Advertisement

ಹೆಜ್ಜೆ-ಗೆಜ್ಜೆಯ ನೃತ್ಯ ನಿನಾದ

12:28 PM Jan 29, 2018 | |

ಬೆಂಗಳೂರು: ಅಲ್ಲಿ ಗಂಧರ್ವ ಲೋಕವೊಂದು ಮೇಳೈಸಿತ್ತು. ಸಂಗೀತದ ಜತೆ ತಾಳ ಮೇಳ ಮತ್ತಷ್ಟು ಕಳೆ ತಂದಿತ್ತು. ನಡು ನಡುವೆ ನೃತ್ಯಾರಾಧಕರ ಪುಳಕ ಹೇಳತೀರದಾಗಿತ್ತು. ಪುಟಾಣಿ ಕಲಾವಿದರ ಹೆಜ್ಜೆಯೊಂದಿಗಿನ ಗೆಜ್ಜೆಯ ಸದ್ದು, ಇಡೀ ಕಾರ್ಯಕ್ರಮಕ್ಕೆ ಅಂದ ನೀಡಿತು.

Advertisement

ಹೆಸರಾಂತ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಅವರ ಪರಿಕಲ್ಪನೆಯಲ್ಲಿ, ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದ ಶಂಕರ ಫೌಂಡೇಷನ್‌ನಲ್ಲಿ ನಡೆದ ಎರಡು ದಿನಗಳ ನೃತ್ಯ ಮೇಳ “ಡ್ಯಾನ್ಸ್‌ ಜಾತ್ರೆ-2018′ ಕಲಾರಾಧಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು. ಜತೆಗೆ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಗಮನಸೆಳೆಯಿತು.

ಶನಿವಾರ ಬೆಳಗ್ಗೆಯಿಂದ ಭಾನುವಾರ ರಾತ್ರಿವರೆಗೂ ನಡೆದ ನೃತ್ಯ ಜಾತ್ರೆಯಲ್ಲಿ ಹೆಸರಾಂತ ಭರತನಾಟ್ಯ ಕಲಾವಿದೆ ಪದ್ಮಿನಿ ರವಿ, ಡ್ರಮ್ಸ್‌ ಕಲಾವಿದ ಅರುಣ್‌ ಕುಮಾರ್‌, ಹಿರಿಯ ನಾಟ್ಯ ಕಲಾವಿದೆ ರಾಧಾ ಶ್ರೀಧರ್‌, ಭುವನೇಶ್ವರದ ರತಿಕಾಂತ್‌ ಮಹಾಪಾತ್ರ, ಶ್ರೀವಿದ್ಯಾ ಮುರಳೀಧರ್‌ ಸೇರಿ ಹೆಸರಾಂತ ಕಲಾವಿದರ ದಂಡೇ ಪಾಲ್ಗೊಂಡಿತ್ತು.

ಬಾಂಗ್ಲಾದೇಶ, ಚೀನಾ, ಕೋಲ್ಕತ್ತಾ, ದೆಹಲಿ, ಮುಂಬೈ ಸೇರಿದಂತೆ ರಾಜ್ಯದ ಪುಟಾಣಿ ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು. ಸುಮಾರು ಆರು ನೂರು ಕಲಾವಿದರು ವಿವಿಧ ಪ್ರಕಾರದ ನಾಟ್ಯಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಲಾರಾಧಕರ ಪ್ರಶ‌ಂಸೆಗೆ ಪಾತ್ರರಾದರು.

ಎರಡು ವೇದಿಕೆಗಳಲ್ಲಿ ಹಿರಿಯ ಮತ್ತು ಕಿರಿಯರ ನೃತ್ಯ ಸ್ಪರ್ಧೆ ನಡೆದರೆ ಮತ್ತೂಂದೆಡೆ ಕಥಕ್‌, ಭರತನಾಟ್ಯ, ಕಾರ್ಯಗಾರ, ಸಂವಾದ ಕಾರ್ಯಕ್ರಮಗಳು ಕೂಡ ನಡೆದವು. ಇದರ ಜತೆ ನೃತ್ಯಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶ ಕೂಡ ನೋಡುಗರ ಗಮನಸೆಳೆಯಿತು.

Advertisement

ಡ್ಯಾನ್ಸ್‌ ಜಾತ್ರೆಯ ಬಗ್ಗೆ ಯುವ ನೃತ್ಯಕಲಾವಿದರಾದ ಕೆ.ಆರ್‌.ಪುರಂನ ಚಂದನ್‌ ಮತ್ತು ದೇವಸಂದ್ರದ ಮಧುಸೂದನ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಶ್ರೇಷ್ಠ, ದಿಗ್ಗಜ ನೃತ್ಯ ಕಲಾವಿದರು ಭಾಗವಹಿಸಿರುವ ಮೇಳದಲ್ಲಿ ಪಾಲ್ಗೊಂಡಿರುವುದೇ ಒಂದು ಹೆಮ್ಮೆ ಎಂದರು.  

ನೃತ್ಯ ಹಬ್ಬದ ಪರಿಕಲ್ಪನೆ: “ಊರಿನಲ್ಲಿ ಜಾತ್ರೆ, ಹಬ್ಬ ಮಾಡಿದಂತೆ ನೃತ್ಯ ಹಬ್ಬ ಯಾಕೆ ಮಾಡಬಾರದು ಎಂಬ ಪರಿಕಲ್ಪನೆ ನನ್ನಲ್ಲಿ ಮೂಡಿತು. ಹೀಗಾಗಿ ಇದೇ ಮಾದರಿಯಲ್ಲಿ ನಾವು ನೃತ್ಯ ಹಬ್ಬವನ್ನು ಆಚರಿಸಬೇಕು ಎಂದು ಆಲೋಚಿಸಿ “ಡ್ಯಾನ್ಸ್‌ ಜಾತ್ರೆ’ಗೆ ಚಾಲನೆ ನೀಡಲಾಯಿತು,’ ಎಂದು ಕಾರ್ಯಕ್ರಮದ ಮುಖ್ಯ ರೂವಾರಿ ಹಾಗೂ ಪ್ರಸಿದ್ಧ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಹೇಳಿದರು.

“7 ವರ್ಷಗಳಿಂದ ಈ ಜಾತ್ರೆ ನಡೆಯುತ್ತಿದೆ. ಕಳೆದ ಭಾರಿ ಧಾರವಾಡದಲ್ಲಿ ಡಾನ್ಸ್‌ ಜಾತ್ರೆ ನಡೆದಿತ್ತು.ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಬೆಂಗಳೂರಿನಲ್ಲಿ ಆಯೋಜಿಸಿದ್ದು ಇಲ್ಲಿಯೂ ಕಲಾರಾಧಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಕಲಾವಿದರಿಗೂ ತಮ್ಮ ಪ್ರತಿಭೆಯನ್ನು ಸಭಿಕರ ಮುಂದೆ ಪ್ರದರ್ಶಿಸಲು ದೊಡ್ಡ ವೇದಿಕೆಯಾಯಿತು,’ ಎಂದು ಖುಷಿಪಟ್ಟರು.  

ನೃತ್ಯಕಲಾವಿದರಿಗೆ ಇದೊಂದು ದೊಡ್ಡ ವೇದಿಕೆ.ದೇಶ ವಿದೇಶಗಳಿಂದಲೂ ಹಲವು ಪ್ರತಿಭಾನ್ವಿತ ನೃತ್ಯ ಕಲಾವಿದರು ಇಲ್ಲಿ ಪಾಲ್ಗೊಂಡಿದ್ದಾರೆ.ಅವರೊಂದಿಗೆ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ.
-ಧಾನ್ಯಶ್ರೀ ಜಯನಗರ, ಯುವ ಭರತನಾಟ್ಯ ಕಲಾವಿದೆ

Advertisement

Udayavani is now on Telegram. Click here to join our channel and stay updated with the latest news.

Next