ಬೆಳ್ತಂಗಡಿ: ಉಜಿರೆ ಗ್ರಾಮದ ಉಚ್ಚಿಲ ಸಮೀಪದ ಬಡೆಕೊಟ್ಟು ಪ್ರದೇಶದ ಮೂಲ ನಿವಾಸಿ ಕೊರಗ ಕುಟುಂಬಗಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ 11 ಮನೆಗಳ ಕಾಮಗಾರಿಯನ್ನು ಶಾಸಕ ಹರೀಶ್ ಪೂಂಜ ಪರಿಶೀಲಿಸಿದರು.
ಹರೀಶ್ ಪೂಂಜ ಕುಟುಂಬದ ಸದಸ್ಯರೊಂದಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕಾಮಗಾರಿ ವಿವರ ಪಡೆದರು. 3.50 ಲಕ್ಷ ರೂ. ಘಟಕ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನೆಗಳು 400ಕ್ಕಿಂತ ಅಧಿಕ ಚದರ ಅಡಿಯಲ್ಲಿದೆ. ಹಾಲ್, ಬೆಡ್ ರೂಂ, ಅಡುಗೆಕೋಣೆ, ಡೈನಿಂಗ್ ಹಾಲ್ ಒಳಗೊಂಡಿವೆ. ಪ್ರತ್ಯೇಕ ಹೊರಾಂಗಣ ವ್ಯವಸ್ಥೆಯೂ ಇದೆ. ಶಾಸಕನ ನೆಲೆಯಲ್ಲಿ ಪ್ರತೀ ಮನೆಗೆ ತಲಾ ಒಂದೊಂದು ಲಕ್ಷ ರೂ. ಹೆಚ್ಚುವರಿಯಾಗಿ ವೈಯಕ್ತಿಕ ನೆಲೆಯಲ್ಲಿ ಒದಗಿಸಿದ್ದೇನೆ ಎಂದು ತಿಳಿಸಿದರು.
ಒಂದು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತೀ ಮನೆಗಳಿಗೆ ಸೋಲಾರ್ ವ್ಯವಸ್ಥೆ, ಕಾಂಪೌಡ್ ರಚಿಸಿ ಕೊಡಲಾಗುವುದು. ಕಾಲನಿಯು ಮಾದರಿಯಾಗಿರುವಲ್ಲಿ ಮನೆಮಂದಿ ಸ್ವತ್ಛತೆ ಯನ್ನು ಕಾಪಾಡಬೇಕ. ಗ್ರಾ.ಪಂ. ಮಟ್ಟದಲ್ಲಿ ನೆರವು ಒದಗಿಸಲು ಚರ್ಚಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಮೊರ್ಯರ ಶಿಲಾ ಸಮಾಧಿಗಳ ಬೆಟ್ಟ ವಿಶ್ವದ ಆಕರ್ಷಣೀಯ ಸ್ಥಳವಾಗಬೇಕಿದೆ
ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ಉಪಾಧ್ಯಕ್ಷ ರವಿ ಬರಮೇಲು, ಎಸ್. ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ, ಸದಸ್ಯರಾದ ಪ್ರೇಮ್ ವೇಗಸ್, ನಾಗವೇಣಿ, ಜಾನೆಟ್ ಪಿಂಟೋ, ಅಭಿವೃದ್ಧಿ ಅಧಿಕಾರಿ ಪ್ರಕಾಶ ಶೆಟ್ಟಿ, ನಾವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್ ಗೌಡ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೇಮಚಂದ್ರ, ಐಟಿಡಿಪಿ ತಾಲೂಕು ಅಧಿಕಾರಿ ಹೇಮಲತಾ ಉಪಸ್ಥಿತರಿದ್ದರು.
ಹಲವು ವರ್ಷಗಳ ಶ್ರಮ
ಹಲವು ವರ್ಷಗಳ ಶ್ರಮದಿಂದ ಬಡೆಕೊಟ್ಟು ಕೊರಗ ಕಾಲನಿ ನಿವಾಸಿಗಳಿಗೆ ಸುಸಜ್ಜಿತ ಮನೆ ನಿರ್ಮಾಣವಾಗುತ್ತಿದೆ. ಮಾದರಿ ಕಾಲನಿ ಯಾಗಿಸುವಲ್ಲಿ ಮೂಲಸೌಕರ್ಯ ಒದಗಿಸಲಾಗುವುದು
-ಹರೀಶ ಪೂಂಜ, ಶಾಸಕರು