Advertisement
ಸದಾಶಿವನಗರ ನಿವಾಸದ ಬಳಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ”ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದ್ದು, ಕರ್ನಾಟಕದ ಸ್ವಾಭಿಮಾನ ಉಳಿಸಲು ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದೆ. ಅಂದು ಬ್ರಿಟೀಷರ ವಿರುದ್ಧ ಹೋರಾಡಲು ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಬೆಳಗಾವಿಯಿಂದ ನಾವು ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ ”ಎಂದರು.
Related Articles
Advertisement
ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂದು ಕೇಳಿದಾಗ, ‘ಈ ಹೆದ್ದಾರಿಗೆ ಅನುಮತಿ ನೀಡಿದ್ದು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗಿತ್ತು. ಈ ಹೆದ್ದಾರಿಗೆ ಸರ್ವೀಸ್ ರಸ್ತೆ ಮಾಡಬೇಕಿದ್ದು, ಅದನ್ನು ಮಾಡಲಿ. ಹಳ್ಳಿ ಜನ ಈ ಕಡೆಯಿಂದ ಆ ಕಡೆಗೆ ಹೋಗಲು 15-20 ಕಿ.ಮೀ ಸಂಚಾರ ಮಾಡಬೇಕಿದೆ. ಈ ಸರ್ವೀಸ್ ರಸ್ತೆ ಮಾಡಿಸಿ ನಂತರ ಟೋಲ್ ಸಂಗ್ರಹಿಸಲಿ. ಈ ರಸ್ತೆಯ ಗುಣಮಟ್ಟ ಉತ್ತಮವಾಗಿಲ್ಲ. ಪ್ರಧಾನಿಗಳಿಂದ ಉದ್ಘಾಟನೆ ಮಾಡಿಸಿ ರೋಡ್ ಶೋ ಮಾಡಲು ತರಾತುರಿಯಲ್ಲಿ ರಸ್ತೆ ಮಾಡಲಾಗಿದೆ. ಬೆಂಗಳೂರು ಬಿಟ್ಟರೆ ಮೈಸೂರು ತಲುಪುವವರೆಗೂ ಎಲ್ಲೂ ವಿಶ್ರಾಂತಿಗೆ ಅವಕಾಶವಿಲ್ಲ. ಮಧುಮೇಹ ಸಮಸ್ಯೆ ಇರುವವರ ಗತಿ ಏನು? ರಾಮನಗರ, ಮಂಡ್ಯ, ಚನ್ನಪಟ್ಟಣ, ಮದ್ದೂರಿನ ಹೊಟೇಲ್ ವ್ಯಾಪಾರಸ್ಥರನ್ನು ನಾಶ ಮಾಡಲಾಗಿದೆ’ ಎಂದರು.
ಮಾ.9 ರಂದು ದ್ವಿತೀಯ ಪಿಯುಸಿ ಮೊದಲ ಪರೀಕ್ಷೆ ಇದ್ದು, ಬಂದ್ ಕರೆದಿರುವ ಬಗ್ಗೆ ಕೇಳಿದಾಗ, ‘ನಾವು ದ್ವಿತೀಯ ಪಿಯುಸಿ ಪರೀಕ್ಷೆ, ಶೈಕ್ಷಣಿಕ ಸಂಸ್ಥೆಗಳು, ಸಾರಿಗೆ ಹಾಗೂ ಆಸ್ಪತ್ರೆ ಸೇವೆಗಳಿಗೆ ಅಡ್ಡಿಪಡಿಸುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಕೇವಲ ವ್ಯಾಪಾರ ವಹಿವಾಟಗಳನ್ನು 2 ಗಂಟೆಗಳ ಕಾಲ ಬಂದ್ ಮಾಡಿ ಭ್ರಷ್ಟ ಸರ್ಕಾರ ಕಿತ್ತೊಗೆಯಲು ಸಹಕಾರ ನೀಡಿ ಎಂದು ಮನವಿ ಮಾಡಿದ್ದೇವೆ’ ಎಂದರು.
ಸಚಿವ ನಾರಾಯಣಗೌಡರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಕೆ.ಆರ್ ಪೇಟೆಯಲ್ಲಿ ಗಲಾಟೆ ನಡೆದಿರುವ ಬಗ್ಗೆ ಕೇಳಿದಾಗ, ‘ನಾರಾಯಣ ಗೌಡರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ನಮ್ಮ ಜತೆ ಮಾತನಾಡಿಲ್ಲ. ಯಾರು ಯಾರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿದೆ. ನಮ್ಮ ಪಕ್ಷದಲ್ಲಿನ ಗೊಂದಲ ನಾವು ಸರಿಪಡಿಸಿಕೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಸಚಿವ ಸೋಮಣ್ಣ ಕಾಂಗ್ರೆಸ್ ಸೇರುವ ಮಾತುಕತೆ ನಡೆಸಿದ್ದಾರಾ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸೋಮಣ್ಣ ಅವರು ನಮ್ಮ ಜತೆ ಈ ವಿಚಾರವಾಗಿ ಮಾತನಾಡಿಲ್ಲ. ಕನಕಪುರದಲ್ಲಿ ವಸತಿ ಸಚಿವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಪತ್ರ ಬರೆದಿದ್ದಾರೆ. ಸಮಯ ನೋಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯತ್ನಿಸುತ್ತೇನೆ’ ಎಂದರು.
ಪಕ್ಷ ಬಿಟ್ಟು ಹೋದವರಲ್ಲಿ ಬಹುತೇಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಕುಮಾರಸ್ವಾಮಿ ಅವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ. ನಮ್ಮ ನಾಯಕತ್ವ ಒಪ್ಪಿ ಪಕ್ಷಕ್ಕೆ ವಾಪಸ್ ಬರುವುದಾದರೆ ನಂತರ ಚರ್ಚೆ ಮಾಡೋಣ’ ಎಂದರು.