ಮುಂಬಯಿ: ರಷ್ಯಾ, ಉಕ್ರೇನ್ ಯುದ್ಧ ಭೀಕರ ಸ್ವರೂಪ ಪಡೆಯುತ್ತಿದ್ದು, ಮತ್ತೊಂದೆಡೆ ತೈಲ ಬೆಲೆ ಹೆಚ್ಚಳವಾದ ಪರಿಣಾಮ ಸೋಮವಾರ (ಮಾರ್ಚ್ 07) ಮುಂಬಯಿ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಪತನ ಕಂಡಿದೆ.
ಇದನ್ನೂ ಓದಿ:ಕಾರ್ಕಳ; ವೈಷಮ್ಯಕ್ಕೆ ಒಡಹುಟ್ಟಿದ ಅಣ್ಣನನ್ನು ಇರಿದು ಕೊಂದ ತಮ್ಮ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,537.22 ಅಂಕಗಳಷ್ಟು ಭಾರೀ ಕುಸಿತ ಕಂಡಿದ್ದು, 52,796.59 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 433.65 ಅಂಕ ಪತನಗೊಂಡಿದ್ದು, 15,811.70 ಅಂಕಗಳ ಮಟ್ಟ ತಲುಪಿದ್ದು, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಕಳೆದ ವಾರವೂ ಕೂಡಾ ರಷ್ಯಾ ಯುದ್ಧ, ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆಯಲ್ಲೇ ವಹಿವಾಟು ನಡೆಸಿದ್ದು, ಹೂಡಿಕೆದಾರರು ಭಾರೀ ಪ್ರಮಾಣದ ನಷ್ಟ ಅನುಭವಿಸುವಂತಾಗಿತ್ತು.
ಸೆನ್ಸೆಕ್ಸ್ ಇಳಿಕೆಯಿಂದಾಗಿ ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಅಶೋಕ್ ಲೇಲ್ಯಾಂಡ್, ಈಚರ್ ಮೋಟಾರ್ಸ್, ಟಾಟಾ ಮೋಟಾರ್ಸ್ ಷೇರುಗಳು ಭಾರೀ ನಷ್ಟ ಕಂಡಿದೆ.
ಮುಂಬಯಿ ಷೇರುಪೇಟೆ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,600 ಅಂಕಗಳಷ್ಟು ಕುಸಿತ ಕಂಡಿತ್ತು. ಇಂದಿನ ವಹಿವಾಟಿನಲ್ಲಿ ನಿಫ್ಟಿ 50ರಲ್ಲಿ ಹಿಂಡಲ್ಕೋ, ಕೋಲ್ ಇಂಡಿಯಾ, ಒಎನ್ ಜಿಸಿ ಮತ್ತು ಟಾಟಾ ಸ್ಟೀಲ್ ಷೇರುಗಳು ಮಾತ್ರ ಲಾಭ ಗಳಿಸಿದೆ.