ಬೆಂಗಳೂರು: ಬಡ ಕುಟುಂಬಗಳಿಗೆ ಎಪ್ರಿಲ್ ಒಂದರಿಂದ ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿ ನೀಡಲು ಸರಕಾರ ನಿರ್ಧರಿಸಿದೆ ಎಂದು ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಘೋಷಿಸಿದ್ದಾರೆ.
ಸೋಮವಾರ ಆರಂಭವಾದ ಹತ್ತು ದಿನಗಳ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತ ನಾಡಿದ ಅವರು, ಪ್ರಸ್ತುತ ಬಿಪಿಎಲ್ ಕಾರ್ಡ್‌ದಾರರಿಗೆ 5 ಕೆ.ಜಿ. ಅಕ್ಕಿ ನೀಡಲಾಗುತ್ತಿದ್ದು, ಅದನ್ನು 6 ಕೆ.ಜಿ.ಗೆ ಏರಿಸಲಾಗುವುದು ಎಂದರು. ಜತೆಗೆ ವಿದೇಶದಲ್ಲಿರುವ ಭಾರತೀಯರ ಜ್ಞಾನ ವನ್ನು ಸ್ವದೇಶದಲ್ಲೇ ಬಳಸಿಕೊಳ್ಳಲು “ಮರಳಿ ತಾಯ್ನಾಡಿಗೆ’ ಯೋಜನೆ ಅನುಷ್ಠಾನ ಗೊಳಿಸಲಾಗುವುದು ಎಂದರು.
75ನೇ ಸ್ವಾತಂತ್ರ್ಯ ಅಮೃತ ಮಹೋ ತ್ಸವ ಸವಿನೆನಪಿಗಾಗಿ ಆಮೃತ ಗ್ರಾಮೀಣ ವಸತಿ ಯೋಜನೆಯಡಿ 750 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ವಸತಿರಹಿತರನ್ನು ಗುರುತಿಸಿ ವಸತಿ ಕಲ್ಪಿ ಸಲು ಸರಕಾರ ಉದ್ದೇಶಿಸಿದೆ ಎಂದು ಹೇಳಿ ದರು. ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿ 750 ಗ್ರಾಮಗಳನ್ನು ಆಯ್ಕೆ ಮಾಡಿ, ಚಾಲ್ತಿಯಲ್ಲಿರುವ ಯೋಜನೆಗಳ ಅನುದಾನ ಬಳಸಿ ಅಭಿವೃದ್ಧಿ ಮಾಡಿದ ಪ್ರತಿ ಗ್ರಾ. ಪಂ.ಗೆ 25 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗು ವುದು. ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಶೈಕ್ಷಣಿಕ, ಆಡಳಿತ ವ್ಯವಸ್ಥೆ ಪರಿಣಾಮ ಕಾರಿಯಾಗಿ ಅನುಷ್ಠಾನ ಗೊಳಿಸಲು ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ ಎಂದರು.
ಕಂದಾಯ ಇಲಾಖೆಯು ದಾಖಲೆ ಮತ್ತು ನಕ್ಷೆ, ಆಕಾರ್ ಬಂದ್ ಮತ್ತಿತರ ಸಾರ್ವಜನಿಕ ಸೇವೆಗಳನ್ನು ಗಣಕೀಕರಣಗೊಳಿಸುತ್ತಿದೆ. ಮನೆ ಬಾಗಿಲಿಗೆ ಪಿಂಚಣಿ ಪಾವತಿ ವ್ಯವಸ್ಥೆ ಮಾಡಿ ಫಲಾನುಭವಿಗಳ ಪರಿಶೀಲನೆ ಮಾಡಿ 3.15 ಲಕ್ಷ ಮೃತ, ವಲಸೆ ಹಾಗೂ ಅನರ್ಹ ಫಲಾನುಭವಿಗಳ ಪತ್ತೆ ಮಾಡಿ ಪಿಂಚಣಿ ಸ್ಥಗಿತಗೊಳಿಸಿ 378 ಕೋಟಿ ರೂ. ಬೊಕ್ಕಸಕ್ಕೆ ವಾರ್ಷಿಕವಾಗಿ ಉಳಿತಾಯ ಮಾಡಲಾಗಿದೆ ಎಂದರು.
2021-22ನೇ ಸಾಲಿನಲ್ಲಿ ಅಕಾಲಿಕ ಮಳೆ ಹಾಗೂ ನೆರೆಯಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವುಂಟಾಗಿದ್ದು, 85,862 ಸಂತ್ರಸ್ತ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ಮನೆ ಹಾನಿಗೆ 5 ಲಕ್ಷ, 3 ಲಕ್ಷ ಹಾಗೂ 50 ಸಾವಿರ ರೂ.ನಂತೆ 400.52 ಕೋಟಿ ರೂ. ನೆರವು ಒದಗಿಸಲಾಗಿದೆ. ಬೆಳೆ ನಷ್ಟಕ್ಕೆ 1,129.46 ಕೋ. ರೂ. ರೈತರ ಖಾತೆ ಗಳಿಗೆ ಜಮೆ ಮಾಡಲಾಗಿದೆ ಎಂದರು.
ಕನ್ನಡದಲ್ಲಿ ಮಾತು; ಸರಕಾರಕ್ಕೆ ಮೆಚ್ಚುಗೆ
“ರಾಜ್ಯಪಾಲನಾಗಿ ಕರ್ನಾಟಕದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಹಾಗೂ ಸಂತೋಷ ಎನಿಸು ತ್ತಿದೆ’ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ರಾಜ್ಯಪಾಲರು, ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಸದಸ್ಯರಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು. ನನ್ನ ಸರಕಾರ ಸಂಕಷ್ಟದ ಕಾಲದಲ್ಲೂ ಎಲ್ಲ ರಂಗಗಳಲ್ಲಿಯೂ ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸಿ ಜನಪರ ತೀರ್ಮಾನ ಕೈಗೊಂಡು ಯೋಜನೆ ಗಳ ಅನುಷ್ಠಾನಿಸುತ್ತಿದೆ ಎಂದರು.