Advertisement

State Govt ಇನ್ನೂ ಬಗೆಹರಿಯದ ಕೆಪಿಎಸ್‌ “ಕಾರ್ಯಭಾರ’ ಗೊಂದಲ

11:36 PM Dec 05, 2023 | Team Udayavani |

ಉಡುಪಿ: ಸರಕಾರಿ ಶಾಲೆ ಗಳತ್ತ ಮಕ್ಕಳನ್ನು ಸೆಳೆಯಲು ರಾಜ್ಯ ಸರಕಾರ 2018ರಲ್ಲಿ ಆರಂಭಿಸಿದ್ದ ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌)ಗೆ ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದ್ದರೂ ಆಡಳಿತಾತ್ಮಕ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಗೊಂದಲಗಳಿಂದಲೇ ಕೂಸು ಬಡವಾಗುತ್ತದೆಯೇ ಎಂಬ ಆತಂಕ ಎದುರಾಗಿದೆ.

Advertisement

ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ದಿಂದ 12ನೇ ತರಗತಿವರೆಗೂ ಒಂದೇ ಸೂರಿನಡಿ ಶಿಕ್ಷಣ ಒದಗಿಸಲಾಗುತ್ತದೆ. ದ.ಕ.ದಲ್ಲಿ 9 ಹಾಗೂ ಉಡುಪಿಯಲ್ಲಿ 8 ಸಹಿತ ರಾಜ್ಯದಲ್ಲಿ ಪ್ರಸ್ತುತ ಇಂತಹ 285 ಶಾಲೆಗಳಿವೆ. ಇವುಗಳಿಗಾಗಿ ಹಲವೆಡೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ವಿಲೀನ ಮಾಡಲಾಗಿತ್ತು. ಪ್ರೌಢಶಾಲೆ ಮತ್ತು ಪಿಯುಸಿ ವಿಭಾಗ ಮಾತ್ರ ಇರುವಲ್ಲಿ (ಸಂಯುಕ್ತ ಪ್ರೌಢಶಾಲೆ) ಸಮೀಪದ ಪ್ರಾಥಮಿಕ ಶಾಲೆಯನ್ನು ಜೋಡಿಸಲಾಗಿತ್ತು. ಪ್ರಾಥಮಿಕ ಮತ್ತು ಪ್ರೌಢಶಾಲೆ ಇರುವಲ್ಲಿ ಪಿಯುಸಿ ವಿಭಾಗವನ್ನು ಸೇರಿಸಲಾಗಿದೆ ಇವೆಲ್ಲ ಮುಗಿದು ವರ್ಷಗಳು ಕಳೆದರೂ ಆಡಳಿತಾತ್ಮಕವಾಗಿ ಕೆಲವೆಡೆ ಶಿಕ್ಷಕರು, ಉಪನ್ಯಾಸಕರ ನಡುವೆ ಅಸಹಕಾರ ಮುಂದುವರಿದಿದೆ.

ಪ್ರಾಂಶುಪಾಲರು ಮತ್ತು ಮುಖ್ಯಶಿಕ್ಷಕರು
ಪಿಯು ಕಾಲೇಜಿನ ಪ್ರಾಂಶು ಪಾಲರೇ ಕೆಪಿಎಸ್‌ಗೂ ಪ್ರಾಂಶು ಪಾಲರು. ಕೆಪಿಎಸ್‌ಗೆ ಸಂಬಂಧಿಸಿದ ಎಲ್ಲ ಹಣಕಾಸಿನ ತೀರ್ಮಾನಗಳು, ನಿರ್ವಹಣೆ ಹೊಣೆ ಇವರದ್ದೇ. ಆಡಳಿತ ಹೊಣೆಯನ್ನು ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ನೀಡಲಾಗಿದೆ. ಆದರೆ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಉಪ ಪ್ರಾಂಶುಪಾಲ ಹುದ್ದೆಗೆ ಪದೋನ್ನತಿ ನೀಡದಿದ್ದರೂ ಹಲವೆಡೆ ಉಪಪ್ರಾಂಶುಪಾಲರು ಎಂಬ ಫ‌ಲಕ ಹಾಕಿಕೊಳ್ಳಲಾಗಿದೆ. ಪ್ರಾಂಶು ಪಾಲರು ಮತ್ತು ಮುಖ್ಯಶಿಕ್ಷಕರ ಅಧಿ ಕಾರ ಹಂಚಿಕೆ ಗೊಂದಲವೂ ಬಗೆಹರಿದಿಲ್ಲ. ಮುಖ್ಯಶಿಕ್ಷಕರಿಗೆ ಪೂರ್ಣ ಜವಾಬ್ದಾರಿ ನೀಡಬೇಕು ಎನ್ನುವುದು ಪ್ರಾಥಮಿಕ, ಪ್ರೌಢ ಶಾಲಾ ವಿಭಾಗದ ಬೇಡಿಕೆಯಾದರೆ, ಪ್ರಾಂಶುಪಾಲರೇ ಮುಖ್ಯಸ್ಥರಾಗ ಬೇಕು ಎಂಬುದು ಪಿಯು ವಿಭಾಗದವರ ಆಗ್ರಹ.

ಕೇಡರ್‌ ಬದಲಾವಣೆ ಆಗಿಲ್ಲ
ಪಿಯುಸಿ ಪ್ರಾಂಶುಪಾಲರು ಯಾ ಪ್ರೌಢಶಾಲಾ ಮುಖ್ಯಶಿಕ್ಷಕರಲ್ಲಿ ಯಾರಿಗಾದರೂ ಒಬ್ಬರಿಗೆ ಪೂರ್ಣ ಅಧಿಕಾರ ನೀಡಬೇಕು ಎಂಬ ಆಗ್ರಹ ಮೊದಲಿನಿಂದಲೂ ಇದೆ. ಆದರೆ ಸರಕಾರದ ಹಂತದಲ್ಲಿ ಕೇಡರ್‌ ಬದಲಾವಣೆ ಆಗದ ಕಾರಣ ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ಪ್ರಾಂಶುಪಾಲರನ್ನಾಗಿ ಮಾಡಲಾಗದು. ಹೀಗಾಗಿ ಮುಖ್ಯಶಿಕ್ಷಕರ ಕೆಲವು ಅಧಿಕಾರ ಮೊಟಕುಗೊಳಿಸಿ ಪಿಯುಸಿ ಪ್ರಾಂಶುಪಾಲರಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ. ಆಡಳಿತಾತ್ಮಕವಾಗಿ ಪಿಯುಸಿ ತರಗತಿಗಳನ್ನು ಪ್ರೌಢಶಾಲಾ ಮುಖ್ಯಶಿಕ್ಷಕರು ಸಹಿತ ಶಿಕ್ಷಕರು ನಿರ್ವಹಿಸಲಾಗದು. ಹಾಗೆಯೇ ಪಿಯುಸಿ ಪ್ರಾಂಶುಪಾಲರ ಸಹಿತ ಉಪನ್ಯಾಸಕರು ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗೆ ಬೋಧಿಸುವುದಿಲ್ಲ. ಏಕರೂಪ ವ್ಯವಸ್ಥೆಯಿದ್ದರೂ ಪಿಯು ಕಾಲೇಜು ಮತ್ತು ಶಾಲಾ ವಿಭಾಗ ಪ್ರತ್ಯೇಕವಾಗಿಯೇ ಇದೆ. ಸರಕಾರವೇ ಮಧ್ಯ ಪ್ರವೇಶಿಸಿ ಇವುಗಳನ್ನು ಬಗೆ ಹರಿಸಬೇಕು ಎಂಬುದು ಕೆಲವು ಶಿಕ್ಷಕ/ ಉಪನ್ಯಾಸಕರ ಅಭಿಪ್ರಾಯ.

ಹೊರಗುತ್ತಿಗೆ
ಕೆಪಿಎಸ್‌ನ ಪೂರ್ವ ಪ್ರಾಥಮಿಕ ತರಗತಿಗಳಿಗೆ ಬೋಧಿಸಲು ಟ್ರೈನರ್‌ ಹಾಗೂ ಸಹಾಯಕರ ನೇಮಿಸಿಕೊಳ್ಳಬಹುದು. ಇದನ್ನು ಆಯಾ ಕೆಪಿಎಸ್‌ಗಳಲ್ಲಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೊರಗುತ್ತಿಗೆ ಆಧಾರದಲ್ಲಿ ಮಾಡಲಾಗುತ್ತದೆ. ಸರಕಾರದಿಂದ ಈ ಹುದ್ದೆಗೆ ಖಾಯಂ ಸಿಬಂದಿ ನೇಮಕ ಕೂಡಲೇ ಆಗಬೇಕಿದೆ.

Advertisement

ಕೆಪಿಎಸ್‌ಗಳಲ್ಲಿ ಪಿಯುಸಿ ಪ್ರಾಂಶುಪಾಲರು ಹಣಕಾಸು ನಿರ್ವಹಣೆಯನ್ನು ನಿರ್ವಹಿಸುತ್ತಾರೆ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರು ಆಡಳಿತಾತ್ಮಕ ವಿಷಯ‌ವನ್ನು ಗಮನಿಸುತ್ತಾರೆ. ಕೇಡರ್‌ ಬದಲಾವಣೆ ಮಾಡದೇ ಅಧಿಕಾರ ಹಂಚಿಕೆಯ ಗೊಂದಲ ಬಗೆ ಹರಿಯದು. ಸರಕಾರವೇ ಗಮನಹರಿಸಬೇಕು.
– ಗಣಪತಿ ಮತ್ತು ದಯಾನಂದ ನಾಯಕ್‌,
ಡಿಡಿಪಿಐಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next