Advertisement

ಸ್ಟೀಲ್‌ ಸೇತುವೆ ಬಿಜೆಪಿ ಸರ್ಕಾರದ 40% ದಂಧೆಯ ಅಕ್ರಮ ಶಿಶು: ಆಪ್ ಆರೋಪ

03:25 PM Aug 24, 2022 | Team Udayavani |

ಬೆಂಗಳೂರು : ಬೆಂಗಳೂರಿನ ಶಿವಾನಂದ ವೃತ್ತದಲ್ಲಿ 39 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಟೀಲ್‌ ಬ್ರಿಡ್ಜ್‌ ಬಿಜೆಪಿ ಸರ್ಕಾರದ 40% ಕಮಿಷನ್‌ ದಂಧೆಯ ಅಕ್ರಮ ಶಿಶು ಎಂದು ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿವಾನಂದ ವೃತ್ತದ ಸ್ಟೀಲ್‌ ಸೇತುವೆಯನ್ನು ಕಳಪೆ ಗುಣಮಟ್ಟದ ಬೇರಿಂಗ್, ಶಾಕ್‌ ಅಬ್ಸಾರ್ವರ್‌ ಬಳಸಿ ನಿರ್ಮಿಸಲಾಗಿದೆ. ಆಗಸ್ಟ್‌ 15ರಿಂದ ಒಂದು ಬದಿಯ ಸಂಚಾರ ಆರಂಭವಾಗಿದ್ದು, ಅಲ್ಲಿ ಸಂಚರಿಸಿದರೆ ಕಳಪೆ ಕಾಮಗಾರಿ ಸ್ಪಷ್ಟವಾಗುತ್ತಿದೆ. ಸೇತುವೆಯಲ್ಲಿ ಸುಮಾರು 20 ಮೀಟರ್‌ಗೊಮ್ಮೆ ಜಾಯಿಂಟ್‌ಗಳಿದ್ದು, ಅಲ್ಲಿ ವಾಹನ ಸವಾರರಿಗೆ ಕಿರಿಕಿರಿಯಾಗುವಂತಹ ಅವೈಜ್ಞಾನಿಕ ಹಂಪ್ ಗಳನ್ನು ನಿರ್ಮಿಸಲಾಗಿದೆ. ಲಘು ವಾಹನ ಸಂಚರಿಸಿದರೂ ಸೇತುವೆ ವೈಬ್ರೇಟ್‌ ಆಗುತ್ತಿದೆ” ಎಂದು ಆರೋಪಿಸಿದರು.

“ಆಗಸ್ಟ್‌ 30ರಂದು ಶಿವಾನಂದ ವೃತ್ತದ ಸ್ಟೀಲ್‌ ಸೇತುವೆಯು ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಆಮ್‌ ಆದ್ಮಿ ಪಾರ್ಟಿಯು ಅದರ ಹಿಂದಿನ ದಿನವಾದ ಆಗಸ್ಟ್‌ 29ರಂದು ಉದ್ಘಾಟನೆಯ ಅಣಕು ಪ್ರದರ್ಶನ ನಡೆಸಿ ಕಳಪೆ ಕಾಮಗಾರಿಯನ್ನು ಬಯಲು ಮಾಡಲಿದೆ. ಈ ಮೂಲಕ ಭ್ರಷ್ಟ ಬಿಜೆಪಿ ಸರ್ಕಾರದ ಅವ್ಯವಹಾರದ ಕುರಿತು ಜನಜಾಗೃತಿ ಮೂಡಿಸುತ್ತೇವೆ” ಎಂದು ತಿಳಿಸಿದರು.

2017ರಲ್ಲಿ ಆರಂಭವಾದ ಕಾಮಗಾರಿಯು ಪೂರ್ಣಗೊಳ್ಳಲು ಇಷ್ಟು ವರ್ಷಗಳ ಸಮಯ ತೆಗೆದುಕೊಂಡಿರುವುದು ದುರಂತ. ಆರಂಭದಲ್ಲಿ ಕೇವಲ 19 ಕೋಟಿ ರೂಪಾಯಿಯಾಗಿದ್ದ ಕಾಮಗಾರಿ ಮೊತ್ತವು ಈಗ ಬರೋಬ್ಬರಿ 39 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು 2000 ಕೋಟಿ ರೂ. ವೆಚ್ಚದಲ್ಲಿ ಚಾಲುಕ್ಯ ವೃತ್ತದಿಂದ ಹೆಬ್ಬಾಳದ ತನಕ ಸ್ಟೀಲ್‌ ಸೇತುವೆ ನಿರ್ಮಾಣ ನೆಪದಲ್ಲಿ ಲೂಟಿಗೆ ಮುಂದಾದಾಗ ಎಎಪಿ ಹಾಗೂ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆಗ ಸಿದ್ದರಾಮಯ್ಯನವರ ವಿರುದ್ಧ 500 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಇದರಿಂದ ಪ್ರೇರಣೆಗೊಂಡ ಬಿಜೆಪಿ ಸರ್ಕಾರವು ಅಕ್ರಮ ನಡೆಸಲೆಂದೇ ಸ್ಟೀಲ್‌ ಸೇತುವೆಯನ್ನು ಪೂರ್ಣಗೊಳಿಸಿದೆ” ಎಂದು  ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಮಾತನಾಡಿ, “ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಶೇ. 40ರಷ್ಟಿದ್ದ ಕಮಿಷನ್‌ ಈಗ ಶೇ. 50ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿಯ ಆಯುಕ್ತರಿಗೆ ಬಿಬಿಎಂಪಿ ಕಾರ್ಯನಿರತ ಪತ್ರಕರ್ತರ ಸಂಘವು ದೂರು ಸಲ್ಲಿಸಿರುವುದು ಆಘಾತಕಾರಿ. ಕಮಿಷನ್‌ ನೀಡಲು ಒಪ್ಪದ ಕಾರಣಕ್ಕಾಗಿ ಹಲವು ಗುತ್ತಿಗೆದಾರರಿಗೆ 22 ತಿಂಗಳುಗಳಿಂದ ಬಿಲ್‌ ಪಾವತಿಯಾಗಿಲ್ಲ. ಕಮಿಷನ್‌ ದಂಧೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ಬಿಜೆಪಿಯು ತಲೆಕೆಡಿಸಿಕೊಳ್ಳದೇ, ಕಮಿಷನ್‌ ಹೆಚ್ಚಿಸುವುದರಲ್ಲಿ ನಿರತವಾಗಿದೆ” ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next