ಬೆಂಗಳೂರು: ಸಾಮಾನ್ಯವಾಗಿ ಮನೆ ಅಥವಾ ಅಂಗಡಿಗೆ ನುಗ್ಗಿ ನಗದು, ಚಿನ್ನಾಭರಣ, ವಾಹನ ಕಳವು ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಬ್ಬ ಊಬರ್ ಚಾಲಕ, ತನ್ನ ಆನ್‌ಲೈನ್ ಗೇಮಿಂಗ್ ಚಟಕ್ಕಾಗಿ ರಸ್ತೆ ಬದಿ ಇಟ್ಟಿದ್ದ ಸಾವಿರಾರು ಎಳ ನೀರು ಕದ್ದು ಮಾರಾಟ ಮಾಡುತ್ತಿದ್ದ. ಈತನ 6 ತಿಂಗಳ ಕಳ್ಳಾಟಕ್ಕೆ ಗಿರಿನಗರ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಎಳನೀರು ಕದಿಯುತ್ತಿದ್ದ ತಮಿಳುನಾಡು ಮೂಲದ ಮೋಹನ್ ಕುಮಾರ್ (35) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ 8.75 ಲಕ್ಷ ರೂ. ಮೌಲ್ಯದ ನೂರಾರು ಎಳನೀರು, ಒಂದು ಕಾರು, ರಾಯಲ್ ಎನ್‌ಫೀಲ್ಡ್ ಬುಲೆಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ನ.6 ರಂದು ಮಂಕುತಿಮ್ಮ ಪಾರ್ಕ್ ಬಳಿಯ ಪಾದಚಾರಿ ಮಾರ್ಗದಲ್ಲಿ ಇಟ್ಟಿದ್ದ ಎಳನೀರು ಕಳವು ಮಾಡಿದ್ದ ಎಂದು ಪೊಲೀಸರು ಹೇಳಿದರು.
ರಾಜಣ್ಣ ಎಂಬುವರು ಗಿರಿನಗರದ ಮಂಕುತಿಮ್ಮ ಪಾರ್ಕ್ ಹತ್ತಿರದ ಫುಟ್‌ಪಾತ್ ಮೇಲೆ ಎಳನೀರು ವ್ಯಾಪಾರ ಮಾಡುತ್ತಿದ್ದರು. ನ.6ರಂದು 1,150 ಎಳನೀರನ್ನು ರಾತ್ರಿ ತರಿಸಿ, ಟಾರ್ಪಲ್ ಮುಚ್ಚಿ ಮನೆಗೆ ಹೋಗಿದ್ದಾರೆ. ಮರು ದಿನ ಬಂದಾಗ ಸಾವಿರಾರು ಎಳನೀರುಗಳು ನಾಪತ್ತೆಯಾಗಿತ್ತು. ಈ ಸಂಬಂಧ ರಾಜಣ್ಣ ಗಿರಿನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಆನ್‌ಲೈನ್ ರಮ್ಮಿ ಸರ್ಕಲ್: ತಮಿಳುನಾಡು ಮೂಲದ ಆರೋಪಿ ಮೋಹನ್, ಒಂದೂವರೆ ವರ್ಷದಿಂದ ಬೆಂಗಳೂರಿನ ಮಡಿವಾಳದಲ್ಲಿ ವಾಸವಾಗಿದ್ದಾನೆ. ಪರಿಚಯಸ್ಥರಿಂದ ಬಾಡಿಗೆಗೆ ಕಾರು ಪಡೆದು, ಊಬರ್, ಓಲಾಗೆ ಕನೆಕ್ಟ್ ಮಾಡಿದ್ದ. ಈ ಮಧ್ಯೆ ಆನ್‌ಲೈನ್ ಮೂಲಕ ರಮ್ಮಿ ಸರ್ಕಲ್ ಆಟವಾಡಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದಾನೆ. ಅದನ್ನು ತೀರಿಸಲು ತಾನೂ ದುಡಿಯುತ್ತಿದ್ದ ಹಣ ಸಾಲುತ್ತಿರಲಿಲ್ಲ. ಹೀಗಾಗಿ ರಾತ್ರಿ ಸಂದರ್ಭದಲ್ಲಿ ಟ್ಯಾಕ್ಸಿ ಚಾಲನೆ ವೇಳೆ ಎಳನೀರು ಇಟ್ಟಿರುವುದನ್ನು ಗಮನಿಸುತ್ತಿದ್ದು, ರಾತ್ರಿ 11 ಗಂಟೆ ನಂತರ ಟಾರ್ಪಲ್‌ನಿಂದ ಮುಚ್ಚಿಟ್ಟಿದ್ದ ಎಳನೀರು ಕದ್ದು ಕಾರಿನಲ್ಲಿ ತುಂಬಿಕೊಳ್ಳುತ್ತಿದ್ದ ಆರೋಪಿ, ತನ್ನ ಬಾಡಿಗೆ ಮನೆಗೆ ಕೊಂಡೊಯ್ಯುತ್ತಿದ್ದ. ಮರು ದಿನ ಬೆಳಗ್ಗೆ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ ಸುತ್ತ-ಮುತ್ತ ಎಳನೀರು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದ. ಹೀಗೆ ಕಳೆದ 6 ತಿಂಗಳಿಂದ ನಗರದಲ್ಲಿ ಎಳನೀರು ಕದ್ದು ಮಾರಾಟ ಮಾಡುತ್ತಿದ್ದ.
ಇದನ್ನೂ ಓದಿ:West Indies ಆಟಗಾರನಿಗೆ ಆರು ವರ್ಷಗಳ ಕಾಲ ನಿಷೇಧ ಶಿಕ್ಷೆ ನೀಡಿದ ಐಸಿಸಿ
50-100 ಎಳನೀರು ಕಳುವಾಗಿದ್ದರಿಂದ ವ್ಯಾಪಾರಿಗಳು ದೂರು ನೀಡುತ್ತಿರಲಿಲ್ಲ. ಆದರೆ, ಒಂದೇ ಬಾರಿಗೆ 1,150 ಎಳನೀರು ಕಳುವಾಗಿದ್ದರಿಂದ ವ್ಯಾಪಾರಿ ರಾಜಣ್ಣ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಈತ ಊಬರ್, ಓಲಾಗೆ ಕಾರನ್ನು ಕನೆಕ್ಟ್ ಮಾಡಿದ್ದರೂ ಹೆಚ್ಚಿನ ಟ್ರಿಪ್ ಮಾಡಿಲ್ಲ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಪುರ್‌ವಾದ್, ವಿ.ವಿ.ಪುರಂ ಉಪವಿಭಾಗ ಎಸಿಪಿ ನಾಗರಾಜು, ಠಾಣಾಧಿಕಾರಿ ಸಂದೀಪ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.