ನಾಗ್ಪುರ: ವಿಶ್ವ ಚಾಂಪಿಯನ್ ಖ್ಯಾತಿಯ ಆಸ್ಟ್ರೇಲಿಯ ಮೊದಲ ಬಾರಿಗೆ ಭಾರತದೆದುರಿನ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ 4 ಪಂದ್ಯಗಳನ್ನು ಸೋತ ಸಂಕಟಕ್ಕೆ ಸಿಲುಕಿದೆ. ಇದು ನಾಯಕ ಸ್ಟೀವ್ ಸ್ಮಿತ್ ಅವರ ಚಿಂತೆಗೆ ಕಾರಣವಾಗಿದ್ದು, ತಂಡದ ಅಸ್ಥಿರ ಪ್ರದರ್ಶನದಿಂದ ಹೆಚ್ಚು ನೋವಾಗಿದೆ ಎಂದಿದ್ದಾರೆ.
“ಸೋಲಿಗೆ ನಿಖರ ಹಾಗೂ ಸ್ಪಷ್ಟ ಕಾರಣವೊಂದಿದ್ದರೆ ಅದು ಅಸ್ಥಿರ ಪ್ರದರ್ಶನ. ಸರಣಿಯ ಬಹುತೇಕ ಪಂದ್ಯಗಳಲ್ಲಿ ಮೇಲುಗೈ ಹಾದಿಯಲ್ಲಿದ್ದರೂ ನಮಗೆ ಮುನ್ನಡೆ ಸಾಧಿಸಲಾಗಲಿಲ್ಲ. ಇನ್ನೇನು ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆ ದಟ್ಟಗೊಳ್ಳುತ್ತಿರುವಾಗಲೇ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋದೆವು. ಅಗ್ರ ಕ್ರಮಾಂಕದ ನಾಲ್ವರಿಂದ ಇನ್ನೂ ಹೆಚ್ಚಿನ ಶ್ರಮ ಹಾಗೂ ನಿಯಂತ್ರಣದ ಅಗತ್ಯವಿದೆ. ಬೆಂಗಳೂರು ಪಂದ್ಯದಲ್ಲಿ ಸಾಧಿಸಿದ ಪರಿಪೂರ್ಣತೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ…’ ಎಂದು ಸ್ಮಿತ್ ನಾಗ್ಪುರ ಸೋಲಿನ ಬಳಿಕ ಪ್ರತಿಕ್ರಿಯಿಸಿದರು.
ನಾಗ್ಪುರದ ಕೊನೆಯ ಏಕದಿನ ಪಂದ್ಯದ ಸೋಲಿನ ಬಗ್ಗೆ ಮಾತಾಡಿದ ಸ್ಮಿತ್, “ದ್ವಿತೀಯ ಪಂದ್ಯದ ಬಳಿಕ ನಾವೆಲ್ಲ ಸೇರಿ ಸ್ಪಿನ್ ದಾಳಿಯನ್ನು ನಿಭಾಯಿಸಿ ದೊಡ್ಡ ಹೊಡೆತಗಳನ್ನು ಬಾರಿಸುವ ಬಗ್ಗೆ ಚರ್ಚಿಸಿದ್ದೆವು. ಒಂದೆರಡು ಪಂದ್ಯಗಳಲ್ಲಿ ಇದನ್ನು ಯಶಸ್ವಿಗೊಳಿಸಿದರೂ ಒಟ್ಟಾರೆಯಾಗಿ ವೈಫಲ್ಯ ಕಂಡದ್ದೇ ಹೆಚ್ಚು. ಇಂದು ಕೊಹ್ಲಿ ಅತ್ಯುತ್ತಮ ಕ್ಷೇತ್ರರಕ್ಷಣೆಯನ್ನು ವ್ಯವಸ್ಥೆಗೊಳಿಸಿದ್ದರಿಂದ ನಮ್ಮ ದೊಡ್ಡ ಹೊಡೆತಕ್ಕೆ ಕಡಿವಾಣ ಬಿತ್ತು’ ಎಂದರು.
“ಸ್ಕೋರ್‌ಬೋರ್ಡ್‌ನಲ್ಲಿ ಸಾಕಷ್ಟು ರನ್ ಇರಲಿಲ್ಲ ಎಂದೇನೂ ನಾನು ಭಾವಿಸುವುದಿಲ್ಲ. ಆದರೆ ನಾವು ವಿಕೆಟ್ ಕೀಳಬೇಕಿತ್ತು ಹಾಗೂ ಜತೆಯಾಟವನ್ನು ಬೆಳೆಸಲು ಅವಕಾಶ ಕೊಡಬಾರದಿತ್ತು. ಇದರಿಂದ ಎದುರಾಳಿಯ ಮೇಲೆ ಒತ್ತಡ ಹೇರಬಹುದಿತ್ತು. ರೋಹಿತ್ ಶರ್ಮ ಅತ್ಯುತ್ತಮ ಹಾಗೂ ಪರಿಪೂರ್ಣ ಇನ್ನಿಂಗ್ಸ್ ಒಂದನ್ನಾಡಿದರು’ ಎಂದರು.
ಆಸ್ಟ್ರೇಲಿಯ ತಂಡದ ಸ್ವರೂಪ ಹಾಗೂ ಭವಿಷ್ಯದ ಬದಲಾವಣೆಗಳ ಬಗ್ಗೆಯೂ ಸ್ಮಿತ್ ಸುಳಿವನ್ನಿತ್ತರು. ತಂಡದ ಕೆಲವು ಆಟಗಾರರು ದೇಶಿ ಪಂದ್ಯಾವಳಿಗಳಲ್ಲಿ ಆಡಿ ಒತ್ತಡ ನಿಭಾಯಿಸುವುದನ್ನು ಕಲಿಯಬೇಕಿದೆ ಎಂದರು.
ವಿಪರ್ಯಾಸವೆಂದರೆ, ಈ ಸರಣಿಯಲ್ಲಿ ಸ್ಮಿತ್ ಕೂಡ ಕಪ್ತಾನನ ಆಟವಾಡಲು ವಿಫಲರಾಗಿದ್ದರು. 2 ಅರ್ಧ ಶತಕ ಹೊಡೆದರೂ ತನ್ನಿಂದ ಇನ್ನೂ ಹೆಚ್ಚಿನ ರನ್ ಬರಬೇಕಿತ್ತು ಎಂದರು. ಈ ಸರಣಿಯಲ್ಲಿ ಆಸ್ಟ್ರೇಲಿಯ ಕಪ್ತಾನನ ರನ್ ಗಳಿಕೆ ಹೀಗಿತ್ತು: 16, 3, 63, 59 ಹಾಗೂ 1.
ಮುಂಬರುವ ಆ್ಯಶಸ್ ಸರಣಿ, ಎದುರಾಳಿ ತಂಡದ ಬೆನ್ ಸ್ಟೋಕ್ಸ್ ವಿವಾದ ಕುರಿತ ಪ್ರಶ್ನೆಗಳೂ ಸ್ಮಿತ್ ಅವರತ್ತ ತೂರಿ ಬಂದವು. ಆದರೆ ತಾನು ಸದ್ಯ ಅಷ್ಟು ದೂರದ ಆಲೋಚನೆ ಮಾಡುವುದಿಲ್ಲ ಎಂದರು.