Advertisement

ರೋಗಿಗಳು ಮಲಗಿದ ಮೇಲೆ ವಾಸ್ತವ್ಯ!

11:24 PM Jan 24, 2020 | Lakshmi GovindaRaj |

ಚಿತ್ರದುರ್ಗ: ಗುರುವಾರ ತಡರಾತ್ರಿ 12 ಗಂಟೆಗೆ ಜಿಲ್ಲಾಸ್ಪತ್ರೆಗೆ ಆಗಮಿಸಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಾಸ್ತವ್ಯ ಮಾಡಿದರು. ಎಚ್‌.ಡಿ. ಕೋಟೆ ಹಾಗೂ ಮೈಸೂರಿನಲ್ಲಿ ಆಸ್ಪತ್ರೆ ಕಟ್ಟಡಗಳ ಉದ್ಘಾಟನೆ ಮಾಡಿ ರಾತ್ರಿ 10.30ಕ್ಕೆ ಜಿಲ್ಲಾಸ್ಪತ್ರೆಗೆ ವಾಸ್ತವ್ಯ ಮಾಡಲು ಆಗಮಿಸ ಬೇಕಾಗಿತ್ತು.

Advertisement

ಆದರೆ, ಸಚಿವರು ಬಂದಾಗ 12 ಗಂಟೆ ಕಳೆದಿತ್ತು. ರಾತ್ರಿ 10 ಗಂಟೆಯಿಂದಲೇ ಆಸ್ಪತ್ರೆಯ ಸಿಬ್ಬಂದಿ ಸಚಿವರನ್ನು ಸ್ವಾಗತಿಸಲು ಹಾರ, ತುರಾಯಿ ಹಿಡಿದು ಕಾದು ನಿಂತಿದ್ದರು. ಆರೋಗ್ಯ ಸಚಿವರು ತಡರಾತ್ರಿಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರಿಂದ ಸಮಸ್ಯೆಗಳನ್ನು ಹೇಳಿಕೊಳ್ಳಲು ರೋಗಿಗಳೆಲ್ಲಾ ಮಲಗಿದ್ದರು. ವಾರ್ಡ್‌ಗಳಿಗೆ ಭೇಟಿ ಮಾಡಿದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನೇರವಾಗಿ ವಿವಿಐಪಿ ವಾರ್ಡ್‌ಗೆ ತೆರಳಿ ವಾಸ್ತವ್ಯ ಮಾಡಿದರು.

ಈ ವೇಳೆ ಕೆಲವರು ತಮ್ಮ ಸಂಕಷ್ಟ ಹೇಳಿಕೊಳ್ಳಲು ಮುಂದಾದರೂ ಆಸ್ಪತ್ರೆಯ ಸಿಬ್ಬಂದಿ ಅವಕಾಶ ಮಾಡಿಕೊಡಲಿಲ್ಲ. ಬೆಳಗ್ಗೆ ಮತ್ತೆ ಆಸ್ಪತ್ರೆಗೆ ಆಗಮಿಸಿದ ಸಚಿವ ಶ್ರೀರಾಮುಲು ಕೆಲ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ನಂತರ, ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲಾಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

ನರ್ಸ್‌ಗಳಿಗೆ 21 ಸಾವಿರ ವೇತನದ ಭರವಸೆ: ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಎನ್‌ಆರ್‌ಎಚ್‌ಎಂ ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಶುಶ್ರೂಷಕಿಯರು 6 ರಿಂದ 9 ಸಾವಿರ ವೇತನ ಸಿಗುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆ ಆಧಾರದಲ್ಲಿ ನೇಮಕವಾದವರಿಗೆ 21 ಸಾವಿರ ವೇತನ ಕೊಡಿಸುವ ಬಗ್ಗೆ ಭರವಸೆ ನೀಡಿದರು.

ಕುಮಾರಸ್ವಾಮಿ ದೇಶ ಬಿಟ್ಟು ತೊಲಗಲಿ
ಚಿತ್ರದುರ್ಗ: ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಇತ್ತೀಚೆಗೆ ಪಾಕಿಸ್ತಾನದ ಮೇಲೆ ಬಹಳ ಪ್ರೀತಿ ಬೆಳೆಯುತ್ತಿದೆ. ಪಾಕ್‌ ಮೇಲೆ ಪ್ರೀತಿಯಿರುವ ಕುಮಾರಸ್ವಾಮಿ ಭಾರತ ದೇಶ ಬಿಟ್ಟು ತೊಲಗಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರ ಸ್ವಾಮಿ ಮಾಜಿ ಪ್ರಧಾನಿಯವರ ಪುತ್ರ. ಎರಡು ಸಲ ಮುಖ್ಯಮಂತ್ರಿ ಆಗಿದ್ದವರು. ಇವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಭಾರತ ಹಿಂದೂ ರಾಷ್ಟ್ರ. ಇಲ್ಲಿ ಎಲ್ಲರೂ ಸಮಾನರಾಗಿ ಬಾಳಬೇಕು. ದೇಶ ಒಡೆಯುವ ಷಡ್ಯಂತ್ರಕ್ಕಾಗಿ ಇಲ್ಲಸಲ್ಲದ ಮಾತು ಸರಿಯಲ್ಲ. ಈಗ ದೇಶದ ಜನತೆ ಒಂದಾಗುತ್ತಿದ್ದಾರೆ. ಹೀಗಾಗಿ ಓಟ್‌ ಬ್ಯಾಂಕ್‌ ಕೈ ತಪ್ಪಲಿದೆ ಎಂಬ ಆತಂಕದಲ್ಲಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಟೇಕ್‌ ಆಫ್‌ ಆಗಿಲ್ಲ ಎನ್ನುವ ಸಿದ್ದರಾಮಯ್ಯ ಇಂಗ್ಲಿಷ್‌ ಪದ ಬಳಸಿ ಟೀಕೆ ಮಾಡುವುದು ಸಹಜ. ಇತ್ತೀಚೆಗೆ ಅವರು ಎಲ್ಲೂ ಕಾಣಿಸುತ್ತಿಲ್ಲ. ಈಗ ಯಾರಿಗೂ ಬೇಡದ ವ್ಯಕ್ತಿ ಆಗಿದ್ದಾರೆ. ವಿಪಕ್ಷ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಯುತ್ತಿದೆ. ಆದರೆ, ಕಾಂಗ್ರೆಸ್‌ ಪಕ್ಷ ಡೆಡ್‌ ಆಗಿರುವ ಪಾರ್ಟಿ ಆಗಿದೆ. ಲೀಡರ್‌ಗಳು ಕೂಡಾ ಡೆಡ್‌ ಆದಂತಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.

ಚೀನಾದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್‌ ಭಾರತ ಪ್ರವೇಶಿಸ ದಂತೆ ಈಗಾಗಲೇ ಕ್ರಮ ವಹಿಸಲಾಗಿದೆ. ಏರ್‌ಪೋರ್ಟ್‌ಗಳಲ್ಲಿ ತಪಾಸಣೆ ನಡೆಯುತ್ತಿದೆ. ಇದಕ್ಕಾಗಿ ತಂಡ ನಿಯೋಜಿಸಲಾಗಿದೆ. ಚೀನಾ ದಲ್ಲಿ ಇರುವ ಭಾರತೀಯ ಕುಟುಂಬಗಳ ಬಗ್ಗೆಯೂ ನಿಗಾ ವಹಿಸಲಾಗಿದೆ.
-ಶ್ರೀರಾಮುಲು, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next