Advertisement

ರಾಜ್ಯಾದ್ಯಂತ ಸಾಂಕ್ರಾಮಿಕ ರೋಗ ಭೀತಿ; ಕರಾವಳಿಯಲ್ಲಿ ಮಲೇರಿಯಾ ಆತಂಕ 

03:45 AM Jun 25, 2017 | |

ಬೆಂಗಳೂರು: ರಾಜ್ಯಾದ್ಯಂತ  ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದ್ದು ಮಲೇರಿಯಾ, ಚಿಕನ್‌ಗುನ್ಯಾ, ಡೆಂಘೀ , ಎಚ್‌1-ಎನ್‌1 ಪ್ರಕರಣಗಳು ಹೆಚ್ಚಾಗಿವೆ.

Advertisement

ಆರು ತಿಂಗಳಲ್ಲಿ ಎಚ್‌1-ಎನ್‌1 ನಿಂದಲೇ 15 ಮಂದಿ ಮೃತಪಟ್ಟಿದ್ದು, ರಾಜ್ಯಾದ್ಯಂತ 2,211 ಮಂದಿಗೆ ಎಚ್‌1 ಎನ್‌1 ಸೋಂಕು ತಾಕಿರುವ ಪ್ರಕರಣಗಳು ದೃಢಪಟ್ಟಿವೆ.

ಎಚ್‌1 ಎನ್‌1 ಗೆ ಬಿಬಿಎಂಪಿ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರಿನಲ್ಲಿ ತಲಾ ಇಬ್ಬರು, ಮೈಸೂರು, ಬಳ್ಳಾರಿ, ಉತ್ತರ ಕನ್ನಡ,ಬೆಳಗಾವಿ, ತುಮಕೂರು, ಕೋಲಾರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಬ್ಬರು ಎಚ್‌1-ಎನ್‌1ನಿಂದ ಮೃತರಾಗಿದ್ದಾರೆ.  ಹಾಗೆಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ 819, ಬೆಂಗಳೂರು ನಗರದಲ್ಲಿ 198, ಮೈಸೂರಿನಲ್ಲಿ 257, ಉಡುಪಿಯಲ್ಲಿ 151, ಶಿವಮೊಗ್ಗದಲ್ಲಿ 137 ಸೇರಿದಂತೆ ರಾಜ್ಯದಲ್ಲಿ 2211 ಮಂದಿ  ಎಚ್‌1-ಎನ್‌1 ಜ್ವರದಿಂದ ಬಳಲುತ್ತಿದ್ದಾರೆ.

ಮಳೆ ಕಡಿಮೆಯಾಗಿರುವುದರಿಂದ ಸೊಳ್ಳೆಯ ಉತ್ಪತ್ತಿ ಹೆಚ್ಚಾಗಿದ್ದು ಜತೆಗೆ ವಾತಾರಣದಲ್ಲಿ ಸ್ವಲ್ಪಮಟ್ಟಿನ ಏರುಪೇರಾಗಿರುವುದರಿಂದ ಜ್ವರ,  ಕೆಮ್ಮು, ಶೀತ, ತಲೆನೋವು ಮತ್ತು ಮೈ ಕೈ ನೋವು ಪ್ರ‌ಕರಣಗಳು ಸಾಮಾನ್ಯವಾಗಿದೆ. ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಪ್ರಮಾಣದಲ್ಲೂ ದಿನೇ ದಿನೇ ಏರಿಕೆ ಕಂಡು ಬರುತ್ತಿದೆ.

ಆರೋಗ್ಯ ಇಲಾಖೆಯಿಂದ ಈ ವರ್ಷ 6,939 ಮಂದಿಯ ರಕ್ತ ಪರೀಕ್ಷೆ ಮಾಡಿದ್ದು, ಅದರಲ್ಲಿ 1,512 ಮಂದಿಗೆ ಡೇಂ  ಸೋಂಕು ಇರುವುದು ದೃಢಪಟ್ಟಿದೆ. ದಾವಣಗೆರೆಯಲ್ಲಿ 138, ಮೈಸೂರಿನಲ್ಲಿ 170, ಉಡುಪಿಯಲ್ಲಿ 149, ಮಂಡ್ಯದಲ್ಲಿ 102, ಚಿತ್ರದುರ್ಗದಲ್ಲಿ 95 ಪ್ರಕರಣಗಳು ದಾಖಲಾಗಿವೆ.

Advertisement

ಚಿಕನ್‌ಗುನ್ಯಾಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ 2,374 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 304 ಮಂದಿಗೆ ಚಿಕನ್‌ಗುನ್ಯಾ ಇರುವುದು ಸಾಬೀತಾಗಿದೆ. ಚಾಮರಾನಗರದಲ್ಲಿ 54, ಚಿತ್ರದುರ್ಗದಲ್ಲಿ 51, ತುಮಕೂರಿನಲ್ಲಿ 37, ಮಂಡ್ಯದಲ್ಲಿ 36 ಹೀಗೆ ವಿವಿಧ ಜಿಲ್ಲೆಗಳಲ್ಲಿ ಐದಾರು ಪ್ರಕರಣ ಪತ್ತೆಯಾಗಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಬೀದರ್‌, ಯಾದಗಿರಿ, ಕಲಬುರಗಿ ರಾಮನಗರ ಮೊದಲಾದ ಜಿಲ್ಲೆಯಲ್ಲಿ ಚಿಕನ್‌ಗುನ್ಯಾ ಪ್ರಕರಣ ಪತ್ತೆಯಾಗಿಲ್ಲ.

ಈ ಮಧ್ಯೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರಕನ್ನಡದಲ್ಲಿ ಇಲಿ ಜ್ವರದ ಪ್ರಮಾಣವೂ ಹೆಚ್ಚಾಗಿದೆ. ಮತ್ತೂಂದೆಡೆ ಕರಾವಳಿಯಲ್ಲಿ ಮಲೇರಿಯಾ ಭೀತಿ ಎದುರಾಗಿದೆ.

ಮಲೇರಿಯಾಗೆ ಸಂಬಂಧಿಸಿದಂತೆ ಈ ವರ್ಷ 37,68,673 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದ್ದು, 1,672 ಮಂದಿಗೆ ಮಲೇರಿಯಾ ಇರುವುದು ದೃಢಪಟ್ಟಿದೆ. ಅದರಲ್ಲಿ ಉಡುಪಿ ಜಿಲ್ಲೆಯಲ್ಲಿ  111, ದಕ್ಷಿಣ ಕನ್ನಡದಲ್ಲಿ 1046, ಗದಗದಲ್ಲಿ  65, ಕೊಪ್ಪಳದಲ್ಲಿ 59, ಬಾಲಕೋಟೆಯಲ್ಲಿ 50 ಸೋಂಕಿರುವ ಪ್ರಕರಣದ ಪತ್ತೆಯಾಗಿದೆ. ಮಲೇರಿಯಾ ಪೀಡಿತರಲ್ಲಿ ಬಹುಪಾಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೇ ಇದ್ದಾರೆ.

ವಾತಾವರಣದಲ್ಲಿ ಏರುಪೇರು
ಬಿಟ್ಟು ಬಿಟ್ಟು ಮಳೆ, ಬಿಸಿಲು ಬರುವುದರಿಂದ ಮತ್ತು ಶೀತಗಾಳಿ ಬೀಸುವುದರಿಂದ ವಾತಾವರಣದಲ್ಲಿ ಸ್ವಲ್ಪಮಟ್ಟಿನ ಏರುಪೇರಾಗುತ್ತದೆ. ಜ್ವರ, ಶೀತಾ, ಕೆಮ್ಮು, ಮೈ-ಕೈ ನೋವು ಇತ್ಯಾದಿ  ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕರಾವಳಿ ಭಾಗದಲ್ಲಿ ಮಳೆ ಆಗುತ್ತಿದೆ. ಸೊಳ್ಳೆಗಳಿಂದ ಹರಡುವ ರೋಗಕ್ಕೂ ವಾತಾವರಣದಲ್ಲಿ ಏರುಪೇರಾಗಿರುವುದಕ್ಕೂ ಯಾವ ಸಂಬಂಧವೂ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ರೋಗಿಗಳ ಸಂಖ್ಯೆ ಹೆಚ್ಚಳ:
ಬೆಂಗಳೂರು ನಗರ, ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿ ದಾಖಲಾಗಿರುತ್ತಿರುವ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ. ಸಾಮಾನ್ಯ ಜ್ವರ, ಶೀತಾ, ಕೆಮ್ಮು, ಮೈ ಕೈ ನೋವು ಇತ್ಯಾದಿ ಸಣ್ಣಪುಟ್ಟ ರೋಗಕ್ಕೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಸೀಮಿತವಾಗಿಲ್ಲ. ಈ ಅಭಿಯಾನದಲ್ಲಿ ಸಾರ್ವಜನಿಕರು ಭಾಗವಹಿಸಬೇಕು. ಮನೆಯ ಆಸುಪಾಸಿನಲ್ಲಿರುವ ನೀರಿನತೊಟ್ಟೆಯನ್ನು ಆಗಾಗ ಸ್ವತ್ಛಮಾಡುತ್ತಿರಬೇಕು. ತೆಂಗಿನ ಚಿಪ್ಪನ್ನು ಎಲ್ಲಿಯಂದರಲ್ಲಿ ಎಸೆಯಬಾರದು. ಸೊಳ್ಳೆ ಅಧಿಕವಾಗಿದ್ದಲ್ಲಿ, ಸ್ಥಳೀಯ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿ, ಫೋಗ್ಗಿಂಗ್‌ ಮಾಡಿಸಬೇಕು. ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
– ಡಾ.ಪಿ.ಎಲ್‌.ನಟರಾಜ್‌, ನಿರ್ದೇಶಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next