ಬೆಂಗಳೂರು: ಯಾವುದೇ ಸರ್ಕಾರ ದಕ್ಷ, ಪಾರದರ್ಶಕ ಆಡಳಿತ ನಡೆಸಲು ಅಗತ್ಯ ಸುಧಾರಣೆ ಯೋಜನೆಗಳನ್ನು ರೂಪಿಸಬೇಕಿದ್ದರೆ ಅಂಕಿ-ಅಂಶ ಅತಗತ್ಯ ಎಂದು ಕೇಂದ್ರ ಕಾರ್ಯಕ್ರಮ ಅನುಷ್ಠಾನ ಹಾಗೂ ಸಾಂಖ್ಯೀಕ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು. ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಸಾಂಖ್ಯೀಕ ಇಲಾಖೆ ಆಯೋಜಿಸಿದ್ದ “ಮೈಕ್ರೋ ಡಾಟಾ ಪ್ರಸರಣ ಕಾರ್ಯಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಅಥವಾ ಕೇಂದ್ರ ಸರ್ಕಾರವು ಯಾವುದೇ ಯೋಜನೆ ಜಾರಿಗೆ ತರಬೇಕಾದರೆ ವಾಸ್ತವಕ್ಕೆ ಹತ್ತಿರವಾದ ಹಾಗೂ ವಿಶ್ವಾಸಾರ್ಹ ಅಂಕಿ-ಅಂಶ ಅಗತ್ಯ. ಹೀಗಾಗಿ ವಿಶ್ವ ಗುಣಮಟ್ಟದ ಅಂಕಿ ಅಂಶಗಳ ನಿರ್ವಹಣೆಗೆ ಅನುಕೂಲವಾಗುವಂತೆ ಆನ್‌ಲೈನ್ ಮೂಲಕ ಅವುಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಈ ಹಿಂದೆ ಪಾಲಿಕೆ, ರಾಜ್ಯ, ಕೇಂದ್ರದ ಬಳಿ ಇರುವ ಅಂಕಿ-ಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿತ್ತು. ಹೀಗಾಗಿ ವೆಬ್‌ಫೋರ್ಟಲ್ ಮೂಲಕ ಅಂಕಿ-ಅಂಶ ಸಂಗ್ರಹ ನಡೆಸುತ್ತಿದ್ದು, ಕರಾರುವಕ್ಕಾದ ಹಾಗೂ ಒಂದೇ ಅಂಕಿ ಅಂಶಗಳನ್ನು ಎಲ್ಲಾ ಹಂತದಲ್ಲೂ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸದಾನಂದಗೌಡ ಹೇಳಿದರು.
ದೇಶದ ಎಲ್ಲಾ ಮಾರುಕಟ್ಟೆಗಳಲ್ಲೂ ಕನ್ಸೂéಮರ್ ಪ್ರೈಸ್ ಇಂಡೆಕ್ಸ್ ಅಂಕಿ-ಅಂಶ, ಕೈಗಾರಿಕೆಗಳ ಸಮೀಕ್ಷೆ, ಉತ್ಪಾದನಾ ಪ್ರಮಾಣದ ಅಂಕಿ-ಅಂಶ, ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಮಿಕರ ಸರ್ವೇ ಕಾರ್ಯ, ಜತೆಗೆ ಸೇವಾ ವಲಯದ ಅಂಕಿ ಅಂಶ ಸಂಗ್ರಹಣೆಗೂ ಮುಂದಾಗಿದ್ದೇವೆ ಎಂದು ಹೇಳಿದರು.
ರಾಜ್ಯದಿಂದ ಸಂಪೂರ್ಣ ನೆರವು: ರಾಜ್ಯ ಯೋಜನೆ, ಸಾಂಖ್ಯೀಕ ಹಾಗೂ ವಿಜ್ಞಾನ, ತಂತ್ರಜ್ಞಾನ ಖಾತೆ ಸಚಿವ ಎಂ.ಆರ್.ಸೀತಾರಾಂ ಅವರು ಮಾತನಾಡಿ, ಕೇಂದ್ರದ ಅಂಕಿ-
ಅಂಶಗಳ ಇಲಾಖೆ ರಾಜ್ಯದಲ್ಲಿ ದತ್ತಾಂಶ ದಾಖಲೀಕರಣ ಕಂಪ್ಯೂಟರ್ ಕೇಂದ್ರ ಆರಂಭಿಸುತ್ತಿರುವುದು ಸಂತಸವನ್ನು ತಂದಿದೆ ಎಂದು ಹೇಳಿದರು. ಈ ಹಿಂದೆ ರಾಜ್ಯ ಅಂಕಿ-ಅಂಶಗಳ ಇಲಾಖೆ ವತಿಯಿಂದ ರಾಜ್ಯಾದ್ಯಂತ 7,600 ವಿದ್ಯಾರ್ಥಿವಸತಿ ನಿಲಯ ಪರಿಶೀಲಿಸಿ ನಾಲ್ಕು ತಿಂಗಳಲ್ಲಿ ಸಮರ್ಪಕ ವರದಿ ನೀಡಲಾಗಿದೆ.
ಇಂತಹ ಕ್ರಮಗಳಿಂದಾಗಿ ಸಮಸ್ಯೆ ಬಗೆಹರಿಸಲು, ಹೊಸ ಯೋಜನೆ ಶುರು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ವೇಳೆ ಕೇಂದ್ರದ ಸಾಂಖ್ಯೀಕ ಇಲಾಖೆ ನಿರ್ದೇಶಕ ಡಾ.ಮನ್ನಾ, ಕಂಪ್ಯೂಟರ್ ಸೆಂಟರ್ ನಿರ್ದೇಶಕ ಪಂಚಣದಾಸ್, ರಾಜ್ಯ ಸಾಂಖ್ಯೀಕ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ನಿರ್ದೇಶಕ ಸುಬ್ರಹ್ಮಣ್ಯ ಹಾಜರಿದ್ದರು.