ಕಲಬುರಗಿ: ಜನ ವಿರೋಧಿಯಾದ ಬಿಜೆಪಿ ಸರ್ಕಾರಗಳು ಹೋರಾಟ ಮತ್ತು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿ ಬೂತ್‌ನಲ್ಲಿ “ನಾರಿಶಕ್ತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ| ಪುಷ್ಪಾ ಅಮರನಾಥ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಕಾಂಗ್ರೆಸ್‌ನ್ನು ಕೇಡರ್ ಬೇಸ್ ಮಾಡಲು ಈಗಾಗಲೇ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಳ್ಳಲಾಗಿದೆ. ಈಗಾಗಲೇ 9 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ 10 ಜನರ ಮಹಿಳಾ ತಂಡ ಕಟ್ಟಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದರು.
ದೇಶದಲ್ಲಿ ಬಿಜೆಪಿ ಅಧಿಕಾರ ಬಂದ ನಂತರ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಒಂದಿಲ್ಲ ಒಂದು ಚಳವಳಿ ನಡೆಯುತ್ತಲೇ ಇವೆ. ಬಿಜೆಪಿ ಸರ್ಕಾರದಿಂದ ಕಾರ್ಪೊರೇಟ್ ವಲಯ ಮಾತ್ರವೇ ಖುಷಿಯಾಗಿದ್ದು, ಉಳಿದಂತೆ ಬಡವರು, ಮಧ್ಯವರ್ಗದವರು, ಶ್ರಮಿಕರು ಸಂಕಷ್ಟ ಬದುಕು ನಡೆಸುವಂತೆ ಆಗಿದೆ ಎಂದರು.
ಇದನ್ನೂ ಓದಿ:ವಿಸಿಟಿಂಗ್ ಕಾರ್ಡ್‌ಗಾಗಿ ಅವಕಾಶ ಕೊಡಬೇಕಿತ್ತಾ : ಜಿ.ಟಿ ದೇವೇಗೌಡ ಅವರಿಗೆ HDK ಪ್ರಶ್ನೆ
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಇಂತಹ ಜನವಿರೋ ಧಿ ಸರ್ಕಾರ ಮತ್ತು ಅದರ ನೀತಿಗಳ ವಿರುದ್ಧ ಮಹಿಳಾ ಕಾಂಗ್ರೆಸ್ ಗಲ್ಲಿ-ಗಲ್ಲಿಯಲ್ಲಿ ಹೋರಾಟ ನಡೆಸಲಿದೆ. ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತನ ಬಳಿಗೆ ಅಭಿಯಾನ ನಡೆಸಲಾಗುವುದು. ರೈತ ಮಹಿಳೆಯರೊಂದಿಗೆ ಶ್ರಮದಾನ, ಸಹಭೋಜನ ನಡೆಸಿ ಅವರ ಕಷ್ಟಸುಖದ ಬಗ್ಗೆ ಚರ್ಚಿಸುವುದರ ಜತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬಲಾಗುವುದು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವಲ್ಲಿ ಕಾಂಗ್ರೆಸ್ ಪಾತ್ರ ಪ್ರಮುಖವಾಗಿದೆ. ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ದೊರೆತಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ. ಈಗಲೂ ಮಹಿಳಾ ಮೀಸಲಾತಿಗೆ ಬಿಜೆಪಿ ವಿರೋಧಿ ನೀತಿ ಹೊಂದಿದೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಕೆಲಸ ಮಾಡುವ ಮಹಿಳೆಯರಿಗೆ ಪಕ್ಷದಲ್ಲಿ ಸ್ವಾಗತವಿದೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಲತಾ ರವಿ ರಾಠೊಡ, ಚಂದ್ರಿಕಾ ಪರಮೇಶ್ವರ, ಸವಿತಾ ಸಜ್ಜನ್, ಲತಾ ಮಲ್ಲಿಕಾರ್ಜುನ, ವನೀಲಾ ಸೂರ್ಯವಂಶಿ, ರೇಣುಕಾ ಚವ್ಹಾಣ ಇದ್ದರು.