ಮುಂಬಯಿ: ವಿಶ್ವಾದ್ಯಂತ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೆ ಆಗಲಿರುವ ಪರಿಣಾಮದ ಭೀತಿಯ ಹಿನ್ನೆಲೆಯಲ್ಲಿ ಸೋಮವಾರ (ಡಿ.20) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಪಾತಾಳಕ್ಕೆ ಕುಸಿಯುವ ಮೂಲಕ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ:ಆ್ಯಶಸ್ ಸರಣಿ: ಅಜೇಯ ದಾಖಲೆ ಮುಂದುವರಿಸಿದ ಆಸೀಸ್; ಮತ್ತೆ ಮುಗ್ಗರಿಸಿದ ಇಂಗ್ಲೆಂಡ್
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 1,189.73 ಅಂಕಗಳಷ್ಟು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 55,822.01 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 371.00 ಅಂಕ ಇಳಿಕೆಯೊಂದಿಗೆ 16,614.20 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಬಿಪಿಸಿಎಲ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಇಂಡಸ್ ಇಂಡ್ ಬ್ಯಾಂಕ್, ಎಸ್ ಬಿಐ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಸಿಪ್ಲಾ, ಎಚ್ ಯುಎಲ್ ಮತ್ತು ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಷೇರುಗಳು ಲಾಭಗಳಿಸಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಬರೋಬ್ಬರಿ 1,879 ಅಂಕಗಳಷ್ಟು ಕುಸಿತ ಕಂಡಿದ್ದು, ಇದು ಫೆಬ್ರುವರಿ 26ರ ನಂತರ ಒಂದೇ ದಿನದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ದಾಖಲಿಸಿದಂತಾಗಿದೆ. ಎನ್ ಎಸ್ ಇ ನಿಫ್ಟಿ ಕೂಡಾ 16,450ರ ಮಟ್ಟದಲ್ಲಿದ್ದು, ಮಧ್ಯಂತರ ವಹಿವಾಟಿನ ವೇಳೆ 16,410ಕ್ಕೆ ಕುಸಿದಿತ್ತು.