ಎಚ್.ಡಿ.ಕೋಟೆ: ವರುಣನ ಕೃಪೆಯಿಂದ ಈ ಬಾರಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿ ರೈತರಿಗೆ ಹರ್ಷವನ್ನುಂಟು ಮಾಡಿದೆ. ಇನ್ನೊಂದು ಕಡೆ ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದ ತೀವ್ರ ಹಾನಿ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ತಾಲೂಕಿನ ಕಬಿನಿ ಜಲಾಶಯಕ್ಕೆ ಶನಿವಾರ ವಿಶೇಷ ಪೂಜೆ ಸಲ್ಲಿಸಿ, ಸಾಂಪ್ರದಾಯಕ ಬಾಗಿನ ಅರ್ಪಿಸಿ ಮಾತನಾಡಿದರು.
ಮಳೆಯಿಂದ ಆಗಿರುವ ಹಾನಿಯನ್ನು ತುಂಬಿಸಲು ಅಭಿವೃದ್ಧಿ ಹಣವನ್ನು ಬಳಸಲಾಗುವುದು ಎಂದರು. ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಹಿರಿಮೆ ಹೊಂದಿರುವ ಕಬಿನಿ ಜಲಾಶಯ, ತಮಿಳುನಾಡಿಗೆ ನೀರಿನ ಸಮಸ್ಯೆ ಉಂಟಾದಾಗ ಈ ಜಲಾಶಯದಿಂದ ಹೆಚ್ಚು ನೀರನ್ನು ಹರಿಸಿ ಸಮಸ್ಯೆ ಬಗೆಹರಿಸಲಾಗಿತ್ತು ಎಂದು ಸ್ಮರಿಸಿದರು.
ಸೇತುವೆ ಮುಳುಗಡೆ: ಮಳೆಗಾಲದ ಸಂದರ್ಭ ಹೆಚ್ಚಿನ ಮಳೆ ಸುರಿದಾಗ ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ಮುಂಭಾಗದ ನದಿಗೆ ಹರಿಸಿದಾಗ ಜಲಾಶಯದ ಮುಂಭಾಗ ಈಗ ಇರುವ ಸೇತುವೆ ಮುಳುಗಡೆಯಾಗಿ ತಾಲೂಕಿನ 30ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ಶೀಘ್ರ ಸೇತುವೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಪುಟ ಸಭೆಯಲ್ಲಿ ತೀರ್ಮಾನಿಸಿ 20 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
ಬೃಂದಾವನ ನಿರ್ಮಾಣ: ಜೊತೆಗೆ ಕಬಿನಿ ಜಲಾಶಯದ ಮುಂಭಾಗ ಸುಮಾರು 300 ಎಕೆರೆಯಷ್ಟು ವಿಶಾಲವಾದ ಜಾಗ ಇದ್ದು, ಈ ಜಾಗದಲ್ಲಿ ಕೆಆರ್‌ಎಸ್ ಮಾದರಿಯ ಬೃಂದಾವನ ನಿರ್ಮಾಣ ಮಾಡುವ ಮೂಲಕ ಜಲಾಶಯ ಸೇರಿದಂತೆ ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಸಂಸದ ವಿ.ಶ್ರೀನಿವಾಸ್‌ಪ್ರಸಾದ್, ಗೃಹ ಸಚಿವ ಬಸವರಾಜು ಬೊಮ್ಮಾಯಿ, ಜಿಪಂ ಅಧ್ಯಕ್ಷೆ ಪರಿಮಳಾ, ಶಾಸಕರಾದ ಅನಿಲ್ ಕುಮಾರ್, ಹರ್ಷವರ್ಧನ್, ನಿರಂಜನ್‌ಕುಮಾರ್, ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಬಸವರಾಜು, ಜಲ ಸಂಪನ್ಮೂಲ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಪೊಲೀಸ್ ಐಜಿಪಿ ವಿಫುಲ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಶ್ಯಂತ್, ತಹಶೀಲ್ದಾರ್ ಆರ್. ಮಂಜುನಾಥ್, ಇಒ ರಾಮಲಿಂಗಯ್ಯ ಇತರರು ಉಪಸ್ಥಿತರಿದ್ದರು.