Advertisement

ಮರಗಳ ಮರುನಾಟಿಗೆ ಕ್ರಮ: ಜಾರ್ಜ್‌

12:49 PM Sep 16, 2017 | |

ಬೆಂಗಳೂರು: ನಗರದಲ್ಲಿ ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಜಯಮಹಲ್‌ ರಸ್ತೆಯಲ್ಲಿನ ಆರೋಗ್ಯಕರ ಹಾಗೂ ಸ್ಥಳಾಂತರಕ್ಕೆ ಯೋಗ್ಯವಾದ ಮರಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು. 

Advertisement

ಬಿಬಿಎಂಪಿ ವತಿಯಿಂದ ನಗರದ ಜಯಮಹಲ್‌ ರಸ್ತೆಯಲ್ಲಿ ನಡೆಸಲಾಗುತ್ತಿರುವ ಮರಗಳ ಸ್ಥಳಾಂತರ ಕಾರ್ಯವನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಈ ಭಾಗದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಆದರೆ, ಕಾಮಗಾರಿಗೆ 291 ಮರಗಳು ಅಡ್ಡವಾಗಿವೆ. ಆ ಹಿನ್ನೆಲೆಯಲ್ಲಿ ಮರಗಳ ಕತ್ತರಿಸುವ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಲಾಗಿತ್ತು. ಈ ವೇಳೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮರಗಳ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಾಗಿದೆ ಎಂದರು. 

ಅದರಂತೆ ಬಿಬಿಎಂಪಿ ಅಧಿಕಾರಿಗಳು ಗುರುವಾರದಿಂದಲೇ ಮರಗಳ ಸ್ಥಳಾಂತರ ಕಾರ್ಯ ಆರಂಭಿಸಿದ್ದು, 112 ಮರಗಳಲ್ಲಿ ಆರೋಗ್ಯಕರವಾಗಿರುವ ಹಾಗೂ ಮರುನಾಟಿಗೆ ಯೋಗ್ಯವಾಗಿರುವ ಮರಗಳನ್ನು ಅರಮನೆ ಮೈದಾನದ ಕಾಂಪೌಂಡ್‌ ಬಳಿ ನೆಡಲಾಗುತ್ತಿದೆ. ಇದರೊಂದಿಗೆ 10 ಅಡಿ ಎತ್ತರದ 2 ಉತ್ತಮ ಪ್ರಬೇಧದ ಮರಗಳನ್ನು ರಸ್ತೆ ಬದಿಯಲ್ಲಿ ನೆಡಲಾಗುತ್ತಿದೆ ಎಂದು ತಿಳಿಸಿದರು. 

ಬಿಬಿಎಂಪಿ ವತಿಯಿಂದ ನೆಡಲಾಗುತ್ತಿರುವ ಗಿಡಗಳನ್ನು ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ಪೋಷಣೆ ಮಾಡಲಿದ್ದು, ಅದಕ್ಕಾಗಿಯೇ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಈಗಾಗಲೇ 7 ಮರಗಳನ್ನು ಸ್ಥಳಾಂತರ ಮಾಡಲಾಗಿದ್ದು, ಅವುಗಳಲ್ಲಿ ಚರಿ, ಕಾಡು ಬಾದಾಮಿ ಸೇರಿದಂತೆ ಹಲವಾರು ಪ್ರಬೇಧದ ಮರಗಳನ್ನು ಮರುನಾಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಮೇಯರ್‌ ಜಿ.ಪದ್ಮಾವತಿ, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next