Advertisement
ತಲೆತಲಾಂತರಗಳಿಂದ ಅಜ್ಜ, ಮುತ್ತಜ್ಜರು ಇದೇ ಅರಣ್ಯದೊಳಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಬಾಳಿ ಬದುಕಿ ಹೋಗಿದ್ದಾರೆ. ಇವರುಗಳು ಉಳಿಸಿದ ಅರಣ್ಯ ಪ್ರದೇಶವೇ ಇಂದು ಸಮೃದ್ಧವಾಗಿದೆ. ಆದರೆ ಗಿರಿಜನರ ಈಗಿನ ತಲೆಮಾರನ್ನು ಅರಣ್ಯದೊಳಗೆ ಬದಕಲು ಬಿಡುತ್ತಿಲ್ಲ ಎನ್ನುವ ಅಸಹಾಯಕತೆ ವ್ಯಕ್ತವಾಗಿದೆ.Related Articles
Advertisement
ಗುಡಿಸಲು ಕಟ್ಟಿಕೊಳ್ಳಲು ಬಿಡಲ್ಲ ಮಳೆ, ಚಳಿ, ಗಾಳಿಯಲ್ಲಿ ಆದಿವಾಸಿಗಳು ಸಂಕಷ್ಟದ ಜೀವನ ಸಾಗಿಸುತ್ತಿದ್ದರೂ ಕನಿಷ್ಠ ಗುಡಿಸಲು ನಿರ್ಮಿಸಿಕೊಳ್ಳಲು ಕೂಡ ಅವಕಾಶ ನೀಡುತ್ತಿಲ್ಲ. ವ್ಯವಸಾಯ ಮಾಡಲು, ಸೌದೆ ತರಲು ಅಡ್ಡಿಪಡಿಸಲಾಗುತ್ತಿದೆ. ಬಿದಿರಿನಿಂದ ಕಟ್ಟಿದ ತಾತ್ಕಾಲಿಕ ಸೂರು ಬೀಳುವ ಸ್ಥಿತಿಯಲ್ಲಿದೆ. ಹರಿದ ಸೀರೆಯ ತುಂಡುಗಳೇ ಸೂರಿನ ಗೋಡೆಗಳಾಗಿವೆ. ಸರಕಾರ ಅಕ್ಕಿ, ಮೊಟ್ಟೆ, ಬೇಳೆ, ಸಕ್ಕರೆ, ಸೀಮೆಣ್ಣೆ ನೀಡುತ್ತಿದ್ದರೂ ನೆಮ್ಮದಿಯಾಗಿ ಇದನ್ನು ಅನುಭವಿಸುವಂತಿಲ್ಲ. ಸಕಾಲದಲ್ಲಿ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಗಿರಿಜನರ ಒತ್ತಾಯಕ್ಕೆ ಮಣಿದು ಸಮಾಜಕಲ್ಯಾಣ ಇಲಾಖೆ ಹಾಗೂ ಗಿರಿಜನ ಅಭಿವೃದ್ಧಿ ಇಲಾಖೆ ಸೋರುತ್ತಿರುವ ಸೂರಿಗೆ ಪ್ಲಾಸ್ಟಿಕ್ ಹೊದಿಕೆಯನ್ನು ಇಲ್ಲಿಯವರೆಗೆ ನೀಡುತ್ತಿತ್ತು. ಆದರೆ ಈ ಬಾರಿ ಪ್ಲಾಸ್ಟಿಕ್ ವಿತರಣೆ ಮಾಡುವುದಕ್ಕೂ ಅನುದಾನ ಇಲ್ಲವೆಂದು ಜಿ.ಪಂ. ಸಭೆಯಲ್ಲಿ ಅಧಿಕಾರಿಗಳು ಹೇಳಿದ್ದಾರೆ. ಈ ಮಳೆಗಾಲದಲ್ಲಿ ಪ್ಲಾಸ್ಟಿಕ್ ನೀಡಲ್ಲ
ಮಳೆಗಾಲ ಆರಂಭವಾಗಿ ಒಂದು ತಿಂಗಳಾಗಿದೆ, ಮಳೆಗಾಲ ದಲ್ಲಿ ನೀಡಬೇಕಾದ ಪ್ಲಾಸ್ಟಿಕ್ ಸೇರಿದಂತೆ ಸರಕಾರದ ಯಾವುದೇ ಸೌಲಭ್ಯ ಇಲ್ಲಿಯವರೆಗೆ ಲಭಿಸಿಲ್ಲ. ಆದಿವಾಸಿ ಮಕ್ಕಳು ಹಾಗೂ ಮಹಿಳೆಯರು ರಕ್ತದ ಕೊರತೆಯಿಂದ ಬಳಲುತ್ತಿದ್ದಾರೆ. ಆದರೆ ಯಾವುದೇ ವೈದ್ಯಕೀಯ ಚಿಕಿತ್ಸೆಗಳು ದೊರೆಯುತ್ತಿಲ್ಲವೆಂದು ಹಾಡಿ ಜನ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಅರಣ್ಯ ಬಿಡಲ್ಲ
“ಈ ಕಾಡು ಬಿಟ್ಟು ನಾವು ಎಲ್ಲೂ ಹೋಗಲ್ಲ, ಕಾಡೇ ನಮ್ಮ ಜೀವ, ನಮ್ಮ ಸಂಪ್ರದಾಯದ ಆಚರಣೆಗಳಿಗೆ ಅರಣ್ಯವೇ ಮೂಲ ಆಧಾರವಾಗಿದೆ. ಔಷಧೋಪಚಾರವನ್ನು ಕೂಡ ಅರಣ್ಯದಲ್ಲಿರುವ ಸಸ್ಯ ರಾಶಿಯೇ ನೀಡುತ್ತದೆ. ಹೀಗಿರುವಾಗ ನಾವು ಅರಣ್ಯವನ್ನು ಬಿಟ್ಟು ಬರಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿರುವ ನಾಗರಹೊಳೆ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾದ ಜೆ.ಕೆ.ತಿಮ್ಮ, ಯಾವುದೇ ಕಾರಣಕ್ಕೂ ಅರಣ್ಯ ಬಿಡುವುದಿಲ್ಲವೆಂದು ತಿಳಿಸಿದ್ದಾರೆ. ಅರಣ್ಯದಲ್ಲಿ ವಾಸಿಸುವುದು ನಮ್ಮ ಪಾರಂಪರಿಕ ಹಕ್ಕಾಗಿದೆ. ಈ ಹಿಂದಿನ ಕೇಂದ್ರ ಸರಕಾರ ಕೂಡ ಆದಿವಾಸಿ ಅರಣ್ಯ ಹಕ್ಕು ಮಸೂದೆಯ ಮೂಲಕ ಕಾಡಿನ ಮಕ್ಕಳ ಹಕ್ಕನ್ನು ಉಳಿಸುವ ಕ್ರಮ ಕೈಗೊಂಡಿದೆ. ಆದರೆ ಕಾಯ್ದೆ ಬಂದು 11 ವರ್ಷವೇ ಆಗಿದ್ದರೂ ಅಧಿಕಾರಿಗಳು ಇದರ ಅನುಷ್ಠಾನಕ್ಕೆ ಮುಂದಾಗಿಲ್ಲ. ರಾಷ್ಟ್ರೀಯ ಉದ್ಯಾನವನದ ಪ್ರದೇಶವೆಂದು ನೆಪವೊಡ್ಡಿ ವಸತಿ ಯೋಜನೆಯಿಂದಲೂ ಇಲ್ಲಿನ ಗಿರಿಜನರನ್ನು ವಂಚಿಸಲಾಗಿದೆ ಎಂದು ತಿಮ್ಮ ಆರೋಪಿಸಿದ್ದಾರೆ. 2006ರಲ್ಲಿ ಸರಕಾರ ಜಾರಿಗೆ ತಂದಿರುವ ಕಾಯ್ದೆಯಡಿ ಗಿರಿಜನರಿಗೆ ಭೂಮಿಯ ಹಕ್ಕನ್ನು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಆದಿವಾಸಿಗಳ ಪರ ಹೋರಾಟ ನಡೆಸಿ ಸರಕಾರದ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದ ಕಾರಣಕ್ಕಾಗಿ ನನ್ನ ವಿರುದ್ಧ ಅನೇಕ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಅರಣ್ಯ ಬಿಡಲು ಆಮಿಷವೊಡ್ಡುತ್ತಾರೆ
ನಿಮಗೆ ಅರಣ್ಯ ಭಾಗದಲ್ಲಿ ಜಾಗ ಸಿಗುವುದಿಲ್ಲ, ಹಣ ನೀಡುತೇವೆ, ಒಳ್ಳೆಯ ಸೂರುಕಟ್ಟಿ ಕೊಡುತ್ತೇವೆ ಎಂದೆಲ್ಲಾ ಆಮಿಷವೊಡ್ಡಿ ಅರಣ್ಯ ಭಾಗದಿಂದ ಹೊರದಬ್ಬುವ ಪ್ರಯತ್ನ ನಡೆಯುತ್ತಿದೆ. ಕೆಲವು ಬಾಂಡ್ ಪೇಪರ್‌ಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಜೆ.ಕೆ.ತಿಮ್ಮ ಆರೋಪಿಸಿದ್ದಾರೆ. ಚುನಾವಣೆ ಸಂದರ್ಭ ಮಾತ್ರ ಗಿರಿಜನರ ಬಗ್ಗೆ ಕರುಣೆಯ ಮಾತುಗಳನ್ನಾಡುವ ರಾಜಕಾರಣಿಗಳು ಹಣ, ಮದ್ಯವನ್ನು ಹಂಚಿ ಮತ ಗಳಿಸುತ್ತಾರೆ. ಅನಂತರ ನಮ್ಮ ಸಂಕಷ್ಟದ ಬದುಕನ್ನು ತಿರುಗಿಯೂ ನೋಡುವುದಿಲ್ಲವೆಂದು ಟೀಕಿಸಿದ್ದಾರೆ. ನಮ್ಮ ಪೂರ್ವಜರು ವಾಸ ಮಾಡಿದ ಅರಣ್ಯವನ್ನು ಬಿಟ್ಟು ನಾವೆಲ್ಲಿಗೂ ಹೋಗಲಾರೆವು, ಆದಿವಾಸಿಗಳು ಅರಣ್ಯದಲ್ಲಿ ಸುಖವಾಗಿರಬೇಕೆನ್ನುವ ಕಾರಣದಿಂದಲೇ ಸರಕಾರ ಹಲವು ಸೌಲಭ್ಯಗಳನ್ನು ಮಂಜೂರು ಮಾಡುತ್ತಿದೆ. ಹೀಗಿದ್ದೂ ಅಧಿಕಾರಿಗಳು ನಮ್ಮನ್ನು ಅರಣ್ಯದಿಂದ ಎತ್ತಂಗಡಿ ಮಾಡಲು ಪ್ರಯತ್ನಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಕಾಡಿನ ಜನರ ಇಚ್ಛೆಗೆ ವಿರುದ್ಧವಾಗಿ ಅಧಿಕಾರಿಗಳು ನಿಯಮ ಮೀರಿದ ವರ್ತನೆಯನ್ನು ಪ್ರದರ್ಶಿಸಿದರೆ ತೀವ್ರ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಜೆ.ಕೆ.ತಿಮ್ಮ ಎಚ್ಚರಿಕೆ ನೀಡಿದ್ದಾರೆ.