ಬೆಂಗಳೂರು: ಒಎಲ್‌ಎಕ್ಸ್‌ನ ಜಾಹಿರಾತು ನೋಡಿ ಬೈಕ್ ಖರೀದಿಸಲು ಬಂದು ಟೆಸ್ಟ್ ರೈಡ್ ನೆಪದಲ್ಲಿ ಬೈಕ್ ಸಮೇತ ಪರಾರಿಯಾಗುತ್ತಿದ್ದ ಆರೋಪಿಯನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ಪುನೀತ್ ಕುಮಾರ್ (28) ಬಂಧಿತ. ಈತನಿಂದ 3 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನ, 3 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಒಎಲ್‌ಎಕ್ಸ್‌ನಲ್ಲಿ ಬೈಕ್ ಮಾರಾಟದ ಜಾಹಿರಾತು ಹಾಕಿದ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಪುನೀತ್, ಬಳಿಕ ಬೈಕ್ ಖರೀದಿ ನೆಪದಲ್ಲಿ, ಟೆಸ್ಟ್ ರೈಡ್ ಮಾಡುವುದಾಗಿ ಹೇಳಿ ಬೈಕ್ ತೆಗೆದುಕೊಂಡು ಪರಾರಿಯಾಗುತ್ತಿದ್ದ.
ನಂತರ ನಂಬರ್ ಪ್ಲೇಟ್ ಬದಲಾಯಿಸಿ ಅದೇ ಬೈಕ್ ಅನ್ನು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿದೆ ಎಂದು ಜಾಹಿರಾತು ಹಾಕುತ್ತಿದ್ದ. ಅಷ್ಟೆ ಅಲ್ಲದೆ, ನಗರದ ಕೆಲವೆಡೆ ಮನೆ ಮುಂದೆ ನಿಲ್ಲಿಸುತ್ತಿದ್ದ ಐಷಾರಾಮಿ ಬೈಕ್‌ಗಳ ಹ್ಯಾಂಡ್‌ಲಾಕ್ ಮುರಿದು ನಕಲಿ ಕೀ ಬಳಸಿ ಕದ್ದೊಯ್ದು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿದೆ ಎಂಬುದಾಗಿ ಜಾಹಿರಾತು ಹಾಕುತ್ತಿದ್ದ ಎಂದು ಕಬ್ಬನ್‌ಪಾರ್ಕ್ ಪೊಲೀಸರು ತಿಳಿಸಿದ್ದಾರೆ.
ಗ್ರಾಹಕರ ದರೋಡೆ: ತಾನೂ ಜಾಹಿರಾತು ನೀಡುತ್ತಿದ್ದ ಬೈಕ್‌ಗಳನ್ನು ಖರೀದಿ ಮಾಡಲು ಬರುತ್ತಿದ್ದ ಗ್ರಾಹಕರನ್ನು ಪುನೀತ್ ಸುಲಿಗೆ ಮಾಡುತ್ತಿದ್ದ ಎಂದು ತನಿಖೆಯಿಂದ ಬಯಲಾಗಿದೆ. ಜಾಹಿರಾತು ಗಮನಿಸಿ ಕೆಲವರು ಬೈಕ್ ಖರೀದಿಸಲು ಈತನನ್ನು ಸಂಪರ್ಕಿಸುತ್ತಿದ್ದರು.
ಆಗ ಗ್ರಾಹಕರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಳ್ಳುತ್ತಿದ್ದ ಆರೋಪಿ, ಒಬ್ಬರೇ ಬಂದರೆ ಮಾರಕಾಸ್ತ್ರಗಳನ್ನು ತೋರಿಸಿ ಹಣ, ಮೊಬೈಲ್ ದರೋಡೆ ಮಾಡುತ್ತಿದ್ದ. ಹೀಗೆ ನಗರದ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಕೃತ್ಯವೆಸಗಿದ್ದು, ಈತನ ವಿರುದ್ಧ ಸುಮಾರು 8 ಠಾಣೆಗಳಲ್ಲಿ ದರೋಡೆ ಹಾಗೂ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಪೊಲೀಸರೇ ಗ್ರಾಹಕರಾದರು!: ಈತನ ವಿರುದ್ಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಇನ್‌ಸ್ಪೆಕ್ಟರ್ ವಿಜಯ್ ಹಡಗಲಿ ನೇತೃತ್ವದ ತಂಡ, ಒಎಲ್‌ಎಕ್ಸ್‌ನಲ್ಲಿ ಈತನ ಜಾಹಿರಾತು ಹಾಕಿರುವುದನ್ನು ಪತ್ತೆ ಹಚ್ಚಿ, ಸಂಪರ್ಕಿಸಿದ್ದರು.
ಬೈಕ್ ಖರೀದಿ ಮಾಡುವುದಾಗಿ ತಿಳಿಸಿದ್ದರು. ಡಿ.9ರಂದು ಈತ ಹೇಳಿದ ನಿರ್ಜನ ಪ್ರದೇಶಕ್ಕೆ ಒಬ್ಬರೆ ಬರುವುದಾಗಿ ಗ್ರಾಹಕರ ವೇಷದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹೋಗಿದ್ದಾರೆ. ನಂತರ ಇತರೆ ಸಿಬ್ಬಂದಿ ಸುತ್ತುವರಿದು ಪುನೀತ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿ ವಿವರಿಸಿದರು.