ಸಿಡ್ನಿ: ನೂತನ ಐಸಿಸಿ ಟೆಸ್ಟ್ ಶ್ರೇಯಾಂಕ ಪ್ರಕಟವಾಗಿದೆ. ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ವಿಶ್ವದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ ಇದ್ದಾರೆ. ಪರ್ಥ್ನಲ್ಲಿ ದ್ವಿಶತಕ ಬಾರಿಸಿದ ಬೆನ್ನಲ್ಲೇ ಅವರು ಈ ವಿಶ್ವದಾಖಲೆಯ ಹತ್ತಿರ ತಲುಪಿದ್ದಾರೆ. ಸದ್ಯ ಅವರು 945 ಶ್ರೇಯಾಂಕ ಅಂಕ ಪಡೆದಿದ್ದಾರೆ. ಇನ್ನು 16 ಗಳಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಯಾಂಕ ಅಂಕ ಗಳಿಸಿದ ಬ್ರಾಡ್ಮನ್ ದಾಖಲೆ ಮುರಿಯಲಿದ್ದಾರೆ. ಅಷ್ಟೇ ಅಲ್ಲ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಕಳೆದ 2 ವರ್ಷದಿಂದ ನಂ.1 ಸ್ಥಾನದಲ್ಲಿ ಮುಂದು
ವರಿಯುತ್ತಿದ್ದಾರೆ.
3ನೇ ಸ್ಥಾನಕ್ಕೆ ಏರಿದ ಪೂಜಾರ: ಭಾರತದ ಟೆಸ್ಟ್ ಬ್ಯಾಟ್ಸ್‌ಮೆನ್ ಚೇತೇಶ್ವರ ಪೂಜಾರ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ 1 ಸ್ಥಾನ ಮೇಲೆರಿ 3ಕ್ಕೆ ತಲುಪಿದ್ದಾರೆ. ಅವರು ಒಟ್ಟು 873 ಶ್ರೇಯಾಂಕ ಅಂಕ ಪಡೆದಿದ್ದಾರೆ.
2ನೇ ಸ್ಥಾನದಲ್ಲಿ ಕೊಹ್ಲಿ ಮುಂದುವರಿಕೆ: ಭಾರತ ನಾಯಕ ವಿರಾಟ್ ಕೊಹ್ಲಿ 893 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 855 ಅಂಕ ಪಡೆದಿರುವ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಹಾಗೂ ಇಂಗ್ಲೆಂಡ್ ತಂಡದ ಜೋ ರೂಟ್ ಕ್ರಮವಾಗಿ ನಂತರದ ಎರಡು ಸ್ಥಾನದಲ್ಲಿ ಇದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ರವೀಂದ್ರ ಜಡೇಜ ಹಾಗೂ ಆರ್.ಅಶ್ವಿನ್ ಕ್ರಮವಾಗಿ 3 ಹಾಗೂ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಅಗ್ರಸ್ಥಾನದಲ್ಲೇ ಉಳಿದ ಭಾರತ: ಟೆಸ್ಟ್ ತಂಡ ಶ್ರೇಯಾಂಕದಲ್ಲಿ ಒಟ್ಟಾರೆ 124 ರೇಟಿಂಗ್ ಪಡೆದಿರುವ ಭಾರತ ನಂ.1 ಸ್ಥಾನದಲ್ಲೇ ಮುಂದುವರಿದಿದೆ. ದಕ್ಷಿಣ ಆಫ್ರಿಕಾ (111), ಇಂಗ್ಲೆಂಡ್ (105) ಕ್ರಮವಾಗಿ ನಂತರದ ಸ್ಥಾನದಲ್ಲಿದೆ.