ಔರಾದ: ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳನ್ನು ಯುವ ಸಮೂಹಕ್ಕೆ ಪರಿಚಯಿಸುವ ಉದ್ದೇಶದಿಂದ ಸರ್ಕಾರ ಹಾಗೂ ಸಂಘ ಸಂಸ್ಥೆಯ ಮುಖಂಡರು ರಸ್ತೆ ಮಧ್ಯದಲ್ಲಿ ಪ್ರತಿಷ್ಠಾಪಿಸುವ ಅವರ ಮೂರ್ತಿಗಳು ಅಪಘಾತಕ್ಕೆ ಕಾರಣವಾಗಿ, ಜನರು ಜೀವ ಕಳೆದುಕೊಳ್ಳುವ ಘಟನೆಗಳು ಮನ ಕುಲುಕುಂವತೆ ಮಾಡಿವೆ. ಬೋರಾಳ ಗ್ರಾಮದಲ್ಲಿ ಇತ್ತಿಚೇಗೆ ಅಂಬೇಡ್ಕರ ವೃತ್ತಕ್ಕೆ ಲಾರಿ ಡಿಕ್ಕಿ ಹೊಡೆದು ಹೊಟೇಲ್‌ನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಇದಕ್ಕೆ ತಾಜಾ ಉದಾಹರಣೆ.
ಔರಾದ ತಾಲೂಕಿನ ವಡಗಾಂವ, ಸಂತಪೂರ, ಚಿಂತಾಕಿ, ಎಕಂಬಾ, ದಾಬಕಾ, ಠಾಣಾಕುಶನೂರ, ನೂತನ ತಾಲೂಕು ಕಮಲನಗರ ಸೇರಿದಂತೆ ಇನ್ನಿತರ ಗ್ರಾಪಂ ಕೇಂದ್ರಸ್ಥಾನಗಳಲ್ಲೂ ಇದೇ ರೀತಿ ಮೂರ್ತಿಗಳು ಸಂಚಾರಕ್ಕೆ ಅಡೆತಡೆಯಾಗಿವೆ. ಅಲ್ಲದೆ ಪ್ರತಿವರ್ಷ ಹೀಗೆ ರಸ್ತೆ ಅಪಘಾತ, ಮೂರ್ತಿಗೆ ವಾಹನ ಡಿಕ್ಕಿಯಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಪ್ರತಿವರ್ಷ ಅವಘಡ: ಕಮಲನಗರ ತಾಲೂಕಿನ ಸಂಗಮ ಗ್ರಾಮದಲ್ಲಿ ರಸ್ತೆ ಮಧ್ಯದಲ್ಲಿರುವ ಬಸವೇಶ್ವರ ಮೂರ್ತಿಗೆ ಬಳ್ಳಾರಿ ಜಿಂದಾಲ್ ಕಂಪನಿಯ ಲಾರಿ ಡಿಕ್ಕಿ ಹೊಡೆದು ಮೂರ್ತಿಯನ್ನು ಧ್ವಂಸ ಮಾಡಿದ್ದರಿಂದ ಲಿಂಗಾಯತ ಸಮುದಾಯದ ಮುಖಂಡರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಸಂತಪೂರ ಗ್ರಾಮದಲ್ಲಿ ಬಸವೇಶ್ವರ ಮೂರ್ತಿಗೆ ಶಿಖ್ ಯಾತ್ರಿಕರು ಡಿಕ್ಕಿ ಹೊಡೆದಾಗ ಗ್ರಾಮಸ್ಥರು ಮೂರ್ತಿ ನಿರ್ಮಾಣ ಮಾಡಿಕೊಡುವಂತೆ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತಾಗ ಶಿಖ್ ಯಾತ್ರಿಕರು ಹಾಗೂ ಗ್ರಾಮಸ್ಥರ ನಡುವೆ ಕಲ್ಲು ತೂರಾಟ ನಡೆದು ಅಂದಿನ ಸಿಪಿಐ ವಿನೋದಕುಮಾರ ಗಂಭೀರವಾಗಿ ಗಾಯಗೊಂಡಿದ್ದರು. ವಡಗಾಂವ ಗ್ರಾಮದ ಅಂಬೇಡ್ಕರ್ ಮೂರ್ತಿಗೆ ಖಾಸಗಿ ಮ್ಯಾಕ್ಸಿ ಡಿಕ್ಕಿ ಹೊಡೆದಾಗ ದಲಿತ ಸಂಘಟನೆಯ ಮುಖಂಡರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಔರಾದ ತಾಲೂಕಿನ ಬೋರಾಳ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆಯೇ ಅಂಬೇಡ್ಕರ್ ಮೂರ್ತಿಗೆ ಖಾಸಗಿ ವಾಹನ ಡಿಕ್ಕಿ ಹೊಡೆದು ಕರಕ್ಯಾಳ ಗ್ರಾಮದಲ್ಲಿ ನಾಲ್ಕು ಜನರು ಸ್ಥಳದಲ್ಲಿಯೇ ಮೃತಪಟ್ಟು 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡು ಔರಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಅದರಂತೆ ನಾಲ್ಕು ದಿನಗಳ ಹಿಂದೆ ಕಂಟೇನರ್ ಲಾರಿ ಅಂಬೇಡ್ಕರ ವೃತಕ್ಕೆ ಡಿಕ್ಕಿ ಹೊಡೆದು ಪಕ್ಕದ ಹೊಟೇಲ್ ನಲ್ಲಿ ಕುಳಿತ ಮೂವರು ಸ್ಥಳಿಯರು ಹಾಗೂ ವಾಹನ ಚಾಲಕ ಸ್ಥಳದಲ್ಲಿಯೇ ನೃತ ಪಟ್ಟಿದ್ದರು. ಮೂರು ತಿಂಗಳ ಹಿಂದೆ ದ್ವಿಚಕ್ರವಾಹನದ ಮೇಲೆ ಬಂದ ದಂಪತಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದರು. ಎಕಲಾರ ಗ್ರಾಮದಲ್ಲಿ ಖಾಸಗಿ ಲಾರಿ ಅಂಬೇಡ್ಕರ್ ವೃತ್ತಕ್ಕೆ ಡಿಕ್ಕಿ ಹೊಡೆದಿದೆ. ಬಾದಲಗಾಂವ ಗ್ರಾಮದಲ್ಲಿನ ಶಿವಾಜಿ ಮೂರ್ತಿಗೆ ಬಿಜೆಪಿ ಮುಖಂಡ ಶರಣಪ್ಪ ಪಂಚಾಕ್ಷರೆ ಅವರ ಪುತ್ರನ ವಾಹನ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಅದಲ್ಲದೆ ಕೆಲ ದಿನಗಳ ಹಿಂದೆ ಖಾಸಗಿ ವಾಹನ ಡಿಕ್ಕಿ ಹೊಡೆದಾಗ ಸಮುದಾಯದ ಬಾಂದವರೆಲ್ಲ ಸೇರಿ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಔರಾದ ತಾಲೂಕು ಕೇಂದ್ರದಲ್ಲಿ ಕನ್ನಡಾಂಬೆ ವೃತ್ತ ಹಾಗೂ ಡಾ|ಚನ್ನಬಸವ ಪಟ್ಟದೇವರ ವೃತ್ತಕ್ಕೆ ಎರಡು ಬಾರಿ ವಾಹನ ಡಿಕ್ಕಿ ಹೊಡೆದಿರುವ ಪ್ರಸಂಗ ನಡೆದಿದೆ. ಈ ಎಲ್ಲ ಮೂರ್ತಿಗಳು ಅಂತಾರಾಜ್ಯ ಹೆದ್ದಾರಿಯ ನಡು ರಸ್ತೆಯಲ್ಲಿ ಇರುವ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತನಗಳ ಸಂಖ್ಯೆ ಹೆಚ್ಚಾಗುತ್ತಿವೆ.
ಪ್ರತಿವರ್ಷ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಅಧಿ ಕಾರಿಗಳು ರಸ್ತೆ ಸುರಕ್ಷತೆ, ಸುಗಮ ಸಂಚಾರ, ವಾಹನ ಚಾಲಕರಿಗೆ ಸಾರಿಗೆ ನಿಯಮದ ಜಾಗೃತಿ, ಶಾಲೆ ಕಾಲೇಜಿನ ವಿದ್ಯಾಥಿಧಗಳು ಸೇರಿದಂತೆ ಇನ್ನಿತರ ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ವಾಹನ ಸವಾರರಿಗೆ ನಿಯಮ ಪಾಲನೆ ಮಾಡುವಂತೆ ತಿಳಿಸುತ್ತದ್ದಾರೆ. ಆದರೆ ರಸ್ತೆಯ ಹೃದಯ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಜನರ ಬಲಿ ಪಡೆದುಕೊಳ್ಳುತ್ತಿರುವ ಮೂರ್ತಿಗಳು ಇವೆ. ಇವುಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ರಸ್ತೆ ಅಗಲಿಕರಣದ ಬಗ್ಗೆ ಸಬಂಧ ಪಟ್ಟ ಇಲಾಖೆ ಅ ಧಿಕಾರಿಗಳು ಚಿಂತಿಸುತ್ತಿಲ್ಲ ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆಂತಕ ಮೂಡಿದೆ.
ಸೂಚನಾ ಫಲಕವೂ ಇಲ್ಲ: ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮೂರ್ತಿ ಹಾಗೂ ವೈಡ್‌ತಿರುವು ಆಕಾರದ ರಸ್ತೆ ಇರುವ ಕಡೆ ಸೂಚನಾ ಫಲಕವನ್ನೂ ಹಾಕದೆ ಇರುವುದು ರಸ್ತೆ ಅಪಘಾತಕ್ಕೆ ಕಾರಣವಾಗುತ್ತಿದೆ.
ವಿದ್ಯುತ್ ಸಂಪರ್ಕ ಇಲ್ಲ: ನಡು ರಸ್ತೆಯಲ್ಲಿ ಮೂರ್ತಿ ಇರುವ ವೃತ್ತಗಳಿಗೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸದಿರುವುದರಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿವೆ. ಗ್ರಾಮ ಪಂಚಾಯತ ಅಧಿಕಾರಿಗಳು ಇನ್ನಾದರೂ ಸೋಲಾರ್ ದೀಪ ಅಳವಡಿಸಲು ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಮನವಿಯಾಗಿದೆ.
ಸಾವಿಗೆ ಆಹ್ವಾನ: ಅಂತಾರಾಜ್ಯ ಹೆದ್ದಾರಿಗಳಲ್ಲಿ ರೋಡ್ ಬ್ರೆಕರ್ ಸಹ ಹಾಕಬಾರದು ಎಂದು ಸುಪ್ರಿಂಕೋರ್ಟ್ ಆದೇಶ ನೀಡಿದೆ. ಆದರೆ ಅಂತಾರಾಜ್ಯ ಹೆದ್ದಾರಿಯಲ್ಲಿ 50 ಹೆಚ್ಚು ಮೂರ್ತಿಗಳನ್ನು ಸರ್ಕಾರ ಹಾಗೂ ಸಂಘ ಸಂಸ್ಥೆಗಳೆ ನಿರ್ಮಿಸಿವೆ. ರಸ್ತೆಯ ಮಧ್ಯದಲ್ಲಿ ಮೂರ್ತಿಗಳು ಇರುವುದರಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ.
ಮನವಿ ಸಲ್ಲಿಸಿದ ಗ್ರಾಮಸ್ಥರು: ಕೆಲ ದಿನಗಳ ಹಿಂದೆ ಬೋರಾಳ ಗ್ರಾಮದಲ್ಲಿ ನಡೆದ ಘಟನೆಯಿಂದ ಜಾಗೃತರಾದ ಗ್ರಾಮಸ್ಥರು ರಸ್ತೆ ಸಣ್ಣದಾಗಿದೆ. ರಸ್ತೆಯ ಮಧ್ಯದಲ್ಲಿರುವ ಮೂರ್ತಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಿ, ಇಲ್ಲವಾದಲ್ಲಿ ರಸ್ತೆ ಅಗಲಿಕರಣ ಮಾಡುವಂತೆ ಗ್ರಾಮಸ್ಥರು ತಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಇನ್ನೂ ಮುಂದಾದರೂ ಸಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಂಡು ಅಪಘಾತ ತಪ್ಪಿಸಬೇಕೆಂದು ಬೋರಾಳ ಗ್ರಾಮಸ್ಥರು ಆಗ್ರಹಿಸಿದದ್ದಾರೆ.
ಬೋರಾಳ ಸೇರಿದಂತೆ ಅಂತಾರಾಜ್ಯ ಹೆದ್ದಾರಿಯಲ್ಲಿರುವ ಮಹನ್ ವ್ಯಕ್ತಿಗಳ ಮೂರ್ತಿ ಬೇರೆ ಕಡೆಗೆ ಸ್ಥಳಾಂತರ ಮಾಡಿ. ಇಲ್ಲವಾದಲ್ಲಿ ರಸ್ತೆ ಅಗಲಿಕರಣ ಮಾಡಿದ್ದರೆ ಮಾತ್ರ ಜನರ ಸಾವು ತಡೆಯಬಹುದು. ಇಲ್ಲವಾದಲ್ಲಿ ವರ್ಷದಿಂದ ವರ್ಷಕ್ಕೆ ಸಾಯುವ ಜೀವಗಳ ಸಂಖ್ಯೆ ಹೆಚ್ಚಾಗುತ್ತದೆ.
ಶಿವಕುಮಾರ,
ಬೋರಾಳ ಗ್ರಾಮದ ನಿವಾಸಿ
ಔರಾದ ತಾಲೂಕಿನಲ್ಲಿ ರಸ್ತೆ ಮಧ್ಯೆದಲ್ಲಿಯೇ ಎಷ್ಟು ಮೂರ್ತಿಗಳು ಇವೇ ಎನ್ನುವುದು ನಮ್ಮ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲ. ಅಂಥವುಗಳ ಬಗ್ಗೆ ಸರ್ವೇ ಮಾಡಿಲ್ಲ. ರಸ್ತೆಯ ಮಧ್ಯದಲ್ಲಿ ಮೂರ್ತಿಗಳು ಇರುವುದರಿಂದ ಪ್ರತಿವರ್ಷ ನಾಲ್ಕು-ಐದು ಜನರು ಸಾಯುತ್ತಿದ್ದಾರೆ.
ವೆಂಕನಗೌಡ ಪಾಟೀಲ,
ಭಾಲ್ಕಿ ಡಿಚೈಎಸ್‌ಪಿ
ನೆರೆಯ ಮಹಾರಾಷ್ಟ್ರದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯ ಪಕ್ಕದಲ್ಲಿ ಸೂಚನೆ ಫಲಕಗಳನ್ನು ಕಡ್ಡಾಯವಾಗಿ ಹಾಕುತ್ತಾರೆ. ಆದರೆ ನಮ್ಮ ತಾಲೂಕಿನಲ್ಲಿ ಸೂಚನೆ ಫಲಕಗಳು ಇಲ್ಲದಿರುವುದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ.
ದಯಾನಂದ ಘೋಳೆ,
ಔರಾದ ನಿವಾಸಿ
ರವೀಂದ್ರ ಮುಕ್ತೇದಾರ