಟರಿ ರೆಸಿಪ್ಟ್ (ಎಡಿಆರ್)
ಗ್ಲೋಬಲ್ ಡಿಪಾಸಿಟರಿ ರಿಸಿಪ್ಟ್ (ಜಿಡಿಆರ್)
ಬಾಂಡ್‌ಗಳು
ಮ್ಯೂಚ್ಯುವಲ್ ಫಂಡ್‌ಗಳು
ವಿನಿಮಯ ನಿಧಿಗಳು
ಮಾರುಕಟ್ಟೆ ಏರಿಕೆಗೆ ಕಾರಣಗಳೇನು?
ಮಾರುಕಟ್ಟೆ ತಜ್ಞರ ಪ್ರಕಾರ, ಮುಂಬಯಿ ಷೇರು ಮಾರುಕಟ್ಟೆಯ ಸೂಚ್ಯಂಕ 65 ಸಾವಿರಕ್ಕಿಂತ ಮೇಲೇರಲು ವಿದೇಶಿ ಬಂಡವಾಳ ಹೂಡಿಕೆ(ಎಫ್ ಪಿಐ)ಕಾರಣ. ಅಷ್ಟೇ ಅಲ್ಲ, ಜಾಗತಿಕ ಮಾರುಕಟ್ಟೆಗಳಲ್ಲಿ ಧನಾತ್ಮಕ ಪರಿಣಾಮ, ಹಣದುಬ್ಬರ ನಿಗ್ರಹಿಸುವ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡಿರುವ ಕ್ರಮಗಳು, ಅಮೆರಿಕದ ಷೇರುಮಾರುಕಟ್ಟೆಯಲ್ಲಿನ ಏರಿಕೆ, 2024ರ ಮೊದಲ ತ್ತೈಮಾಸಿಕದಲ್ಲಿ ಅಮೆರಿಕ ಜಿಡಿಪಿ ಶೇ.2ರಷ್ಟು ಪ್ರಗತಿ ಸೂಚ್ಯಂಕ ಏರಿಕೆಯಾಗಲು ಕಾರಣಗಳಾಗಿವೆ. ಅಲ್ಲದೆ ಅಮೆರಿಕ ಮಾರುಕಟ್ಟೆ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಇದು ಜಾಗತಿಕ ಮಾರುಕಟ್ಟೆ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆ.
ಉಳಿದಂತೆ ಜಿಎಸ್‌ಟಿ ಸಂಗ್ರಹದಲ್ಲಿ ಗಣನೀಯ ಏರಿಕೆ, ಜುಲೈಯಲ್ಲಿ ದೇಶಾದ್ಯಂತ ಉತ್ತಮ ಮುಂಗಾರು ಮಳೆ ನಿರೀಕ್ಷೆ, ಜಾಗತಿಕವಾಗಿ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿಡುವ ನಿರೀಕ್ಷೆ, ಅಮೆರಿಕದ ಹಣದುಬ್ಬರ ಪ್ರಮಾಣ ಇಳಿಕೆಯೂ ಇಲ್ಲಿ ಉತ್ತಮ ಪರಿಣಾಮಕ್ಕೆ ಕಾರಣವಾಗುತ್ತಿದೆ. ಜತೆಗೆ ಭಾರತದಲ್ಲಿ ಉತ್ಪಾದನ ಚಟುವಟಿಕೆಗಳಲ್ಲಿ ಉತ್ತಮ ಪ್ರಗತಿ ಕಂಡಿದೆ. ಈ ಮೂಲಕ ಬೇಡಿಕೆಯಲ್ಲಿ ಸ್ಥಿರತೆ ಕಾಣಬಹುದು ಎಂಬ ನಿರೀಕ್ಷೆಯೂ ಇದೆ. ಇನ್ನು ಬೇರೆ ದೇಶಗಳ ಆರ್ಥಿಕತೆಗಳಿಗೆ ಹೋಲಿಕೆ ಮಾಡಿದರೆ, ಭಾರತದ ಆರ್ಥಿಕತೆ ಹೆಚ್ಚು ಸ್ಥಿರವಾಗಿದೆ. ಹಾಗೆಯೇ ಹಣದುಬ್ಬರವೂ ನಿಯಂತ್ರಣಕ್ಕೆ ಬಂದಿದೆ. ಸ್ಥಿರವಾದ ಸರಕಾರ, ಸ್ಥಿರವಾದ ಆರ್ಥಿಕತೆಯಿಂದಾಗಿ ಎಫ್ಪಿಐ ಮಟ್ಟ ಏರಿಕೆಯಾಗಿದೆ ಎಂಬುದು ತಜ್ಞರ ಅಂಬೋಣ.
ಎಫ್ ಪಿಐ ಜಾದೂ
ಈ ಮೊದಲೇ ಹೇಳಿದ ಹಾಗೆ ವಿದೇಶಿ ಬಂಡವಾಳ ಹೂಡಿಕೆಯಲ್ಲಿನ ಹೆಚ್ಚಳವೂ ಮುಂಬಯಿ ಷೇರುಪೇಟೆ ಮತ್ತು ನಿಫ್ಟಿ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದೆ. ಎಪ್ರಿಲ್-ಜೂನ್ ತ್ತೈಮಾಸಿಕದಲ್ಲಿ ಎಫ್ಪಿಐ ಪ್ರಮಾಣ 1.2 ಲಕ್ಷ ಕೋಟಿ ರೂ.ಗಳಷ್ಟಾಗಿದೆ. ಅಂದರೆ ಈ ಪ್ರಮಾಣದ ಹಣ ಷೇರುಗಳ ಮೇಲೆ ಹರಿದಿದೆ. ಜೂ.30ರಂದು ಒಂದೇ ದಿನ 14,803 ಕೋಟಿ ರೂ.ಗಳಷ್ಟು ಬಂಡವಾಳ ಬಂದಿದೆ. ಹೀಗಾಗಿಯೇ ಆ ದಿನ ಸೂಚ್ಯಂಕ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅಲ್ಲದೆ ನ್ಯಾಶನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಪ್ರಕಾರ ಮೊದಲ ತ್ತೈಮಾಸಿಕದಲ್ಲಿ ಪ್ರತೀ ದಿನವೂ 1,1000 ಕೋಟಿ ರೂ.ಗಳಷ್ಟು ಬಂಡವಾಳ ಹರಿದು ಬಂದಿದೆ.
ಅಲ್ಲದೆ ಜೂನ್‌ನಲ್ಲಿ ವಿದೇಶಿ ಬಂಡವಾಳ ಹರಿವಿನ ಪ್ರಮಾಣ 47,148 ಕೋಟಿ ರೂ.ಗಳಷ್ಟಾಗಿದೆ. 2022ರ ಆಗಸ್ಟ್‌ನ ಬಳಿಕ ಈ ಪ್ರಮಾಣದ ವಿದೇಶಿ ಬಂಡವಾಳ ಹರಿದು ಬಂದಿರುವುದು ಇದೇ ಮೊದಲು.
ದೇಶೀಯ ಸಂಸ್ಥೆಗಳ ಯಥಾಸ್ಥಿತಿ ವಾದ
ವಿಶೇಷವೆಂದರೆ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಿದ್ದರೂ, ಎಲ್‌ಐಸಿ, ವಿಮಾ ಕಂಪೆನಿಗಳು ಮತ್ತು ಮ್ಯೂಚ್ಯುವಲ್ ಫಂಡ್ ಸಂಸ್ಥೆಗಳಂಥ ದೇಶೀಯ ಸಂಸ್ಥೆಗಳು ಮಾರಾಟ- ಖರೀದಿ ಸಂಭ್ರಮದಲ್ಲಿ ಅಷ್ಟಾಗಿ ಭಾಗಿಯಾಗುತ್ತಿಲ್ಲ. ಅಂದರೆ ಕಳೆದ ಹಣಕಾಸು ವರ್ಷದ ಕಡೆಯ ಎರಡೂ ತ್ತೈಮಾಸಿಕಗಳಲ್ಲಿ ಷೇರುಮಾರುಕಟ್ಟೆ ಹಿನ್ನಡೆ ಅನುಭವಿಸುತ್ತಿತ್ತು. ಆಗ ಇದೇ ಕಂಪೆನಿಗಳು ಹೆಚ್ಚಾಗಿ ಷೇರುಗಳ ಖರೀದಿಯಲ್ಲಿ ತೊಡಗಿದ್ದವು. ಕಳೆದ ವರ್ಷದ ಕಡೇ ತ್ತೈಮಾಸಿಕದಲ್ಲಿ ದೇಶೀಯ ಸಂಸ್ಥೆಗಳು 83 ಸಾವಿರ ಕೋಟಿ ರೂ. ಮೌಲ್ಯದ ಷೇರು ಖರೀದಿಸಿದ್ದರೆ, ಎಫ್ಪಿಐ 50 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿತ್ತು.
40 ಸಾವಿರದಿಂದ 65 ಸಾವಿರದ ವರೆಗೆ
ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಶುರುವಾಗಿದ್ದೇ 2019ರ ಅನಂತರ. ಅಂದರೆ ಅದೇ ವರ್ಷದ ಜೂ.27ರಂದು ಷೇರು ಮಾರುಕಟ್ಟೆ 40,000 ಅಂಕಗಳನ್ನು ಮುಟ್ಟಿ ಹೊಸ ದಾಖಲೆ ಬರೆಯಿತು. ಆದರೆ 40,000ದಿಂದ 45 ಸಾವಿರಕ್ಕೆ ತಲುಪಲು 352 ದಿನಗಳನ್ನು ತೆಗೆದುಕೊಂಡಿತು. ಆದರೆ ಅನಂತರದಲ್ಲಿ 45ರಿಂದ 50ಕ್ಕೆ ಕೇವಲ 33 ದಿನ, 50ರಿಂದ 55ಕ್ಕೆ 138 ದಿನ, 55ರಿಂದ 60 ಸಾವಿರಕ್ಕೆ 28 ದಿನ ಮತ್ತು 60ರಿಂದ 65 ಸಾವಿರಕ್ಕೆ ಮುಟ್ಟಲು ಬರೋಬ್ಬರಿ 438 ದಿನ ತೆಗೆದುಕೊಂಡಿದೆ. ಅಂದರೆ ಜಾಗತಿಕ ಷೇರುಪೇಟೆಗಳ ತೊಯ್ದಾಟದಿಂದಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲದ ವರೆಗೆ ಷೇರುಪೇಟೆ 60 ಸಾವಿರದ ಆಸುಪಾಸಿನಲ್ಲೇ ಇತ್ತು.
ಎಫ್ ಪಿಐ V/s ಎಫ್ ಡಿಐ
ಎಫ್ ಪಿಐ: ಹೂಡಿಕೆ ಮಾಡಿರುವ ಕಂಪೆನಿಯಲ್ಲಿ ಹೂಡಿಕೆದಾರ ಸಕ್ರಿಯನಾಗಿ ಇರುವುದಿಲ್ಲ. ಅಲ್ಲದೆ ಆ ಕಂಪೆನಿಯ ಆಸ್ತಿಗಳು ಅಥವಾ ಮಾಲಕತ್ವದ ಮೇಲೂ ಯಾವುದೇ ನಿಯಂತ್ರಣ ಇರುವುದಿಲ್ಲ. ಇದರ ಅನುಕೂಲಗಳೆಂದರೆ ಚಿಲ್ಲರೆ ಹೂಡಿಕೆದಾರರಿಗೆ ಉತ್ತಮ. ಹೂಡಿಕೆಯಿಂದ ತತ್‌ಕ್ಷಣದಲ್ಲೇ ವಾಪಸ್ ಲಾಭ.
ಎಫ್ ಡಿಐ: ನೇರ ಬಂಡವಾಳ ಹೂಡಿಕೆಯಲ್ಲಿ ಹೂಡಿಕೆದಾರರೊಬ್ಬರು ಬೇರೆ ದೇಶವೊಂದರಲ್ಲಿ ನೇರವಾಗಿ ಉದ್ಯಮ ಆಸಕ್ತಿ ತೋರಬಹುದು. ಅಂದರೆ ನ್ಯೂಯಾರ್ಕ್‌ನ ಕಂಪೆನಿಯೊಂದು, ಜರ್ಮನಿಯ ಬರ್ಲಿನ್‌ನಲ್ಲಿ ಶೈತ್ಯಾಗಾರವೊಂದನ್ನು ಗುತ್ತಿಗೆಗೆ ಪಡೆಯಬಹುದು. ಈ ಮೂಲಕ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡಿಕೊಳ್ಳಬಹುದು. ಇದರಲ್ಲಿ ಹೂಡಿಕೆದಾರ ದೀರ್ಘಾವಧಿಯಲ್ಲಿ ಲಾಭ ಪಡೆಯಲು ನೋಡುತ್ತಿರುತ್ತಾನೆ. ಅಲ್ಲದೆ ಕಂಪೆನಿಯ ದೈನಂದಿನ ವ್ಯವಹಾರದಲ್ಲೂ ವಿದೇಶಿ ನೇರ ಹೂಡಿಕೆದಾರ ತಲೆಹಾಕಬಹುದು.