Advertisement

ಧರ್ಮಾಘಾತ ಇದಿರಿಸುವ ಶಕ್ತಿ: ಪೇಜಾವರ ಶ್ರೀಗಳ ಹಾರೈಕೆ

11:22 AM Nov 24, 2017 | Team Udayavani |

ಉಡುಪಿ: ಐತಿಹಾಸಿಕವೆನಿಸಲಿರುವ ಧರ್ಮಸಂಸದ್‌ ಅಧಿವೇಶನ ನಡೆಯಲು ಕ್ಷಣಗಣನೆ ನಡೆಯುತ್ತಿರುವಾಗ ಇದರ ರೂವಾರಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು “ಜನರಲ್ಲಿ ಧರ್ಮಾಭಿಮಾನ ಜಾಗೃತಿಯಾಗಬೇಕು, ಧರ್ಮಕ್ಕೆ ಆಘಾತವಾದಾಗ ಅದನ್ನು ಇದಿರಿಸುವ ಶಕ್ತಿ ಸಂಪನ್ನರಾಗಬೇಕು’ ಎಂದು ಕರೆ ನೀಡಿದ್ದಾರೆ.

Advertisement

ಆಗ ಬೀಗ- ಈಗ ಕಾರಾಗೃಹ
1985 ಮತ್ತು ಈಗಿನ ಧರ್ಮಸಂಸದ್‌ ನಿರ್ಣಯದಲ್ಲಿ ವಿಶೇಷವಾಗಿ ಅಯೋಧ್ಯೆಗೆ ಸಂಬಂಧಿಸಿ ಒಂದೇ ತೆರನಾಗಿದೆಯಲ್ಲ ಎಂಬ “ಉದಯವಾಣಿ’ ಪ್ರತಿನಿಧಿಯ ಪ್ರಶ್ನೆಗೆ ಉತ್ತರಿಸಿದ ಅವರು, 1985ರಲ್ಲಿ ರಾಮಜನ್ಮಭೂಮಿಯ ದರ್ಶನ ಸಾರ್ವಜನಿಕರಿಗೆ ಇದ್ದಿರಲಿಲ್ಲ. ಆಗ ಅದಕ್ಕಾಗಿ ಸಾರ್ವಜನಿಕ ಪ್ರವೇಶ ಕೊಡಬೇಕು ಎಂದು ಆಗ್ರಹಿಸಿದ್ದೆವು. ಈಗ ಪರಿಸ್ಥಿತಿ ಬೇರೆ ಇದೆ. ಸಾರ್ವಜನಿಕ ಪ್ರವೇಶವಿದ್ದರೂ ಈಗ ರಾಮನ ದರ್ಶನವನ್ನು ಕಬ್ಬಿಣದ ಸರಳುಗಳಿಂದ ಕೂಡಿದ ಕಾರಾಗೃಹದಲ್ಲಿ ಮಾಡಬೇಕಾಗಿದೆ. ಕೃಷ್ಣ, ರಾಮ ಇಬ್ಬರೂ ಬಂದಿಗಳಾಗಿರುವುದು ಖೇದನೀಯ ಎಂದರು.

ಅಸ್ಪೃಶ್ಯತೆ ನಿವಾರಣೆಗೆ ಇನ್ನಷ್ಟು  ಪ್ರಯತ್ನ
ಧರ್ಮಸಂಸದ್‌ನಲ್ಲಿ ನಡೆದ ನಿರ್ಣಯಗಳು ಎಲ್ಲವೂ ಕೈಗೂಡಿವೆಯೆ ಎಂದು ಪ್ರಶ್ನಿಸಿದರೆ, “ಎಲ್ಲವೂ ನಡೆಯುತ್ತವೆ ಎಂದು ಹೇಳಲಾಗದು. ಕೈಗೂಡಲಿಲ್ಲ ಎಂದ ಮಾತ್ರಕ್ಕೆ ಸುಮ್ಮನೆ ಕೂರಲೂ ಆಗದು. ಕೆಲವು ನಿರ್ಣಯಕ್ಕೆ ವ್ಯತಿರಿಕ್ತವಾಗಿ ಆಗುವುದೂ ಇದೆ. ಉದಾಹರಣೆಗೆ ಅಯೋಧ್ಯೆಯಲ್ಲಿ ಮಂದಿರ ಪಕ್ಕದಲ್ಲಿ ಶಾಂತಿಯುತ ಕರಸೇವೆ ನಡೆಯಬೇಕೆಂಬ ತೀರ್ಮಾನವಾಗಿದ್ದರೂ ದಿಢೀರ್‌ ಆಗಿ ಹಳೆಯ ಕಟ್ಟಡವನ್ನು ಕೆಡವಲಾಯಿತು. ನಾವು ತಡೆದರೂ ಅದು ಸಾಧ್ಯವಾಗಲಿಲ್ಲ. ಅಸ್ಪೃಶ್ಯತೆ ವಿರುದ್ಧದ ನಮ್ಮ ಹೋರಾಟದಿಂದ ಬಹಳಷ್ಟು ಪ್ರಯೋಜನವಾಗಿದೆ. ಆದರೂ ಇನ್ನಷ್ಟು ಪ್ರಗತಿ ಆಗಬೇಕಾಗಿದೆ’ ಎಂದರು. 

ಗೋಮಾಂಸ ರಫ್ತು ನಿಷೇಧ ಅಗತ್ಯ
ಅಯೋಧ್ಯೆಯಲ್ಲದೆ ಬೇರಾವ ನಿರ್ಣಯಗಳ ಸಾಧ್ಯತೆ ಇದೆ ಎಂದಾಗ “ಗೋರಕ್ಷಣೆ ಕುರಿತು ನಿರ್ಣಯ ತಳೆಯಲಾಗುವುದು. ಗೋಮಾಂಸ ರಫ್ತು ನಿಷೇಧ ಹೇರಿದರೆ ಹಾಗೂ ಕೇಂದ್ರ ಮತ್ತು ಎಲ್ಲ ರಾಜ್ಯಗಳ ಸಹಮತವಾದರೆ ಗೋರಕ್ಷಣೆ ಸಾಧ್ಯವಿದೆ. ಸಾಮರಸ್ಯವೂ ಮುಖ್ಯ ನಿರ್ಣಯಗಳಲ್ಲಿ ಒಂದು’ ಎಂದರು. 

ದೇವಸ್ಥಾನಗಳ ಸ್ವಾಯತ್ತೆ
“ದೇವಸ್ಥಾನಗಳ ಹಸ್ತಕ್ಷೇಪ ಕುರಿತು ಅಸಮಾಧಾನವಿದೆ. ಕೇರಳದಂತಹ ಕೆಲವು ರಾಜ್ಯಗಳಲ್ಲಿ ರಾಜಕೀಯ ಹಸ್ತಕ್ಷೇಪ ವಿಪರೀತವಿದೆ. ಕರ್ನಾಟಕದಲ್ಲಿಯೂ ಧಾರ್ಮಿಕ ಪರಿಷತ್‌ ಮೂಲಕ ರಾಜಕೀಯ ನಡೆಯುತ್ತಿದೆ. ಬಿಜೆಪಿ ಸರಕಾರವಿರುವಾಗ ಬಿಜೆಪಿಯವರು, ಕಾಂಗ್ರೆಸ್‌ ಸರಕಾರವಿರುವಾಗ ಕಾಂಗ್ರೆಸ್‌ನವರು ದೇವಸ್ಥಾನಗಳ ಆಡಳಿತಕ್ಕೆ ಬರುತ್ತಾರೆ. ಇದರ ಬದಲು ರಾಜಕೀಯೇತರವಾಗಿ ಭಕ್ತರ ಕೈಯಲ್ಲಿರಬೇಕು, ಸ್ವಾಯತ್ತ ಸಂಸ್ಥೆಯಾಗಿರಬೇಕೆಂಬ ಒತ್ತಾಸೆಯೂ ಇದೆ. ಉದಾಹರಣೆಗೆ ಉ.ಕ. ಜಿಲ್ಲೆ ಹಿಂದೆ ಮುಂಬಯಿ ಪ್ರಾಂತ್ಯದಲ್ಲಿರುವಾಗ ನ್ಯಾಯಾಧೀಶರು ದೇವಸ್ಥಾನಗಳಿಗೆ ನೇಮಿಸುತ್ತಿದ್ದರು. ಈಗ ರಾಜಕೀಯ ವಾತಾವರಣವಿದೆ ಎಂದು ಸ್ವರ್ಣವಲ್ಲೀ ಶ್ರೀಗಳು ಹೋರಾಟ ನಡೆಸುತ್ತಿದ್ದಾರೆ’ ಎಂದರು. 

Advertisement

ಎಲ್ಲ  ಪಕ್ಷಗಳೂ ಸ್ಪಂದಿಸಲಿ
ಅಯೋಧ್ಯೆಯಂತಹ ಸಂಕೀರ್ಣ ವಿಷಯಗಳಿಂದ ಬಿಜೆಪಿಯವರಿಗೆ ಲಾಭವಾಗುತ್ತದೆ ಎಂಬ ಮಾತಿದೆಯಲ್ಲ ಎಂದು ಪ್ರಶ್ನಿಸಿದರೆ, “ಅವರು ಲಾಭ ತೆಗೆದುಕೊಳ್ಳಬಹುದು. ಹಿಂದೆ ರಾಜೀವ್‌ ಗಾಂಧಿಯವರು ಅಯೋಧ್ಯೆಯ ಬೀಗವನ್ನು ತೆರೆದರಲ್ಲವೆ? ಹಾಗೆಯೇ ಎಲ್ಲ ಪಕ್ಷಗಳೂ ಬಹುಸಂಖ್ಯಾಕರ ಹಿತ ಕಾಯುವಂತಾಗಬೇಕು. ಮುಖ್ಯವಾಗಿ ಸರಕಾರಿ ಸವಲತ್ತುಗಳು ಸಿಗುವಾಗ ಬಹುಸಂಖ್ಯಾಕರು/ ಅಲ್ಪಸಂಖ್ಯಾಕರು ಎಂಬ ವ್ಯತ್ಯಾಸವಿರಬಾರದು’ ಎಂದರು. “ನಮ್ಮ ಪರ್ಯಾಯ ಅವಧಿಯಲ್ಲಿ ಧರ್ಮಸಂಸದ್‌ ನಡೆಯಲಿ ಎಂಬ ಅಪೇಕ್ಷೆ ಇತ್ತು. ಅದು ಕಾರ್ಯಕರ್ತರು, ಸಾರ್ವಜನಿಕರ ಉತ್ಸಾಹದಿಂದ ನಡೆಯುತ್ತಿದೆ’ ಎಂದು ಶ್ರೀಗಳು ತಿಳಿಸಿದರು.

ಜಾಗರೂಕ ನಿರ್ಣಯ ಅಗತ್ಯ
ಅಲ್ಲಿ ಮಂದಿರವಿತ್ತು ಎಂಬುದನ್ನು ಅಲಹಾಬಾದ್‌ ಉಚ್ಚ ನ್ಯಾಯಾಲಯ ಹೇಳಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಇನ್ನಷ್ಟೇ ಬರಬೇಕಾಗಿದೆ. ಇದರ ತೀರ್ಪಿಗೆ ಕಾಯಬೇಕಾಗಿದೆ. ಈ ನಿರೀಕ್ಷಣೆಯಲ್ಲಿ  ನಾವಿದ್ದೇವೆ. ಮಾತುಕತೆ ಮಾಡೋಣವೆಂದರೆ ಮುಸ್ಲಿಮರು ಒಪ್ಪಬೇಕು. ಶಿಯಾ- ಸುನ್ನಿ ಪಂಗಡದವರು ಇಬ್ಬರೂ ಒಪ್ಪುವುದಿಲ್ಲ. ಆದ್ದರಿಂದ ಧರ್ಮಸಂಸದ್‌ನಲ್ಲಿ ಜಾಗರೂಕ ತೀರ್ಮಾನ ಕೈಗೊಳ್ಳಬೇಕಾಗಿದೆ.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next