Advertisement
“ಮಂಡ್ಯದ ಗಂಡು’ ಅಂಬರೀಶ್ ಅವರ ಜೆ.ಪಿ.ನಗರ ನಿವಾಸದ ಮುಂದೆ ಭಾನುವಾರ ಮುಂಜಾನೆ ನೆರೆದಿದ್ದ ಅಸಂಖ್ಯ ಅಭಿಮಾನಿಗಳು, ನಿರಾಸೆಯಿಂದ ಕಣ್ಣೀರಿಡುತ್ತಲೇ ಕಂಠೀರವ ಕ್ರೀಡಾಂಗಣದತ್ತ ಸಾಗಿದರು. ಅಂಬರೀಶ್ ವಿಧಿವಶರಾದ ಸುದ್ದಿ ತಿಳಿದು ಕನಕಪುರ, ಮಂಡ್ಯ, ಮಳವಳ್ಳಿ, ರಾಮನಗರ, ಮೈಸೂರು, ರಾಯಚೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಅಭಿಮಾನಿ ಬಳಗ ಭಾನುವಾರ ಬೆಳಗ್ಗೆ ಜೆ.ಪಿ.ನಗರದ ನಿವಾಸಕ್ಕೆ ದೌಡಾಯಿಸಿತ್ತು.
Related Articles
Advertisement
ಆದರೆ ಅಂಬರೀಶ್ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಉತ್ತರ ಪ್ರದೇಶ ಮತ್ತು ತಮಿಳುನಾಡು ಮೂಲದ ಮೂಲದ ಕೂಲಿ ಕಾರ್ಮಿಕರು ಭಾನುವಾರ ತಮ್ಮ ಪರಿಕರಗಳೊಂದಿಗೆ ಊರಿಗೆ ತೆರಳಿದರು. ಅಂಬರೀಶ್ ಅಣ್ಣನವರ ನಿಧನದ ಹಿನ್ನೆಲೆಯಲ್ಲಿ ಕಟ್ಟಡ ಕೆಲಸವನ್ನು ಸ್ಥಗಿತಗೊಳಿಸಿದ್ದೇವೆ. 15 ದಿನಗಳ ನಂತರ ಮತ್ತೆ ಕೆಲಸ ಆರಂಭಿಸುವುದಾಗಿ ಉತ್ತರ ಪ್ರದೇಶ ಮೂಲದ ಕಾರ್ಮಿಕ ಅನಿಲ್ “ಉದಯವಾಣಿ’ಗೆ ತಿಳಿಸಿದರು.
ಈಗ ಯಾರಣ್ಣ ಬೈಯ್ಯೋರು?: ಅಣ್ಣ ನಮ್ಮ ಕಣ್ಣಾಗಿದ್ದ, ಮಂಡ್ಯದ ಕಳಸದಂತ್ತಿದ್ದ. ಅಕ್ಕರೆಯಿಂದ ನಮ್ಮನ್ನ ಬೈಯುತ್ತಿದ್ದ. ಈಗ ಯಾರಣ್ಣ ನಮ್ಮನ್ನು ಬೈಯ್ಯೋರು? ಮಂಡ್ಯದ ಜನರು ಅನಾಥರಾಗಿ ಹೋದೆವು ಎಂದು ಮಳವಳ್ಳಿಯಿಂದ ಬೈಕ್‌ನಲ್ಲಿ ಬಂದಿದ್ದ ಬಸವರಾಜು ಅವರು ಅಂಬರೀಶ್ ಅವರ ನಿವಾಸದ ಮುಂದೆ ಬಿಕ್ಕಿ ಬಿಕ್ಕಿ ಅತ್ತರು. ಅಣ್ಣನನ್ನು ಆತನ ಹೊಸ ಮನೆ ಮುಂದೆ ನೋಡಬೇಕು ಎಂಬ ಆಸೆಯಿಂದ ಬಂದೆ.
ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಬೈಕ್ ಏರಿದೆ.ಆದರೆ ನಮ್ಮಣ್ಣನೇ ಇಲ್ಲಿಲ್ಲ ಎಂದು ಕಣ್ಣೀರಿಡುತ್ತಲೇ ಕಂಠೀರವ ಕ್ರೀಡಾಂಗಣದತ್ತ ಮುಖ ಮಾಡಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕಾರು, ಆಟೋ, ಬೈಕ್‌ನಲ್ಲಿ ಅಭಿಮಾನಿಗಳು ಅವರ ನಿವಾಸದತ್ತ ದೌಡಾಯಿಸುತ್ತಲೇ ಇದ್ದರು. ಕೆಲವರು ಹೊಸ ಮನೆ ಇರಿಸಲಾಗಿದ್ದ ಭಾವಚಿತ್ರಕ್ಕೆ ಕೈ ಮುಗಿದು ಹೊರ ಬಂದರೆ, ಇನ್ನು ಕೆಲವರು ಅಂಬರೀಶ್ ಅವರು ಇತ್ತೀಚೆಗೆ ವಾಸವಿದ್ದ ಜಯನಗರ ನಿವಾಸದ ಮುಂದೆ ನಿಂತು ಕಣ್ಣೀರಿಟ್ಟರು.
ಅಂಬರೀಶ್ ಅವರು ಗುರುವಾರ ಜೆ.ಪಿ.ನಗರದ ನಿವಾಸಕ್ಕೆ ಭೇಟಿ ನೀಡಿದ್ದರು. ಕಟ್ಟಡದ ಒಳಗೆ ನಡೆಯುತ್ತಿದ ಕೆಲಸವನ್ನು ವೀಕ್ಷಿಸಿ, ಕೆಲಸ ಯಾವಾಗ ಮುಗಿಯುತ್ತೆ ಎಂದು ಕೇಳಿ, ಜನವರಿಯೊಳಗೆ ಮುಗಿಸುವಂತೆ ಇಂಜಿನಿಯರಿಂಗ್ ಕಾರ್ಮಿಕರಿಗೆ ತಿಳಿಸಿ ಹೋಗಿದ್ದರು.-ರಾಹುಲ್, ಕಾವಲುಗಾರ * ದೇವೇಶ್ ಸೂರಗುಪ್ಪ