ರಾಮನಗರ: ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದು ರಾಮನಗರ ಜಿಲ್ಲೆಯಲ್ಲಿ ದುಡಿಯುತ್ತಿರುವ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರು ತಮ್ಮ ಸ್ವಂತ ಊರು ಅಥವಾ ಮೂಲ ಸ್ಥಳಗಳಿಗೆ ತೆರಳದೆ ಪ್ರಸ್ತುತ ಇರುವ ಸ್ಥಳದಲ್ಲಿಯೇ ತಮ್ಮ ದಿನನಿತ್ಯದ ಕರ್ತವ್ಯ ನಿರ್ವಹಿಸಿಕೊಂಡು ಜೀವನೋಪಯ ಕಂಡುಕೊಳ್ಳುವಂತೆ ಡಿಸಿ ಎಂ.ಎಸ್.
ಅರ್ಚನಾ ಕೋರಿದ್ದಾರೆ.
ಕೋವಿಡ್-19ರ ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸುವ ಮುಂಚಿನಿಂದಲೂ ವಿವಿಧ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ದುಡಿಯುವ ಉದ್ದೇಶ ಇಟ್ಟುಕೊಂಡು ಬಂದಿರುವ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕರು ರಾಮನಗರ ಜಿಲ್ಲೆಯಲ್ಲೂ ವಾಸಿಸುತ್ತಿದ್ದಾರೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಹಲವು ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಕಾಮಗಾರಿಗಳು ಹಾಗೂ ಇತರೆ ಕಾರ್ಯಗಳು ಸ್ಥಗಿತಗೊಂಡು ದುಡಿಯುವ ವರ್ಗಕ್ಕೆ ದುಡಿಮೆ ಇಲ್ಲದಂತಾಗಿರುವುದು ಜಿಲ್ಲಾಡಳಿತದ ಗಮನಕ್ಕೆ
ಬಂದಿರುತ್ತದೆ.
ಕೇಂದ್ರ ಗೃಹ ಮಂತ್ರಾಲಯ ಹಾಗೂ ಘನ ಸರ್ಕಾರ ಇಂತಹ ವಲಸೆ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ಕಾರ್ಮಿಕರಿಗೆ ಕೆಲಸ ಮಾಡುವಂತಹ ಅವಕಾಶ ನೀಡುತ್ತಿದ್ದು, ಸ್ಥಗಿತಗೊಂಡಿದ್ದ ಕೈಗಾರಿಕೆ, ಕಾರ್ಖಾನೆ, ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗಳನ್ನು ಪುನರಾರಂಭಿಸಲು ಅನುಮತಿ ನೀಡಿದೆ. ಇದು ದುಡಿಯುವ ವರ್ಗದ ಕಾರ್ಮಿಕರಿಗೆ ಹರ್ಷದಾಯಕ ವಿಚಾರವಾಗಿರುತ್ತದೆ. ಹೀಗಾಗಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಇತರೇ ಕಾರ್ಮಿಕರು ಧೃತಿಗೆಡದೆ ಅಥವಾ ಆತಂಕಕ್ಕೆ ಒಳಗಾಗದೆ ತಮ್ಮ ಸ್ವಂತ ಜಿಲ್ಲೆಗಳಿಗೆ, ಮೂಲ ಸ್ಥಳಗಳಿಗೆ ತೆರಳದೆ ಈಗ ಎಲ್ಲಿ ವಾಸಿಸುತ್ತಿದ್ದೀರೋ ಅಲ್ಲಿಯೇ ವಾಸಿಸಿ ತಾವು ಎಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಿರೋ ಅಂತಹ ಸ್ಥಳಗಳಲ್ಲಿ, ಕಾರ್ಖಾನೆ, ಕೆಲಸದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಲು ಸರ್ಕಾರ ಎಲ್ಲ ರೀತಿಯ ಅನುವು ಮಾಡಿಕೊಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.