ಧಾರವಾಡ: ಕಳೆದ ನಾಲ್ಕೈದು ದಿನಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಜೆ ವೇಳೆಗೆ ಉತ್ತಮ ಮಳೆ ಆಗುತ್ತಿದ್ದು, ಗುರುವಾರ ಸಹ ಗುಡುಗು ಸಿಡಿಲಿನ ಅಬ್ಬರ, ಜೋರಾದ ಗಾಳಿಯ ಮಧ್ಯೆ ಧಾರಾಕಾರ ಆಣೆಕಲ್ಲು ಮಳೆ ಆಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ನಗರದ ಲೈನ್‌ಬಜಾರ್, ಮದಿಹಾಳ, ಮಹಾನಗರ ಪಾಲಿಕೆ, ಕೋರ್ಟ್ ವೃತ್ತ, ಮದಿಹಾಳ, ಕೆಲಗೇರಿ ರಸ್ತೆ, ಕೆಸಿಡಿ ವೃತ್ತ, ಡಿಪೋ ವೃತ್ತ, ಬುದ್ಧರಕ್ಕಿಥ ಶಾಲೆ ಬಳಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮರಗಳು ಧರೆಗುರುಳಿವೆ.
ಕೆಲ ಕಡೆಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದದ್ದರೆ, ಕಾಸ್ ಮಸ್ ಕ್ಲಬ್ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರವೊಂದು ಉರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮರಗಳು ನೆಲಕ್ಕೆ ಉರುಳಿ ಬಿದ್ದ ಪರಿಣಾಮ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯ ಕೂಡವಾಯಿತು. ಗಾಂಧಿಚೌಕ್ ಮುಖ್ಯರಸ್ತೆಯಲ್ಲಿ ಯುಜಿಡಿ ಕಾಮಗಾರಿಗೆ ರಸ್ತೆ ಅಗೆದಿದ್ದ ರಸ್ತೆಯನ್ನು ಸರಿಯಾಗಿ ಸಮತಟ್ಟು ಮಾಡದ ಕಾರಣ ಮಳೆಯ ನೀರು ವೇಗವಾಗಿ ಹರಿಯಿತು.
ಹೀಗಾಗಿ ಈ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ಇದೇ ರೀತಿಯಲ್ಲಿ ನಗರದಲ್ಲಿ ಬಹುತೇಕ ಬಡಾವಣೆಗಳಲ್ಲಿ ನಿರಂತರ ನೀರು ಪೂರೈಕೆ ಪೈಪ್‌ಲೈನ್ ಹಾಗೂ ಯುಜಿಡಿ ಕಾಮಗಾರಿಗಾಗಿ ಅಗೆದ ಬಹುತೇಕ ರಸ್ತೆಗಳಲ್ಲಿನ ತಗ್ಗು-ಗುಂಡಿಗಳಲ್ಲಿ ನೀರು ತುಂಬಿಕೊಂಡಿತು.