Advertisement

ಷೇರುಪೇಟೆ: ನಾಗಾಲೋಟಕ್ಕೆ ಬ್ರೇಕ್‌

01:07 AM Jan 07, 2021 | Team Udayavani |

ಮುಂಬಯಿ: ಸತತ 10 ದಿನಗಳ ಷೇರುಪೇಟೆಯ ನಾಗಾಲೋಟಕ್ಕೆ ಬುಧವಾರ ಬ್ರೇಕ್‌ ಬಿದ್ದಿದೆ. ಜಾಗತಿಕ ಬೆಳವಣಿಗೆಗಳು ಮುಂಬಯಿ ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ರಿಲಯನ್ಸ್‌ ಇಂಡಸ್ಟ್ರೀಸ್‌, ಐಟಿ, ಹಣಕಾಸು, ಎಫ್ಎಂಸಿಜಿ ಷೇರುಗಳ ಮಾರಾಟದಲ್ಲಿ ತೊಡಗಿದ ಕಾರಣ ಬಿಎಸ್‌ಇ ಸೆನ್ಸೆಕ್ಸ್‌ 263.72 ಅಂಕಗಳ ಕುಸಿತ ದಾಖಲಿಸಿ, 48,174ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Advertisement

ಮಧ್ಯಾಂತರ ವಹಿವಾಟಿನ ಒಂದು ಹಂತದಲ್ಲಿ ಇದು 48,616.66ಕ್ಕೆ ತಲುಪಿತ್ತು. ಇದೇ ವೇಳೆ, ನಿಫ್ಟಿ 53.25 ಅಂಕಗಳಷ್ಟು ಕುಸಿದು, 14,146ರಲ್ಲಿ ಕೊನೆಗೊಂಡಿತು. ಐಟಿಸಿ ಷೇರುಗಳು ಶೇ. 2.86ರಷ್ಟು ಭಾರೀ ನಷ್ಟ ಅನುಭವಿಸಿದರೆ, ರಿಲಯನ್ಸ್‌ ಇಂಡಸ್ಟ್ರೀಸ್‌, ಬಜಾಜ್‌ ಫೈನಾನ್ಸ್‌, ಆ್ಯಕ್ಸಿಸ್‌ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌ ಮತ್ತು ಎಚ್‌ಯುಎಲ್‌ ಷೇರುಗಳೂ ಕುಸಿತ ಕಂಡವು. ಇನ್ನೊಂದೆಡೆ, ಪವರ್‌ಗ್ರಿಡ್‌, ಭಾರ್ತಿ ಏರ್‌ಟೆಲ್‌, ಒಎನ್‌ಜಿಸಿ, ಅಲ್ಟ್ರಾಟೆಕ್‌ ಸಿಮೆಂಟ್‌ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳು ಲಾಭ ಗಳಿಸಿದವು.

ಜಾರ್ಜಿಯಾದಲ್ಲಿ ನಡೆದ ಚುನಾವಣೆಯು ಡೆಮಾಕ್ರಾಟ್‌ಗಳಿಗೆ ಸೆನೇಟ್‌ನಲ್ಲಿ ಹಿಡಿತ ಸಾಧಿಸಲು ಅನುಕೂಲ ಕಲ್ಪಿಸಲಿದೆ ಎಂಬ ಸುದ್ದಿಯೂ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತಕ್ಕೆ ಕಾರಣವಾಯಿತು. ಡೆಮಾಕ್ರಾಟ್‌ಗಳ ಪರ ಫ‌ಲಿತಾಂಶ ಬಂದರೆ, ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌, ಕಾರ್ಪೋರೆಟ್‌ ತೆರಿಗೆ ಹೆಚ್ಚಳ ಮಾಡುವ ಯೋಜನೆ ಜಾರಿ ಮಾಡಬಹುದು ಎಂಬುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿತು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಚಿನ್ನದ ದರ ಕುಸಿತ:ದಿಲ್ಲಿ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ದರ 71 ರೂ. ಕುಸಿತವಾಗಿ, 10 ಗ್ರಾಂ.ಗೆ 51,125 ರೂ.ಗೆ ತಲುಪಿದೆ. ಬೆಳ್ಳಿ ದರ 156 ರೂ. ಏರಿಕೆಯಾಗಿದ್ದು, ಕೆಜಿಗೆ 70,082 ರೂ. ಆಗಿದೆ. ರೂಪಾಯಿ ಮೌಲ್ಯ 73.11ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next