Advertisement

ಸಮ್ಮಿಶ್ರ ಸರ್ಕಾರದಿಂದ ಕೃಷ್ಣೆಗೆ ಬಾಗಿನ ಅರ್ಪಣೆ ಯಾವಾಗ?

01:10 PM Jul 27, 2018 | Team Udayavani |

ಆಲಮಟ್ಟಿ: ಉತ್ತರ ಕರ್ನಾಟಕ ಜೀವನಾಡಿಯಾಗಿರುವ ಕೃಷ್ಣೆ ತುಂಬಿ ಕೆಲವು ದಿನಗಳಾದರೂ ಸರ್ಕಾರದಿಂದ ಬಾಗಿನ ಅರ್ಪಣೆ ಯಾವಾಗ ಎಂಬ ಪ್ರಶ್ನೆ ಇಲ್ಲಿಯ ಜನರನ್ನು ಕಾಡುತ್ತಿದೆ. ರಾಜ್ಯದ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರಿಗೆ ಜೀವ ಜಲವಾಗಿರುವ ಕೃಷ್ಣೆ ಹಾಗೂ ಕಾವೇರಿ ನದಿಗಳು ರಾಜ್ಯದ ಎರಡು ಕಣ್ಣುಗಳು ಎಂದು ಹೇಳುವ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತು ಒಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿದೆ. ಕೃಷ್ಣೆ ತುಂಬಿದ್ದರೂ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆಯಾಗುತ್ತಿಲ್ಲ, ಅದೇ ದಕ್ಷಿಣ ಕರ್ನಾಟಕದ ಕಾವೇರಿ ನದಿ ತುಂಬಿದ ಕೆಲ ದಿನಗಳಲ್ಲಿಯೇ ಈಗಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದಂಪತಿಯೊಂದಿಗೆ ಬಾಗಿನ ಅರ್ಪಿಸುತ್ತಾರೆ. ಅಲ್ಲದೇ ಈ ಹಿಂದೆ ಆಡಳಿತ ನಡೆಸಿರುವ ಮುಖ್ಯಮಂತ್ರಿಗಳೂ ಕೂಡ ಇದೇ ಸಂಪ್ರದಾಯ ಅನುಸರಿಸಿರುವುದು ನಾಡಿನ ಜನತೆಗೆ ಗೊತ್ತಿರುವ ವಿಷಯ. ಆದರೆ ಉತ್ತರ ಭಾಗದ ಜೀವನಾಡಿ ಹಾಗೂ ಕಾವೇರಿ ನದಿ ನೀರಿಗಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವ ಶಾಸ್ತ್ರಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಬೇಕಾದರೆ ಮೀನ-ಮೇಷ ಎಣಿಸುವುದು ಏಕೆ?

Advertisement

ಕೃಷ್ಣೆ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾಬಳೇಶ್ವರ ಉಗಮವಾಗಿ ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಯಿಂದ ರಾಜ್ಯವನ್ನು ಪ್ರವೇಶ ಮಾಡಿ ಲಕ್ಷಾಂತರ ಎಕರೆ ಜಮೀನಿಗೆ ಹಾಗೂ ಕೋಟ್ಯಂತರ ಜನ-ಜಾನುವಾರುಗಳಿಗೆ ಜೀವ ಜಲವಾಗಿದ್ದರೂ ಕೂಡ ಆಳುವ ಸರ್ಕಾರಗಳಿಗೆ ಕೃಷ್ಣೆ ಕಾಣುತ್ತಿಲ್ಲವೇಕೆ? ಎನ್ನುವದು ಈ ಭಾಗದ ಜನರ ಪ್ರಶ್ನೆ.

ಉತ್ತರ ಕರ್ನಾಟಕ ಭಾಗದಲ್ಲಿ ಹರಿದಿರುವ ಕೃಷ್ಣೆಗೆ ರಾಜ್ಯದಲ್ಲಿಯೇ ಆಲಮಟ್ಟಿಯಲ್ಲಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರದಲ್ಲಿ ಬಸವಸಾಗರ ಜಲಾಶಯ ಹಾಗೂ ಹಿಪ್ಪರಗಿ ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ. ಏಷ್ಯಾ ಖಂಡದಲ್ಲಿಯೇ ಬೃಹತ್‌ ನೀರಾವರಿ ಯೋಜನೆಗಳಲ್ಲಿಯೇ ದ್ವಿತೀಯ ಸ್ಥಾನದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನವಾಗಿರುವ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಸರ್ಕಾರದಿಂದ ಬಾಗಿನ ಅರ್ಪಿಸಲು ಇನ್ನೂವರೆಗೆ ದಿನ ನಿಗದಿ ಮಾಡದಿರುವುದು ಸರ್ಕಾರದ ಮಲತಾಯಿ ಧೋರಣೆಯಾಗಿದೆ ಎನ್ನುತ್ತಾರೆ ಪ್ರಗತಿ ಪರ ರೈತ ಮಹಾದೇವಪ್ಪ ಫತ್ತೆಪುರ.

6 ಲಕ್ಷ ಹೆಕ್ಟೇರ್‌ ನೀರಾವರಿ: ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಸುಮಾರು 6.22 ಲಕ್ಷ ಹೆಕ್ಟೇರ್‌ ಪ್ರದೇಶ ಹನಿ ನೀರಾವರಿ, ಏತ ನೀರಾವರಿ, ಭೂಮಟ್ಟದ ಮೂಲಕವಾಗಿ ನೀರಾವರಿಗೊಳಪಡಲಿದೆ. ಸುಮಾರು 7 ಜಿಲ್ಲೆಗಳ ನಗರ, ಪಟ್ಟಣ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಂದ ಜನತೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

ಆಳುವ ಸರ್ಕಾರಗಳು ಈ ಭಾಗದ ಜನಪ್ರತಿನಿಧಿಗಳ ಸೌಮ್ಯಸ್ವಭಾವವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಈ ಭಾಗದ ಎಲ್ಲ ವಿಚಾರದಲ್ಲಿಯೂ ಮಲತಾಯಿ ಧೋರಣೆ ಅನುಸಿರಿಸುತ್ತಿವೆ. ಇತ್ತೀಚೆಗೆ ಕಾವೇರಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿಗಳು ಕೃಷ್ಣೆ ತುಂಬಿದ್ದರೂ ಬಾಗಿನ ಅರ್ಪಣೆಯಾಗುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಬಲವಾಗುತ್ತದೆ ಎನ್ನುತ್ತಾರೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ.

Advertisement

ವಿದ್ಯುತ್‌ ಘಟಕ: ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಬಲ ಭಾಗದಲ್ಲಿರುವ ಕರ್ನಾಟಕ ವಿದ್ಯುತ್‌ ಉತ್ಪಾದನಾ ಘಟಕದಿಂದ ನಿತ್ಯ 290 ಮೆ.ವ್ಯಾ.ವಿದ್ಯುತ್‌ನ್ನು ಜಲ ವಿದ್ಯುದಗಾರದಿಂದ ಉತ್ಪಾದಿಸಲಾಗುತ್ತಿದೆ ಮತ್ತು ಕೂಡಗಿಯಲ್ಲಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಶಾಖೋತ್ಪನ್ನ ಘಟಕಕ್ಕೆ ನೀರನ್ನು ಆಲಮಟ್ಟಿಯ ಪಾರ್ವತಿಕಟ್ಟೆ ಸೇತುವೆ ಹತ್ತಿರ ನಿರ್ಮಿಸಿರುವ ಕೊಳವೆ ಮಾರ್ಗದ ಮುಖ್ಯಸ್ಥಾವರದಿಂದ ಪೂರೈಸಲಾಗುತ್ತಿದೆ. ಇನ್ನು ನಾರಾಯಣಪುರದ ಬಸವಸಾಗರ ಜಲಾಶಯ ವ್ಯಾಪ್ತಿಯಲ್ಲಿರುವ ಖಾಸಗಿ ಸಂಸ್ಥೆಯ ಮುರ್ಡೇಶ್ವರ ಜಲವಿದ್ಯುತ್‌ ಉತ್ಪಾದನಾ ಘಟಕದಿಂದ ವಿದ್ಯುತ್‌ನ್ನು ಉತ್ಪಾದಿಸಲಾಗುತ್ತಿದೆಯಲ್ಲಯದೇ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಘಟಕಗಳು ಸೇರಿದಂತೆ ಹಲವಾರು ವಿದ್ಯುತ್‌ ಘಟಕಗಳಿಗೆ ನೀರು ಪೂರೈಸಿ ನಾಡಿನ ಜನರಿಗೆ ಬೆಳಕು ನೀಡುತ್ತಿರುವ ಕೃಷ್ಣೆಗೆ ಬಾಗಿನ ಅರ್ಪಿಸಲೂ ಕೂಡ ಆಳುವ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ತರವಲ್ಲಿ ಎಂಬುವುದು ಇಲ್ಲಿನ ಜನರ ಆಭಿಪ್ರಾಯವಾಗಿದೆ.

ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next