ಹುಬ್ಬಳ್ಳಿ: ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ಟೆಂಡರ್ ಕರೆದು, ಕಾಮಗಾರಿಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫ್ಲೈಓವರ್ ನಿರ್ಮಾಣಕ್ಕೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ. ಯೋಜನೆ ಅನುಷ್ಠಾನಕ್ಕೆ ತಾವು ಬದ್ಧರಿರುವುದಾಗಿ ತಿಳಿಸಿದರು. ತಾವು ದೆಹಲಿಯಲ್ಲಿದ್ದರೂ,ಧಾರವಾಡ ಲೋಕಸಭಾ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇದ್ದು, ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಕೈಗೊಳ್ಳುವ ಅಗತ್ಯ ಕ್ರಮ, ಸೌಲಭ್ಯಗಳ ನೀಡಿಕೆ ಬಗ್ಗೆ ಮಾಹಿತಿ ಸಂಗ್ರಹ ಹಾಗೂ ಮಾರ್ಗದರ್ಶನ ಕಾರ್ಯ ಮಾಡಿದ್ದಾಗಿ ನುಡಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಗೆ ಒಟ್ಟು 1.10ಲಕ್ಷ ರೈತರಿಗೆ 115 ಕೋಟಿ ರೂ.ಹಣ ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗಿದೆ. ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರದಿಂದ 100ರೂ. ಬಿಡುಗಡೆಯಾದರೂ, ಫಲಾನುಭವಿಗೆ ನೇರವಾಗಿ 100 ರೂ. ಸಂದಾಯ ಆಗುತ್ತಿದೆ ಎಂದರು.
ನರೇಗಾ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಜೂನ್ ಅಂತ್ಯದವರೆಗೆ 4,298 ಕಾಮಗಾರಿಗಳನ್ನು ಆರಂಭಿಸಿ, 7,05,724 ಮಾನವ ದಿನಗಳನ್ನು ಸೃಜಿಸಲಾಗಿದ್ದು, ಇದಕ್ಕಾಗಿ 26.81 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಅದೇ ರೀತಿ ವೃದ್ಧಾಪ್ಯ, ವಿಧವಾ, ಅಂಗವಿಲಕರ ಮಾಸಾಶನದಡಿ ಜಿಲ್ಲೆಯಲ್ಲಿ ಒಟ್ಟು 1.78ಲಕ್ಷ ಫಲಾನುಭವಿಗಳು 32 ಕೋಟಿ ರೂ.ಗಳ ಪ್ರಯೋಜನ ಪಡೆದಿದ್ದಾರೆ. ಪ್ರಧಾನ ಮಂತ್ರಿ ಗಿರೀಬ್ ಕಲ್ಯಾಣ ಅಡಿಯಲ್ಲಿ ಉಜ್ವಲ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 63,434 ಫಲಾನುಭವಿಗಳು ಪ್ರಯೋಜನ ಪಡೆದಿದ್ದು, 1.10 ಲಕ್ಷಕ್ಕಿಂತ ಹೆಚ್ಚು ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೆ ಸುಮಾರು 2ಲಕ್ಷಕ್ಕೂ ಅಧಿಕ ಮಾಸ್ಕ್ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಉಪಕರಣಗಳನ್ನು ನೀಡಲಾಗಿತ್ತು ಎಂದರು.
ಧಾರವಾಡ ಜಿಲ್ಲೆಯಲ್ಲಿ 3.5 ಲಕ್ಷ ಕುಟುಂಬಗಳ ಅಂದಾಜು 12ಲಕ್ಷ ಜನರಿಗೆ ಇದುವರೆಗೆ ಉಚಿತವಾಗಿ 2ಲಕ್ಷ ಕ್ವಿಂಟಲ್‌ನಷ್ಟು ಅಕ್ಕಿ, 1,537 ಕ್ವಿಂಟಲ್ ಬೇಳೆ ನೀಡಲಾಗಿದೆ. ಕೊರೊನಾ ಸಂದರ್ಭದಲ್ಲಿತುರ್ತು ಚಿಕಿತ್ಸಾ ಸೇವೆ ಅವಶ್ಯ ಇರುವವರಿಗೆ ವಾಹನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕೋಲಾ ಕಂಪೆನಿಯವರಿಗೆ ತಾವು ತಿಳಿಸಿದ್ದರಿಂದ ವಾಹನ ನೀಡಿದ್ದರು. ಇದರಿಂದ 2,901 ಜನರು ಉಚಿತವಾಗಿ ಇದರ ಪ್ರಯೋಜನ ಪಡೆದಿದ್ದಾರೆ. ಡಿಮ್ಹಾನ್ಸ್‌ನಲ್ಲಿ ನಿತ್ಯ 800 ಜನರ ಕೋವಿಡ್-19 ಪರೀಕ್ಷೆಗೆ ಅಗತ್ಯವಿರುವ ಪ್ರಯೋಗಾಲಯ ಮಂಜೂರಾತಿ, ಬೆಂಬಲ ಬೆಲೆಯಡಿ ಹತ್ತಿ, ಕಡಲೆ ಖರೀದಿಗೆ ಕ್ರಮ ಇನ್ನಿತರ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ವಿಧಾನಸಭೆ ಸದಸ್ಯರಾದ ಶಂಕರ ಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಿಧಾನ ಪರಿಷತ್ತು ಸದಸ್ಯ ಪ್ರೊ|ಎಸ್.ವಿ.ಸಂಕನೂರು, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಶಂಕರಣ್ಣ ಮುನವಳ್ಳಿ, ಪ್ರಭು ನವಲಗುಂದಮಠ, ನಾರಾಯಣ ಜರತಾರಘರ, ಚಂದ್ರಶೇಖರ ಗೋಕಾಕ ಇನ್ನಿತರರಿದ್ದರು.