ಬೆಂಗಳೂರು: ರಾಮನಗರದ ಕಪಾಲ ಬೆಟ್ಟದಲ್ಲಿ ಗೋಮಾಳದಲ್ಲಿ ಅನಧಿಕೃತವಾಗಿ ಏಸು ಕ್ರಿಸ್ತನ ಪ್ರತಿಮೆ ಸ್ಥಾಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭಕೋರಿ ನಂತರ ಸುದ್ದಿಗಾರರ ಜತೆ ಮಾತನಾಡಿ, ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಗೋಮಾಳ ಜಾಗ ನೀಡಲಾಗಿದ್ದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ, ಬೋರ್ ವೆಲ್ ಕೊರೆಯಲಾಗಿದೆ. 2 ಕಿ.ಮೀ ರಸ್ತೆಯನ್ನೂ ಮಾಡಲಾಗಿದೆ. ಎಲ್ಲವನ್ನೂ ಅನಧಿಕೃತವಾಗಿ ಮಾಡಲಾಗಿದೆ ಎಂದು ಹೇಳಿದರು.
ಈಗಾಗಲೇ ಅಲ್ಲಿನ ಚಟುವಟಿಕೆಗಳ ಬಗ್ಗೆ ರಾಮನಗರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಂದ ವರದಿ ಕೇಳಿದ್ದೇನೆ. ಅಧಿಕಾರಿಗಳು ನನ್ನನ್ನು ಭೇಟಿ ಮಾಡಿ ಮೌಖೀಕ ವರದಿ ನೀಡಿದ್ದಾರೆ. ಲಿಖೀತ ರೂಪದ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ. ವರದಿ ನಂತರ ಯಾವ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ನಿರ್ಧರಿಸಲಿದೆ. ಇನ್ನು ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಕಾರ್ಯವನ್ನು ಟ್ರಸ್ಟ್‌ನವರೇ ಸ್ಥಗಿತಗೊಳಿಸಿದ್ದಾರೆ ಎಂದರು.
ಮಹಾ ಕ್ಯಾತೆ: ಇದೇ ವೇಳೆ, ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಅನಗತ್ಯ ಕ್ಯಾತೆ ತೆಗೆಯುತ್ತಿದೆ. ಗಡಿ ಸಮಸ್ಯೆ ಮೂವತ್ತು-ನಲವತ್ತು ವರ್ಷಗಳ ಹಿಂದೆಯೇ ತೀರ್ಮಾನವಾಗಿದೆ. ಮಹಾರಾಷ್ಟ್ರದ್ದು ಹುಚ್ಚರ ಸರ್ಕಾರ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗೌರವಯುತವಾಗಿ ಆಡಳಿತ ನಡೆಸಲಿ. ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಬೆದರುವುದಿಲ್ಲ. ರಾಜ್ಯದ ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಮಹಾರಾಷ್ಟ್ರಕ್ಕೆ ಯಾವ ರೀತಿಯ ಉತ್ತರ ಕೊಡಬೇಕೋ ಕೊಡುತ್ತೇವೆ ಎಂದು ಅಶೋಕ್ ಹೇಳಿದರು.
ಹೊಸ ವರ್ಷಾಚರಣೆ ಅರಮನೆ ಮೈದಾನಕ್ಕೆ: ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ನೂತನ ವರ್ಷಾಚರಣೆ ಸಂದರ್ಭದಲ್ಲಿ ಕಿಡಿಗೇಡಿಗಳು ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಹೊಸ ವರ್ಷಾಚರಣೆ ಸ್ಥಳವನ್ನು ಅರಮನೆ ಮೈದಾನಕ್ಕೆ ಸ್ಥಳಾಂತರಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಸಲಹೆ ನೀಡಿದ್ದಾರೆ. ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಪ್ರತಿವರ್ಷ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪುಂಡರ ಕಾಟ ಹೆಚ್ಚಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಅರಮನೆ ಮೈದಾನದಲ್ಲಿ ವರ್ಷಾಚರಣೆಗೆ ಅವಕಾಶ ನೀಡುವ ಬಗ್ಗೆ ಆಲೋಚನೆ ಮಾಡಬೇಕು. ಕಿರುಕುಳ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.