Advertisement

ಇನ್ನೂ ಬಯಲಾಗದ ದೇಗುಲಗಳ ಸರಣಿ ಕಳ್ಳತನ ಪ್ರಕರಣ

04:56 PM Dec 09, 2017 | |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಕಡಬ ಠಾಣೆ ವ್ಯಾಪ್ತಿಯ ದೇಗುಲಗಳಲ್ಲಿ ನಾಲ್ಕು-ಐದು ತಿಂಗಳ ಹಿಂದೆ ಸರಣಿ ಕಳ್ಳತನ ಪ್ರಕರಣ ನಡೆದಿತ್ತು. ಕೆಲವು ದಿನಗಳ ಅಂತರದಲ್ಲಿ ನಡೆದ ಮೂರು ಪ್ರಕರಣಗಳ ತನಿಖೆಯಲ್ಲಿ ಈವರೆಗೂ ನಿರೀಕ್ಷಿತ ಪ್ರಗತಿಯಾಗದೆ ಭಕ್ತರಲ್ಲಿ ಆತಂಕ ಮೂಡಿದೆ.

Advertisement

ಪ್ರೌರಾಣಿಕ ಮತ್ತು ಚಾರಿತ್ರಿಕ ಹಿನ್ನೆಲೆ ಇರುವ ಕಾರಣಿಕ ಕ್ಷೇತ್ರ ನಾಲ್ಕೂರು ಗ್ರಾಮದ ಶ್ರೀ ಮರಕತ ದುರ್ಗಾಪರಮೇಶ್ವರಿ ದೇಗುಲಕ್ಕೆ ಆ. 31ರಂದು ನುಗ್ಗಿದ ಕಳ್ಳರು ಭದ್ರತೆಗಾಗಿ ಅಳವಡಿಸಿದ ಸಿ.ಸಿ. ಕೆಮರಾ ಸಂಪರ್ಕ ಕತ್ತರಿಸಿ, ಉತ್ತರ ಭಾಗದ ಬಾಗಿಲು ಮುರಿದು ಗರ್ಭಗುಡಿಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ, ಪಂಚಲೋಹದ ಉತ್ಸವ ಮೂರ್ತಿ, ದೇವರ ಮೇಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯಲ್ಲಿ ಈ ಕಳ್ಳತನ ಸಂಭವಿಸಿತ್ತು.

ಹುಂಡಿ ಕಳವು
ಅ. 24ರಂದು ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯಲ್ಲೇ ಮತ್ತೂಂದು ಕಳ್ಳತನ ಪ್ರಕರಣ ನಡೆಯಿತು. ಇತಿಹಾಸ ಪ್ರಸಿದ್ಧ ಬಸವನಮೂಲೆ ಶ್ರೀ ಬಸವೇಶ್ವರ ದೇಗುಲದ ಹುಂಡಿಯನ್ನೇ ಕಳುವು ಮಾಡಲಾಯಿತು. ಅದೇ ರಾತ್ರಿ ಕಡಬ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇಗುಲದ ಮುಖ್ಯದ್ವಾರದ ಬಾಗಿಲು ಮುರಿದು, ನಮಸ್ಕಾರ ಮಂಟಪದ ಬದಿಯಲ್ಲಿದ್ದ ಎರಡು ಕಾಣಿಕೆ ಡಬ್ಬಿ ಹಾಗೂ ಒಂದು ಮೊಬೈಲ್‌ ದೋಚಿದ್ದರು.

ಈ ಕುರಿತು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಉನ್ನತ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ವಿಶೇಷ ತನಿಖಾ ತಂಡಗಳನ್ನು ರಚಿಸಿ, ಶೀಘ್ರ ಆರೋಪಿಗಳನ್ನು ಪತ್ತೆಹಚ್ಚುವ ಭರವಸೆ ನೀಡಿದ್ದರು. ಐದು ತಿಂಗಳಾಗುತ್ತ ಬಂದರೂ ಪ್ರಕರಣಗಳನ್ನು ಭೇದಿಸುವುದು ಪೊಲೀಸರಿಗೆ ಸಾಧ್ಯವಾಗಿಲ್ಲ.

ಏಕೆ ಮೌನ?
ಶ್ರದ್ಧಾ ಕೇಂದ್ರಗಳಲ್ಲಿ ಸರಣಿ ಕಳ್ಳತನದ ಕುರಿತಾಗಿ ದೇಗುಲದ ಆಡಳಿತ ಮಂಡಳಿ, ಭಕ್ತ ಸಮೂಹ ಪ್ರಶ್ನೆ ಚಿಂತನೆ ಮೂಲಕ ದೇವರ ಮೊರೆಹೋಗಿದ್ದು, ನಿಗದಿತ ಅವಧಿಯೊಳಗೆ ಆರೋಪಿಗಳ ಪತ್ತೆಯಾಗುವ ವಿಚಾರ ಕಂಡುಬಂದಿದೆ. ಭಕ್ತರು ಅಷ್ಟಕ್ಕೇ ತೃಪ್ತಿ ಹೊಂದಿದ್ದಾರೆ. ವಾಸ್ತವದಲ್ಲಿ ಕಳ್ಳರ ಪತ್ತೆ ಪೊಲೀಸ್‌ ತನಿಖೆಯಿಂದ ಆಗಬೇಕು. ಆದರೆ, ತನಿಖೆ ಒಂದಿಂಚೂ ಮುಂದೆ ಸಾಗುತ್ತಿಲ್ಲ. ದೇಗುಲಗಳ ಆಸ್ತಿ ಸಂರಕ್ಷಣೆ ವಿಚಾರದಲ್ಲಿ ಸಂಘಟನೆಗಳೂ ಮೌನವಾಗಿವೆ. ಲಭ್ಯ ಸಾಕ್ಷ್ಯಗಳನ್ನು ಪೊಲೀಸರಿಗೆ ಒದಗಿಸಿ, ಒತ್ತಡ ಹೇರಿದರೆ ಮಾತ್ರ ಕಳ್ಳರ ಬಂಧನ ಆದೀತು ಎಂದಿರುವ ಸ್ಥಳೀಯರು, ಪ್ರಕರಣದ ತನಿಖೆಯಲ್ಲಿ ಪೊಲೀಸರ ವಿಳಂಬ ಧೋರಣೆಯನ್ನು ಆಕ್ಷೇಪಿಸಿದ್ದಾರೆ.

Advertisement

ಕೇರಳದ ಸಂಪರ್ಕ?
ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಬಿಳಿನೆಲೆ ದೇಗುಲಕ್ಕೆ ಭೇಟಿ ನೀಡಿ ಹಿಂದಿರುಗಿದ ಸ್ವಲ್ಪ ಹೊತ್ತಿನಲ್ಲೇ ಕಳ್ಳತನ ನಡೆದಿದೆ ಎಂದರೆ, ಪೊಲೀಸರ ಭಯ ಕಳ್ಳರಿಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೇರಳ ಮೂಲದ ಕಳ್ಳರ ಜಾಲವೊಂದು ಇಲ್ಲಿ ಸಕ್ರಿಯವಾಗಿರುವ ಶಂಕೆಯಿದ್ದು, ಸ್ಥಳೀಯರ ಕೈವಾಡವನ್ನೂ ಅಲ್ಲಗಳೆಯುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ಒಂದೇ ತಂಡದ ಕೃತ್ಯ ಸಾಧ್ಯತೆ
ಮರಕತ ದೇಗುಲದಲ್ಲಿ ಕಳ್ಳತನ ನಡೆಸಿದ ದುಷ್ಕರ್ಮಿಗಳು ಜರ್ಕಿನ್‌, ಟೋಪಿ ಧರಿಸಿದ್ದುದು ದೇಗುಲದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದೇಗುಲ ಒಳ ಪ್ರವೇಶಿಸಿದ ವ್ಯಕ್ತಿಯೊಬ್ಬ ಟಾರ್ಚ್‌ ಬೆಳಕು ಬೀರಿದ್ದಾನೆ. ಬಿಳಿನೆಲೆ ದೇಗುಲದಲ್ಲಿ ಕಳ್ಳತನ ನಡೆಸಿದ ವ್ಯಕ್ತಿಗಳ ಚಹರೆ ಇದಕ್ಕೆ ಹೋಲಿಕೆ ಆಗುತ್ತಿದೆ. ಹೀಗಾಗಿ ಈ ಮೂರೂ ಕಳ್ಳತನಗಳನ್ನು ಒಂದೇ ತಂಡ ಮಾಡಿರಬೇಕೆಂದು ಶಂಕಿಸಲಾಗಿದೆ.

ತನಿಖೆ ಪ್ರಗತಿಯಲ್ಲಿದೆ
ಕಳ್ಳತನಕ್ಕೆ ಸಂಬಂಧಿಸಿ ತನಿಖೆ ಪ್ರಗತಿಯಲ್ಲಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಆರೋಪಿಗಳ ಪತ್ತೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸುತ್ತೇವೆ.
ಸಿ.ಎಚ್‌. ಸುಧೀರ್‌ಕುಮಾರ್‌ ರೆಡ್ಡಿ, ಎಸ್ಪಿ, ದ.ಕ.

ಗಮನಕ್ಕೆ ತಂದಿದ್ದೇವೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ಬಳಿಕ ತನಿಖೆ ನಡೆಸುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂಬ ಉತ್ತರ ಬಂದಿದೆ. ತನಿಖೆ ನಿಧಾನಗತಿ ಆಗುತ್ತಿರುವ ಕುರಿತು ಪೊಲೀಸರ ಗಮನಕ್ಕೆ ತರಲಾಗಿದೆ. 
-ರೋಹಿತ್‌ ಉತ್ರಂಬೆ. ಸದಸ್ಯರು, ವ್ಯವಸ್ಥಾಪನ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮರಕತ 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next